ಪ್ರಧಾನಿಗೆ ಇಂದು 66ನೇ ಹುಟ್ಟುಹಬ್ಬ : ಅಮ್ಮನ ಆಶೀರ್ವಾದ ಪಡೆದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-1 ನವದೆಹಲಿ/ಗಾಂಧಿನಗರ, ಸೆ.17-ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಜನ್ಮದಿನದ ಸಡಗರ-ಸಂಭ್ರಮ. 17ನೇ ಸೆಪ್ಟೆಂಬರ್, 1950ರಂದು ಜನಿಸಿದ ಅವರ 66ನೇ ಹುಟ್ಟುಹಬ್ಬವನ್ನು ದೇಶದ ವಿವಿಧೆಡೆ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಪ್ರಧಾನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.   ರಾಷ್ಟ್ರಪತಿ ಪ್ರಣವ್ ಮುಖರ್ಜಿ, ವೆನಿಜುಲಾ ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಭಾರತ ಭೇಟಿಯಲ್ಲಿರುವ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮೋದಿಗೆ ಶುಭ ಹಾರೈಸಿದ್ದಾರೆ.

Modi-2

ಗುಜರಾತ್‍ನಲ್ಲಿರುವ ಮೋದಿ ಅವರು ಇಂದು ಗಾಂಧಿನಗರದಲ್ಲಿ ತಮ್ಮ ತಾಯಿ ಹೀರಾಬಾಯಿ ಅವರಿಂದ ಆಶೀರ್ವಾದ ಪಡೆದು ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಗುಜರಾತ್ ರಾಜಧಾನಿ ರಾಯಸನ್ ಪ್ರದೇಶದಲ್ಲಿನ ತಮ್ಮ ಸಹೋದರ ಪಂಕಜ್ ಮೋದಿ ಅವರ ನಿವಾಸದಲ್ಲಿ 97 ವರ್ಷದ ತಮ್ಮ ಮಾತೃಶ್ರೀ ಅವರನ್ನು ಪ್ರಧಾನಿ ಭೇಟಿ ಮಾಡಿದರು. ಹೀರಾಬಾಯಿ ಅವರು ಮೋದಿಗೆ ಸಿಹಿ ತಿನಿಸಿ ಮಮತೆಯಿಂದ ಅಶೀರ್ವದಿಸುತ್ತಿದ್ದಂತೆ ಮೋದಿಯವರ ಕಣ್ಣಾಲಿಗಳು ತೇವವಾದವು. ಮಗನ ಉತ್ತುಂಗದ ಕೀರ್ತಿಯನ್ನು ಹಿರಿಯ ಜೀವ ಕೊಂಡಾಡಿತು. ತಮ್ಮ ಕುಟುಂಬ ಪರಿವಾರದೊಂದಿಗೆ 25 ನಿಮಿಷ ಕಾಲ ಸಂತೋಷದಿಂದ ಕಳೆದರು. ನಂತರ ಅವರು ರಾಜಭವನಕ್ಕೆ ತೆರಳಿದರು. ಅಲ್ಲಿ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಜನ್ಮದಿನದ ಶುಭಕೋರಿದರು.

ರಾಜ್ಯದ ವಿವಿಧೆಡೆ ಆಯೋಜಿಸಿರುವ ವಿವಿಧ ಸಮಾರಂಭಗಳು ಮೋದಿ ಪಾಲ್ಗೊಂಡರು. ದಹೋಡ್‍ನ ಲಿಮ್ ಖೇಡಾದಲ್ಲಿ ಬುಡಕಟ್ಟು ಮತ್ತು ದಿವ್ಯಾಂಗ (ವಿಕಲಚೇತನ) ವ್ಯಕ್ತಿಗಳೊಂದಿಗೆ ಪಾಲ್ಗೊಂಡು ತಮ್ಮ ಜನ್ಮದಿನವನ್ನು ಮೋದಿ ಅರ್ಥಪೂರ್ಣವಾಗಿ ಅಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.  ನವಸಾರಿಯಲ್ಲಿ ತಮ್ಮ ಗೌರವಾರ್ಥ ಆಯೋಜಿಸಲಾಗಿರುವ ನಾಲ್ಕು ಗಿನ್ನಿಸ್ ವಿಶ್ವದಾಖಲೆಗಳು ಮತ್ತು ಒಂದು ರಾಷ್ಟ್ರೀಯ ದಾಖಲೆಗಳನ್ನು ಸೃಷ್ಟಿಸುವ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಿ ಮೆರುಗು ನೀಡಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಅವರ ಜನ್ಮದಿನದ ಪ್ರಯುಕ್ತ ಅನೇಕ ವೈವಿಧ್ಯಮಯ ಸಮಾರಂಭಗಳು ನಡೆಯುತ್ತಿವೆ. ತಮಗೆ ಶುಭಾಶಯ ಸಲ್ಲಿಸಿರುವ ಗಣ್ಯಾತಿಗಣ್ಯರು, ಮುಖಂಡರು, ಕಾರ್ಯಕರ್ತರು ಮತ್ತು ದೇಶದ ಜನರಿಗೆ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

 

 

Facebook Comments

Sri Raghav

Admin