ಪ್ರಧಾನಿ ಮೋದಿ 23 ನೇ ‘ಮನ್ ಕಿ ಬಾತ್’ನ ಸಾರಾಂಶ

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ ಆ.28 : ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿಯಲ್ಲಿ ತಮ್ಮ 23 ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ್ದು, ಪ್ರಕ್ಷುಬ್ಧ ಕಾಶ್ಮೀರದ ವಿಷಯ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಶ್ಮೀರ ಸಮಸ್ಯೆ ಬಗೆಹರಿಸಲು ‘ಏಕತೆ’ ಮತ್ತು ‘ಪ್ರೀತಿ’ಯ ನಡೆ ಅಗತ್ಯ ಎಂದಿದ್ದಾರೆ. ಕಾಶ್ಮೀರದಲ್ಲಿ ಮುಗ್ದ ಮಕ್ಕಳನ್ನು ಹಿಂಸಾಚಾರಕ್ಕೆ ತೊಡಗುವಂತೆ ಪ್ರಚೋದಿಸುತ್ತಿರುವವರು ಮುಂದೊಂದು ದಿನ ಅವರಿಗೆ ಉತ್ತರ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.  ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಯಾವುದೇ ಯುವಕ ಅಥವಾ ಭದ್ರತಾ ಸಿಬ್ಬಂದಿ ಮೃತಪಟ್ಟರೆ ಅದು ದೇಶಕ್ಕೆ ಆಗುವ ನಷ್ಟ ಎಂದರು. ಒಲಿಂಪಿಕ್ಸ್ನಲ್ಲಿ ರಾಷ್ಟ್ರದ ಮಹಿಳಾ ಶಕ್ತಿ ಕುರಿತು ಮಾತನಾಡಿದ ಮೋದಿ, ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಗೆದ್ದ ಪಿ.ವಿ. ಸಿಂಧು, ಕುಸ್ತಿಯಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್, ಜಿನ್ಮ್ಯಾಸ್ಟಿಕ್ನಲ್ಲಿ ನಾಲ್ಕನೇ ಸ್ಥಾನ ಪಡೆದ ದೀಪಾ ಕರ್ಮಾಕರ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜತೆಗೆ, ಇತರ ಕ್ರೀಡೆಗಳಾದ ಹಾಕಿ, ಶೂಟಿಂಗ್, ಬಾಕ್ಸಿಂಗ್ಗಳಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು. ಒಲಿಂಪಿಕ್ಸ್ನಲ್ಲಿನ ನೀರಸ ಪ್ರದರ್ಶನ ತೋರಿರುವ ಬಗ್ಗೆ ಮನದ ಮಾತಿನಲ್ಲಿ ಮಾತನಾಡುವಂತೆ ಸಾವಿರಾರು ಸಂದೇಶಗಳು ಬಂದಿವೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಮುಂಬರುವ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಸಾಧನೆ ಮಾಡಲು ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ. 2020, 2024, 2028ರ ಒಲಿಂಪಿಕ್ಸ್ಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ದೂರದೃಷ್ಟಿ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

ಪರಿಸರ ಸ್ನೇಹಿ ಗಣೇಶ
ವಿದ್ಯಾರ್ಥಿ ಗುಣ ಜಾಗೃತರಾಗಿದ್ದವರು ಉತ್ತಮ ಶಿಕ್ಷಕರಾಗಲು ಸಾಧ್ಯ, ವಿದ್ಯಾರ್ಥಿ-ಶಿಕ್ಷಕರ ಮಧ್ಯೆ ಉತ್ತಮ ಬಾಂಧವ್ಯ ಅಗತ್ಯ ಎಂದ ಅವರು, ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಮುಂಬರುವ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಎಂದು ಕರೆ ಕೊಟ್ಟರು.

ಮಲ್ಲಮ್ಮಳನ್ನು ಪ್ರಶಂಸಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿಯಲ್ಲಿ ತಮ್ಮ 23 ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ್ದು, ರಿಯೋ ಒಲಿಂಪಿಕ್ಸ್ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಬಾಲಕಿಯೊಬ್ಬಳ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಢಾಣಾಪುರದ ಬಾಲಕಿ ಮಲ್ಲಮ್ಮ ಶೌಚಾಲಯ ನಿರ್ಮಾಣದಲ್ಲಿ ಮಾಡಿದ ಸಾಧನೆಗೆ ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.   10ನೇ ತರಗತಿ ಓದುತ್ತಿರುವ ಮಲ್ಲಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಪೋಷಕರಿಗೆ ಹೇಳಿದಾಗ, ಅವರು ನಿರಾಕರಿಸಿದ್ದಾರೆ. ಆದರೆ, ಉಪವಾಸ ಸತ್ಯಾಗ್ರಹ ಕೈಗೊಂಡ ಮಲ್ಲಮ್ಮ ಒಂದೇ ವಾರದಲ್ಲಿ ಶೌಚಾಲಯ ನಿರ್ಮಾಣಕ್ಕೆ ಕಾರಣವಾಗಿದ್ದಾಳೆ. ಆಕೆಯ ಕೆಲಸದಿಂದ ಸ್ಪೂರ್ತಿಯಾದ ಬೇರೆಯವರು ಕೂಡ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ತಿಳಿದುಕೊಂಡ ಪ್ರಧಾನಿ ಮೋದಿ ‘ಮನ್ ಕಿ ಬಾತ್’ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin