ಪ್ರಥಮ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್..!?

ಈ ಸುದ್ದಿಯನ್ನು ಶೇರ್ ಮಾಡಿ

Question-Papers
ತುಮಕೂರು,ಫೆ.9-ಪ್ರಥಮ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು ಈ ಪ್ರಶ್ನೆ ಪತ್ರಿಕೆಗಳು ಸಹ 500ರಿಂದ 5000 ರೂ.ವರೆಗೂ ಮಾರಾಟ ಆಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕವನ್ನುಂಟು ಮಾಡಿದೆ. ಈ ಹಿಂದೆ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗಳು ತುಮಕೂರು ನಗರದಲ್ಲಿ ಬಹಿರಂಗಗೊಂಡು ಆರೋಪಿಯನ್ನು ಸಹ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.  ಈ ನಡುವೆ ಪ್ರಥಮ ಪಿಯುಸಿ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡಿದೆ ಎಂದು ಹೇಳಲಾಗುತ್ತಿದ್ದು , ಕಾಲೇಜಿನ ಸಿಬ್ಬಂದಿಗಳ ಕೈವಾಡ ಇರಬಹುದೆಂಬ ಶಂಕೆ ಒಂದು ಕಡೆ ವ್ಯಕ್ತವಾದರೆ ಮತ್ತೊಂದು ಕಡೆ ಬಹಿರಂಗಗೊಂಡಿರುವ ಪ್ರಶ್ನೆ ಪತ್ರಿಕೆಗಳು ಅಸಲಿಯೋ ನಕಲಿಯೋ ಎಂಬ ಗೊಂದಲವಿದೆ.

ಇಂದು ಗಣಿತ ಪರೀಕ್ಷೆಯಿದ್ದು , ಪ್ರಶ್ನೆ ಪತ್ರಿಕೆಯು ಪತ್ರಿಕೆಗೆ ಲಭ್ಯವಾಗಿದೆ. ಆದರೆ ಇದು ಅಸಲಿಯೋ, ನಕಲಿಯೋ ಎಂಬ ಬಗ್ಗೆ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ರೀತಿ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡರೆ ವಿದ್ಯಾರ್ಥಿಗಳು ಆಮಿಷಕ್ಕೊಳಗಾಗಿ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ. ಮೊಬೈಲ್‍ಗಳೊಂದಿಗೆ ವ್ಯವಹಾರ ನಡೆಸುವ ಕ್ರಿಮಿನಲ್‍ಗಳು ಅವರ ದಿಕ್ಕು ತಪ್ಪಿಸುತ್ತಿದ್ದು , ಹಣ ಸಂದಾಯದ ನಂತರ ವಾಟ್ಸಪ್‍ನಲ್ಲಿ ಪ್ರಶ್ನೆ ಪತ್ರಿಕೆ ಸಂದಾಯವಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

PUC

ಈ ವಿಚಾರವಾಗಿ ಪ್ರಾಂಶುಪಾಲರನ್ನು ಸಂದರ್ಶಿಸಿದಾಗ ಪ್ರಶ್ನೆ ಪತ್ರಿಕೆ ಬಯಲಾಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಪ್ರಥಮವಾಗಿ ಅದು ಅಸಲಿಯೋ ಅಥವಾ ನಕಲಿಯೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಕೆಲವರು ವಿನಾಕಾರಣ ಈ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಅವರೇ ನಕಲಿ ಪ್ರಶ್ನೆ ಪತ್ರಿಕೆಗಳನ್ನು ತಯಾರು ಮಾಡಿ ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡುತ್ತಾರೆ. ಇದಕ್ಕೆ ವಿದ್ಯಾರ್ಥಿಗಳು ಕಿವಿಗೊಡಬಾರದು ಎಂದು ಹೇಳಿದರು.
ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡುತ್ತಿರುವ ಜಾಲವನ್ನು ಬೇಧಿಸಿ ಶಿಕ್ಷಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

Facebook Comments

Sri Raghav

Admin