ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು : ಸರ್ಕಾರಕ್ಕೆ ಹೊಸ ತಲೆನೋವು ಶುರು

ಈ ಸುದ್ದಿಯನ್ನು ಶೇರ್ ಮಾಡಿ

Shyamanuru-Shivashanrappa

ದಾವಣಗೆರೆ. ಮಾ.20 : ಲಿಂಗಾಯಿತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಯುದ್ಧ ಮುಗಿಯಿತು ಎನ್ನುವಷ್ಟರಲ್ಲೇ ಅಖಿಲ ವೀರಶೈವ ಮಹಾಸಭಾ ತೀರ್ಮಾನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಯಾವುದೇ ಕಾರಣಕ್ಕೂ ನಾವು ರಾಜ್ಯ ಸರ್ಕಾರ ಸೋಮವಾರ ಸಚಿವ ಸಂಪುಟ ಸಭೆಯಲ್ಲಿತೀರ್ಮಾನವನ್ನು ಒಪ್ಪುವುದಿಲ್ಲ. ವೀರಶೈವ-ಲಿಂಗಾಯತ ಧರ್ಮ ಎಂದು ಶಿಫಾರಸು ಮಾಡಿದರೆ ಮಾತ್ರ ಮಹಾ ಸಭಾದ ಸಮ್ಮತಿ ಇದೆ ಎನ್ನುವ ಮೂಲಕ ವೀರಶೈವ ಮಹಾಸಭಾ ಸರ್ಕಾರಕ್ಕೆ ನೇರವಾಗಿ ಸೆಡ್ಡು ಹೊಡೆದಿದೆ.

ಮಂಗಳವಾರ ದಾವಣಗೆರೆಯಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಗುರು ವಿರಕ್ತ ಮಠದ ಶ್ರೀಗಳೊಂದಿಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಸಭೆಯ ಬಳಿಕ ಜಂಟಿ ಸುದ್ದಿಗೋಷ್ಟಿ ನಡೆಸಿದ ಶಾಮನೂರು ಶಿವಶಂಕರಪ್ಪ , ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮಹಾಸಭಾ ತಿರಸ್ಕರಿಸಿದೆ. ಲಿಂಗಾಯತ ಹಾಗೂ ವೀರಶೈವ ಬೇರೆ ಎಂಬ ಸರ್ಕಾರದ ನಿಲುವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಗೊಂದಲವಿತ್ತು. ಹಾಗಾಗಿ ಮೊದಲ ಆ ನಿರ್ಧಾರವನ್ನು ಸ್ವಾಗತಿಸಿದ್ದೆ. ಈಗ ಇದರಿಂದ ಗೊಂದಲ ಉಂಟಾಗಿರುವುದರಿಂದ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಹಿಂತೆಗೆದುಕೊಳ್ಳಬೇಕಿತ್ತು ಎಂದು ಹೇಳಿದರು. ಬಸವ ತತ್ವಗಳನ್ನು ಒಪ್ಪಿಕೊಂಡವರು ಮಾತ್ರ ಲಿಂಗಾಯಿತರು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಶಾಮನೂರು, ನಾವು ಸೋಮವಾರ ನೀಡಿದ್ದ ಹೇಳಿಕೆಯನ್ನು ಹಿಂಪಡೆಯುತ್ತೇನೆ. ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವುದರಲ್ಲಿ ಮೇಲ್ನೋಟಕ್ಕೆ ಅನ್ಯಾಯವಾಗಿರುವುದು ಕಂಡುಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ನಾವು ಪತ್ರವನ್ನು ಬರೆಯುವುದಿಲ್ಲ. ಇದೇ 23ರಂದು ಬೆಂಗಳೂರಿನಲ್ಲಿ ಪುನಃ ಸಭೆ ಸೇರಿ ಇದರ ಸಾ`ಕ-ಬಾ`ಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಹಿಂದೆ ತೆಗೆದುಕೊಂಡ ನಿಲುವಿಗೆ ಈಗಲೂ ಮಹಾಸಭಾ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.  ಕೇವಲ ಲಿಂಗಾಯತ ಧರ್ಮ ಎಂದು ಶಿಫಾರಸು ಮಾಡಿರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮೊದಲಿನಿಂದಲೂ ಮಹಾಸಭಾ ವೀರಶೈವ-ಲಿಂಗಾಯತ ` ಧರ್ಮಕ್ಕೆ ಬೆಂಬಲ ನೀಡಿದ್ದೆವು. ಕೇವಲ ಕೆಲವರ ಒತ್ತಡಕ್ಕೆ ಮಣಿದು ಲಿಂಗಾಯತ ಧರ್ಮ ಎಂದು ಶಿಫಾರಸು ಮಾಡಲಾಗಿದೆ. ಸಮಾಜದ ಹಿತಾಸಕ್ತಿಗಿಂತ ಇಲ್ಲಿ ಕೆಲವರನ್ನು ತೃಪ್ತಿಪಡಿಸುವುದೇ ಸರ್ಕಾರದ ಮುಖ್ಯ ಗುರಿಯಾಗಿದೆ. ಒಂದಿಬ್ಬರು ತೆಗೆದುಕೊಂಡ ನಿರ್ಧಾರವನ್ನು ಹೇಗೆ ಒಪ್ಪಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಶಾಮನೂರು ಶಿವಶಂಕರಪ್ಪ ಅವರ ನಿರ್ಧಾರದಿಂದ ಸರ್ಕಾರಕ್ಕೆ ಮತ್ತೆ ತಲೆನೋವು ಪ್ರಾರಂಭವಾಗಿದೆ.

Facebook Comments

Sri Raghav

Admin