ಪ್ರಧಾನಿ ಮೋದಿ ವಿರುದ್ಧ ಕೆಂಡ ರಾಜ್ಯ ಕಾಂಗ್ರೆಸ್ ನಾಯಕರಿಂದ ಟೀಕಾ ಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

Congress

ಬೆಂಗಳೂರು, ಜ.10- ನೋಟು ಅಮಾನೀಕರಣ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಇಂದು ಬೀದಿಗಿಳಿದು ಬೃಹತ್ ಜನಾಗ್ರಹ ರ್ಯಾಲಿ ನಡೆಸಿತು. ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಮಹಾನಗರ ಕಾಂಗ್ರೆಸ್ ಜಂಟಿಯಾಗಿ ಟೌನ್‍ಹಾಲ್ ಮುಂದೆ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ  ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗವಹಿಸಿ ಮೋದಿ ಸರ್ಕಾರದ ತೀರ್ಮಾನ ಟೀಕಿಸಿದರು. ನಂತರ ಬೆಂಗಳೂರು ನಗರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಎರಡು ವರ್ಷದಲ್ಲಿ ಮೋದಿ ಸರ್ಕಾರ ಯಾವ ಸಾಧನೆ ಮಾಡಿಲ್ಲ. ವಿದೇಶಗಳಿಗೆ ಹೋದಾಗ ಭಾರತವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತಾರೆ.

ನೋಟು ಅಮಾನೀಕರಣದಿಂದ ಬಡವರು ಬೀದಿ ಪಾಲಾಗಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಸಿಗದೆ ಹಳ್ಳಿಗೆ ವಾಪಸ್ಸಾದರೆ ಕೂಲಿ ಕೆಲಸವೂ ಸಿಗದೆ ನೇಣು ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 65 ದಿನಗಳಲ್ಲಿ 3.4 ಬಾರಿ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಹಿಟ್ಲರ್ ರೀತಿ ಮೋದಿಯವರು ಬೆಳಗ್ಗೆ ಒಂದು ಸಂಜೆ ಒಂದು ಆದೇಶ ಹೊರಡಿಸುತ್ತಿದ್ದಾರೆ. ಈ ಹೆಣ್ಣುಮಕ್ಕಳು ಬಂಗಾರ ಇಟ್ಟುಕೊಳ್ಳದಂತೆ ಆದೇಶ ತಂದಿದ್ದಾರೆ ಎಂದರು.  ಇಂದಿರಾಗಾಂಧಿಯವರಂತೆ ಮೋದಿಯವರು ಬಡವರ ಕೇರಿಗಳಿಗೆ ಭೇಟಿ ನೀಡಿಲ್ಲ. ಜನಸಾಮಾನ್ಯರ ಕಷ್ಟ ಅರಿತಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಇದು ಸಾಂಕೇತಿಕ ಪ್ರತಿಭಟನೆ ದೆಹಲಿಯಲ್ಲಿ ನಾಳೆ ರಾಹುಲ್‍ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆನಂತರ ಮುಂದಿನ ಹೋರಾಟ ನಡೆಸುವುದಾಗಿ ಹೇಳಿದರು. ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಮಾತನಾಡಿ ಮೋದಿ ಅವರ ಕ್ಯಾಷ್ ಲೆಸ್ ಇಂಡಿಯಾ ಯೋಜನೆಯಿಂದ ವೀಸಾ, ಮಾಸ್ಟರ್‍ಕಾರ್ಡ್, ಅಮೆರಿಕನ್ ಎಕ್ಸ್‍ಪ್ರೆಸ್, ಎಟಿಎಂ ನಂತಜಗರು ಖಾಸಗಿ ಕಂಪೆನಿಗಳಿಗೆ ಜನಸಾಮಾನ್ಯರ ಕಮಿಷನ್ ಹಣ ಹೋಗುತ್ತಿದೆ, ನಮ್ಮ ಹಣ ತೆಗೆದುಕೊಳ್ಳಲು ನಾವೇ ಸಾಲುನಿಲ್ಲಬೇಕು. ಹಳ್ಳಿಗಳಲ್ಲಿ ಎಟಿಎಂಗಳಿಲ್ಲ. ಯಾವ ಪುರುಷಾರ್ಥಕ್ಕೆ ಕ್ಯಾಷ್‍ಲೆಸ್ ಇಂಡಿಯಾ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಮೋದಿಯವರು ತಮ್ಮ ಮನೆಯವರನ್ನೇ ನೋಡಿಕೊಳ್ಳಲಾಗದೆ ಬೀದಿಗೆ ಬಿಟ್ಟಿದ್ದಾರೆ. ಹೆತ್ತ ತಾಯಿಯನ್ನು ಒಂದು ದಿನವೂ ಮನೆಗೆ ಕರೆಸಿಕೊಂಡಿಲ್ಲ. ಮೋದಿ ಅವರನ್ನ ಟೀಕಿಸಿದರೆ ದೇಶ ದ್ರೋಹಿ ಎನ್ನುತ್ತಾರೆ. ನಾವು ಕಾಂಗ್ರೆಸಿಗರು. ದೇಶ ಭಕ್ತರು ಎಂದು ಹೇಳಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ನೋಟು ಅಮಾನೀಕರಣದಿಂದ ಜಿಡಿಪಿಯಲ್ಲಿ ಶೇ.1ರಷ್ಟು ಕುಸಿತ ವಾಗಲಿದೆ. ಸುಮಾರು 2 ಕೋಟಿ ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನೆಗಡಿ ಆದರೆ, ಮೂಗುಕೊಯ್ಯುವಂತೆ ಮೋದಿ ಕೆಲವು ನಿರ್ಧಾರ ಕೈಗೊಂಡಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳ ಹಿತಾಸಕ್ತಿಗಾಗಿ, ಬೆಂಗಳೂರಿಗೆ ಕೆಟ್ಟ ಹೆಸರು ತರಲು ಇಲ್ಲಿ ಏನೂ ಆಗಿಲ್ಲದಿದ್ದರೂ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಕಪ್ಪುಹಣ್ಣ, ಭ್ರಷ್ಟಾಚಾರ ನಿಯಂತ್ರಣ, ಭಯೋತ್ಪಾದಕರಿಗೆ ಹಣ ಹೋಗುವುದನ್ನು ತಡೆಯಲು ನೋಟು ಅಮಾನೀಕರಣ ಮಾಡಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಕಾಶ್ಮೀರದಲ್ಲಿ ನಿರಂತರವಾಗಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿವೆ. ಶ್ರೀಮಂತರು ನೆಮ್ಮದಿಯಾಗಿದ್ದಾರೆ. ನೋಟು ಅಮಾನೀಕರಣದಿಂದ ಯಾವ ಬದಲಾವಣೆ ಆಗಿಲ್ಲ. ಜನಸಾಮಾನ್ಯರು ಮಾತ್ರ ತೊಂದರೆಗೀಡಾಗಿದ್ದಾರೆ. 50 ದಿನಗಳಲ್ಲಿ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದರು. ಇಂದಿಗೆ 65 ದಿನವಾದರೂ ಸಮಸ್ಯೆ ಜೀವಂತವಾಗಿದೆ. ಕರ್ನಾಟಕ ಸರ್ಕಾರಕ್ಕೆ 3ರಿಂದ 4 ಸಾವಿರ ಕೋಟಿ ಆದಾಯ ನಷ್ಟವಾಗಿದೆ. ಜತೆಗೆ ಸಹಾರ ಮತ್ತು ಬಿರ್ಲಾ ಕಂಪೆನಿಗಳಿಂದ ಮೋದಿಯವರು 52 ಕೋಟಿ ರೂ. ಲಂಚ ಪಡೆದಿರುವ ಆರೋಪ ಇದೆ. ಇದೆಲ್ಲದರ ಹೊಣೆ ಹೊತ್ತು ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ಮೇಲಿನ ಆರೋಪಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷದ್ ಮಾತನಾಡಿ, ನೋಟು ರದ್ದು ಮಾಡಿರುವುದನ್ನು ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಮೊದಲೇ ತಿಳಿಸಿತ್ತು. ಶ್ರೀಮಂತರು ನೆಮ್ಮದಿಯಾಗಿದಾರೆ. ಬಿಜೆಪಿ ನಾಯಕರ ಬಳಿ ಕ್ಯಾಷ್‍ಫುಲ್ ಇದೆ. ಆದರೆ, ಜನರ ಬಳಿ ಕ್ಯಾಷ್‍ಲೆಸ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ ಇಂದು ಸಾಂಕೇತಿಕ ಮುಷ್ಕರ ಮಾಡಿದ್ದೇವೆ. ಆದರೆ, ಕೇಂದ್ರ ಸರ್ರ್ಕಾದ ನೋಟು ಬ್ಯಾನ್‍ನಿಂದ ಆಕ್ರೋಶ ಮಡುಗಟ್ಟಿದೆ. ಹಂತ ಹಂತವಾಗಿ ಹೊರಗೆ ಬರಲಿದೆ.

ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಶೇಖರ್, ಶಾಸಕರಾದ ಬೈರತಿ ಬಸವರಾಜು, ಆರ್.ವಿ.ದೇವರಾಜ್, ನಾರಾಯಣಸ್ವಾಮಿ, ಎಐಸಿಸಿ ವೀಕ್ಷಕರಾದ ನಾಬೇಂದ್ರು…., ಮನೋಹರ್ ಮತ್ತಿತರರು ನೇತೃತ್ವ ವಹಿಸಿದ್ದರು. ಪುರಭವನದಿಂದ ಕಂದಾಯ ಭವನದವರೆಗೂ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆ ವೇಳೆ ಪುರಭವನ ಅಕ್ಕಪಕ್ಕ ಸಂಚಾರ ದಟ್ಟಣೆ ತೀವ್ರವಾಗಿ ಪೊಲೀಸರು ಇದನ್ನು ನಿಭಾಯಿಸಲು ಪರದಾಡಬೇಕಾಯಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin