ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವ ಖದೀಮರೇ ಎಚ್ಚರ….!

ಈ ಸುದ್ದಿಯನ್ನು ಶೇರ್ ಮಾಡಿ

Question-Papers

ಬೆಂಗಳೂರು,ಫೆ.6 – ಹಣದಾಸೆಗಾಗಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವ ಖದೀಮರೇ ಎಚ್ಚರ….! ಏಕೆಂದರೆ ಅಪ್ಪಿತಪ್ಪಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದಾಗಲಿ ಇಲ್ಲವೇ ಮಾರಾಟ ಮಾಡುವುದು ಕಂಡುಬಂದರೆ ಐದು ವರ್ಷ ಖಾಯಂ ಆಗಿ ಶ್ರೀಕೃಷ್ಣನ ಜನ್ಮ ಸ್ಥಳದಲ್ಲೇ ವಾಸ್ತವ್ಯ ಹೂಡಬೇಕಾಗುತ್ತದೆ.   ಅಲ್ಲದೆ ಈ ಪ್ರಕರಣದಲ್ಲಿ ವಿದ್ಯಾರ್ಥಿಗಳು ಭಾಗಿಯಾದರೆ ಐದು ವರ್ಷ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿರುವುದಿಲ್ಲ. ಜೊತೆಗೆ ಐದು ಲಕ್ಷ ದಂಡ ಕೂಡ ಬೀಳಲಿದೆ.   ಒಂದು ವೇಳೆ ಪೋಷಕರು, ಸಂಬಂಧಿಕರು, ಸ್ನೇಹಿತರು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಶಾಮೀಲಾದರೆ ಅವರಿಗೂ ಕೂಡ 5 ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ದಂಡ ಕಟ್ಟಬೇಕಾಗುತ್ತದೆ.

ವರ್ಷದಿಂದ ವರ್ಷಕ್ಕೆ ಎಸ್ಸೆಸ್ಸೆಲ್ಸಿ , ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷಾ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದರು.  ಹಣ ಮಾಡುವುದು ಒಂದು ಉದ್ದೇಶವಾದರೆ ಮತ್ತೊಂದೆಡೆ ಪರೀಕ್ಷೆಯಲ್ಲಿ ತಮ್ಮ ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕೆಂಬ ಹಪಾಹಪಿಗೆ ಬಿದ್ದ ಪೋಷಕರು ವಾಮಮಾರ್ಗದಲ್ಲಿ ಪ್ರಶ್ನೆ ಪತ್ರಿಕೆಗಳನ್ನೇ ಖರೀದಿ ಮಾಡುವಂತಹ ನೀಚ ಕೃತ್ಯಕ್ಕೂ ಕೈ ಹಾಕಿದ್ದರು.  ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ಮುಂದಾಗಿರುವ ರಾಜ್ಯ ಸರ್ಕಾರ ಇಂದಿನಿಂದ ಆರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ಹೊಸ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿದೆ.

1983ರ ಕರ್ನಾಟಕ ಶಿಕ್ಷಣಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಪ್ರಸಕ್ತ ಅಧಿವೇಶನದಲ್ಲೇ ಈ ಮಸೂದೆಯನ್ನು ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯಲ್ಲಿ ಶಿಕ್ಷಣ ತಜ್ಞರು ವಿವಿಧ ವಲಯಗಳ ಪರಿಣತರು ಸಿದ್ದಪಡಿಸಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಲಾಗಿದೆ.

ವರದಿಯಲ್ಲೇನಿದೆ?:

ಸಮಿತಿ ನೀಡಿರುವ ವರದಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಶಿಫಾರಸು ಮಾಡಲಾಗಿದೆ. ಶಾಲಾ ಕಾಲೇಜುಗಳ ಮುಖ್ಯಸ್ಥರು, ಪೋಷಕರು, ವಿದ್ಯಾರ್ಥಿಗಳು ಈ ದುಷ್ಕøತ್ಯದಲ್ಲಿ ಶಾಮೀಲಾದರೆ ಅಂಥವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಐದು ಲಕ್ಷ ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬೇಕು.  ಇನ್ನು ಯಾವ ಶಾಲಾ ಕಾಲೇಜುಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆಯೋ ಅಂತಹ ಶಿಕ್ಷಣ ಸಂಸ್ಥೆಗೆ ನೀಡಲಾಗುತ್ತಿರುವ ಅನುದಾನವೇನು ಕಡಿತಗೊಳಿಸಬೇಕು. ಅಲ್ಲದೆ ಸಾಧ್ಯವಾದರೆ ಸರ್ಕಾರ ಅದರ ಮಾನ್ಯತೆಯನ್ನೇ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು.

ಟ್ಯೂಷನ್ ಮಾಫಿಯಾ ಹಾವಳಿ ಹೆಚ್ಚಾಗುತ್ತಿದ್ದು , ಸರ್ಕಾರದಿಂದ ಮಾನ್ಯತೆ ಪಡೆದಿದ್ದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಬಹುತೇಕ ಪ್ರಶ್ನೆ ಪತ್ರಿಕೆಗಳು ಖಾಸಗಿ ಮನೆಪಾಠಗಳಲ್ಲೇ ಸೋರಿಕೆಯಾಗುತ್ತಿದ್ದು , ಇಂಥವರ ಮೇಲೆ ಹದ್ದಿನ ಕಣ್ಣಿಡಬೇಕೆಂದು ಸಮಿತಿ ಶಿಫಾರಸ್ಸು ಮಾಡಬೇಕೆಂದು ತಿಳಿದುಬಂದಿದೆ.  ವಾಟ್ಸಪ್ ಹಾಗೂ ಸಾಮಾಜಿಕ ತಾಣಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡುವ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ವಿದ್ಯಾರ್ಥಿ ಐದು ಲಕ್ಷ ದಂಡ ಕಟ್ಟಲು ಸಾಧ್ಯವಾಗದಿದ್ದರೆ ಅಂಥವರಿಗೆ ಐದು ವರ್ಷ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು.

ಈ ಕಾಯ್ದೆಯು ಗುರುವಾರ ಇಲ್ಲವೇ ಶುಕ್ರವಾರ ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಮಂಡನೆಯಾಗಲಿದೆ. ಪ್ರತಿವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಖದೀಮರಿಗೆ ಕಡಿವಾಣ ಬೀಳಲಿದೆ.  ಕಳೆದ ವರ್ಷ ನಡೆದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಭಾರೀ ರಾದ್ದಾಂತವನ್ನೇ ಸೃಷ್ಟಿಸಿತ್ತು. ಮೊದಲು ರಸಾಯನಶಾಸ್ತ್ರ ಸೋರಿಕೆಯಾಗಿದ್ದರೆ ಬಳಿಕ ಭೌತಶಾಸ್ತ್ರ ಸೋರಿಕೆಯಾಗಿತ್ತು. ಈ ಪ್ರಕರಣದಲ್ಲಿ ಪದವಿಪೂರ್ವ ಶಿಕ್ಷಣ ಮಂಡಳಿಯ ಅಧಿಕಾರಿಗಳೇ ಶಾಮೀಲಾಗಿದ್ದರು.  ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದ ನಂತರ ಹಲವು ಖೆಡ್ಡಾಕ್ಕೆ ಬಿದ್ದಿದ್ದರು. ಮೂಲಗಳ ಪ್ರಕಾರ ದ್ವಿತೀಯ ಪಿಯುಸಿಯ ಆರು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಅನೇಕರು ಈಗಲೂ ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin