ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ಮಾಜಿ ಸಚಿವ ವೀರಪ್ಪ ಮೊಯ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Veerappa-Moily--02

ಬೆಂಗಳೂರು, ಡಿ.11-ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ನನ್ನ ಹತ್ಯೆಗೆ ಪಾಕಿಸ್ತಾನದವರಿಗೆ ಸುಪಾರಿ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ , ಈ ಆರೋಪ ನಿಜವೇ ಆಗಿದ್ದರೆ ಈವರೆಗೆ ಪ್ರಧಾನಿಯಾದವರು ತನಿಖೆ ಏಕೆ ನಡೆಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಅಲ್ಲಿನ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಆಧಾರರಹಿತ ಆರೋಪ ಮಾಡುವುದು ಎಷ್ಟು ಸಮಂಜಸ ಎಂದು ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಸುಪಾರಿ ನೀಡಿದ್ದಾರೆ ಎಂಬ ಮಾಹಿತಿ ಇದ್ದಿದ್ದರೆ ತನಿಖೆ ನಡೆಸಿ ಕ್ರಮಕೈಗೊಳ್ಳಬಹುದಿತ್ತು. ಅದನ್ನು ಮಾಡುವುದು ಬಿಟ್ಟು ಸುಮ್ಮನೆ ಪ್ರಚಾರಕ್ಕಾಗಿ ಈ ರೀತಿ ಅಪಪ್ರಚಾರ ಮಾಡುವುದು ತಪ್ಪು ಎಂದು ಹೇಳಿದರು. ಪ್ರಧಾನಿ ಮೋದಿಯವರ ವರ್ಚಸ್ಸಿನ ಗ್ರಾಫ್ ಇಳಿಕೆಯಾಗುತ್ತಿದೆ. ಇನ್ನು ಅವರು ನಮ್ಮ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೆರವಿಗೆ ಬರುವುದು ಸಾಧ್ಯವಿಲ್ಲ. ಗುಜರಾತ್‍ನಲ್ಲಿ ಮೋದಿಯವರಿಗೆ ಸೋಲಿನ ಭೀತಿ ಕಾಡುತ್ತಿದೆ. ಹತಾಶರಾಗಿ ರಾಹುಲ್‍ಗಾಂಧಿ ಹಾಗೂ ನೆಹರೂ ಕುಟುಂಬದ ಮೇಲೆ ಟೀಕೆ ಮಾಡುತ್ತಿದ್ದಾರೆ. ಪ್ರಧಾನಿ ಸ್ಥಾನದಲ್ಲಿರುವವರು ಈ ಮಟ್ಟಕ್ಕಿಳಿದು ಟೀಕೆ ಮಾಡುವುದನ್ನು ನಾನೆಂದೂ ಕಂಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಬರದ ನೆರವನ್ನು ನೀಡುವಲ್ಲಿ ತಾರತಮ್ಯ ಮಾಡಿದೆ. ಪೆಟ್ರೋಲಿಯಂ ಉತ್ಪನ್ನಗಳಿಂದ 5 ಲಕ್ಷ ಕೋಟಿ ಹಣ ಬಂದಿದೆ. ಆದರೆ ಅದರ ಲಾಭವನ್ನು ಗ್ರಾಹಕರಿಗೆ ವರ್ಗ ಮಾಡದೆ ವಂಚಿಸಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡೂವರೆ ಲಕ್ಷ ಕೋಟಿಯನ್ನು ಸಬ್ಸಿಡಿ ರೂಪದಲ್ಲಿ ಗ್ರಾಹಕರಿಗೆ ನೀಡಿದ್ದೆವು ಎಂದು ಮೊಯ್ಲಿ ತಿಳಿಸಿದರು. ಬ್ರಹ್ಮಪುತ್ರ ಯೋಜನೆ, ಕಾಶ್ಮೀರ ಸುರಂಗ ಮಾರ್ಗ, ನರ್ಮದಾ ಅಣೆಕಟ್ಟು ಎಲ್ಲವನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿತು. ಆದರೆ ಮೋದಿ ಬಂದು ಉದ್ಘಾಟನೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡರು ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದೆ. ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಅವರಿಗೆ ಅಭಿವೃದ್ಧಿಯ ರೂಪುರೇಷೆ ಇಲ್ಲ. ಕೇವಲ ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ. ಇದರಿಂದ ವೋಟು ಗಳಿಕೆಯಾಗುವುದಿಲ್ಲ, ಇಳಿಕೆಯಾಗುತ್ತದೆ ಎಂದು ಹೇಳಿದರು. ರಾಹುಲ್‍ಗಾಂಧಿಯವರು ಗುಜರಾತ್‍ನಲ್ಲಿ ಸಮುದ್ರ ಮಂಥನ ಮಾಡಿದ್ದಾರೆ. ಇದರಿಂದ ಪ್ರಧಾನಿಯವರು ಶೇಕ್ ಆಗಿದ್ದಾರೆ ಎಂದು ಅವರ ಮಾತುಗಳಿಂದ ತಿಳಿಯುತ್ತದೆ ಎಂದು ತಿಳಿಸಿದರು. ಇವಿಎಂ ದುರುಪಯೋಗವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಮುಖಂಡರು ಈ ಬಗ್ಗೆ ಗಮನಹರಿಸಬೇಕೆಂದು ಅವರು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin