ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ವಿಶೇಷ ಸಂದರ್ಶನ (Exclusive)

ಈ ಸುದ್ದಿಯನ್ನು ಶೇರ್ ಮಾಡಿ

Tanveer

ಬೆಂಗಳೂರು, ಸೆ.1- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ಸೇಠ್ ಅವರು ಕೂಡ ತಮ್ಮ ತಂದೆ ಹಾಗೂ ಮಾಜಿ ಸಚಿವ ಅಜೀಜ್ ಸೇಠ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಚಿವರಾದ ಕೇವಲ 67 ದಿನಗಳಲ್ಲೇ ಶಿಕ್ಷಣ ಇಲಾಖೆಯ ಮೇಲೆ ಹಿಡಿತ ಸಾಧಿಸಿರುವ ಅವರು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ, ನ್ಯೂನತೆಗಳನ್ನು ಸರಿಪಡಿಸಲು ದಿಟ್ಟ ಹೆಜ್ಜೆ ಇಟ್ಟಿರುವ ದಕ್ಷ ಸಚಿವರಾಗಿದ್ದಾರೆ. 21ನೇ ಶತಮಾನಕ್ಕೆ ತಕ್ಕಂತೆ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ನೀತಿ, ನೇಮಕಾತಿ ನಿಯಮ, ಪರೀಕ್ಷಾ ವ್ಯವಸ್ಥೆ ಮೊದಲಾದವುಗಳಲ್ಲಿ ಬದಲಾವಣೆ ತರುವ ಮೂಲಕ ಸಮಗ್ರ ಸುಧಾರಣೆ ತರಲು ಮುಂದಡಿ ಇಟ್ಟಿದ್ದಾರೆ.

ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಸಮಗ್ರವಾಗಿ ಸುಧಾರಣೆ ತರಲು 1983ರ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಜತೆಗೆ ಕರ್ನಾಟಕ ಶಿಕ್ಷಣ ನೀತಿ 2016ರನ್ನು ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ಸೇಠ್ ತಿಳಿಸಿದ್ದಾರೆ.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಶಿಕ್ಷಣ ತಜ್ಞರು, ಸಾಹಿತಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆಯನ್ನು ಕೂಡ ಪಡೆಯಲಾಗುವುದು ಎಂದರು. ಐಸಿಎಸ್ಸಿ ಹಾಗೂ ಸಿಬಿಎಸ್ಸಿ ಪಠ್ಯಕ್ರಮಕ್ಕೆ ಪೂರಕವಾಗಿ ಶೈಕ್ಷಣಿಕ ಬದಲಾವಣೆ ತರಲು ಉದ್ದೇಶಿಸಲಾಗಿದೆ. ಕೇವಲ ಅಂಕಗಳಿಕೆಗೆ ಶಿಕ್ಷಣ ಸೀಮಿತವಾಗದೆ ಸರ್ವೋತೋಮುಖ ಅಭಿವೃದ್ಧಿ ವಿದ್ಯಾರ್ಥಿಗಳಲ್ಲಿ ಕಂಡು ಬರಬೇಕು.

MCS_9181

ಮತ್ತೊಬ್ಬರಿಗೆ ಸಹಕಾರಿಯಾಗುವ ಪರಿಪಾಠವನ್ನು ಶಿಕ್ಷಣ ನೀಡುವಂತಾಗಬೇಕು. ಶಿಕ್ಷಣ ಇಲಾಖೆಯಲ್ಲಿ ಸಮಗ್ರ ಮಾರ್ಪಾಡು ತರಲು ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಬಾಲವಾಡಿ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ತರಗತಿವಾರು ಶುಲ್ಕ ಪ್ರಕಟಿಸದ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.  ರಾಷ್ಟ್ರೀಯ ಶಿಕ್ಷಣ ನೀತಿ ದೂರದೃಷ್ಟಿಯಿಲ್ಲದ ನೀತಿ ಯಾಗಿದೆ. ಭಾರತೀಯ ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಹೊಸ ಚಿಂತನೆ ಮೂಡಿಸುವ ಶಿಕ್ಷಣ ಬೇಕಾಗಿದೆ. ಆ ಮೂಲಕ ರಾಷ್ಟ್ರಪ್ರೇಮ ಮೂಡಿಸುವುದರ ಜತೆಗೆ ಶಿಸ್ತಿನ ಸಿಪಾಯಿಗಳಂತೆ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕು. ಅದಕ್ಕೆ ಪೂರಕವಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆ:

ಒಂದರಿಂದ 10ನೇ ತರಗತಿವರೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುವುದು, ಐಸಿಎಸ್ಸಿ ಹಾಗೂ ಸಿಬಿಎಸ್ಸಿ ಪಠ್ಯಕ್ರಮಗಳಿಗೆ ಪೂರಕವಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುತ್ತದೆ. ಆಕರ್ಷಣೀಯ ಚಿತ್ರಗಳು ಕೂಡ ಒಳಗೊಂಡಿರುತ್ತದೆ.   ಹೊಸ ಪಠ್ಯಪುಸ್ತಕ ಮುದ್ರಣದ ಟೆಂಡರನ್ನು ನವೆಂಬರ್ನಲ್ಲಿ ಕರೆಯಲು ಉದ್ದೇಶಿಸಲಾಗಿದೆ. ಅಷ್ಟರಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಲಿದೆ. ಪರಿಷ್ಕರಣೆಗಾಗಿ 28 ಉಪಸಮಿತಿಗಳನ್ನು ಕೂಡ ರಚಿಸಲಾಗಿದೆ ಎಂದು ವಿವರಿಸಿದರು. ಶಾಲಾ ಮಕ್ಕಳ ಹೊರೆ ತಗ್ಗಿಸಲು ವಾರ್ಷಿಕ ಪಠ್ಯವನ್ನು ಎರಡು ಭಾಗ ಮಾಡಿ 6 ತಿಂಗಳಿಗೊಂದು ಪುಸ್ತಕವನ್ನು ಬೋಧಿಸಲು ಅವಕಾಶ ಕಲ್ಪಿಸಲಾಗುವುದು.

ಗುಣಮಟ್ಟದ ಸೈಕಲ್ ವಿತರಣೆ:

ಗುಣಮಟ್ಟದ ಸೈಕಲ್ ವಿತರಣೆಗೆ ಆದೇಶಿಸಲಾಗಿದ್ದು, ಯಾವುದೇ ಲೋಪಕ್ಕೂ ಅವಕಾಶವಿಲ್ಲ. ಕಳಪೆ ಸೈಕಲ್ ವಿತರಣೆ ಮಾಡಿದರೆ ಅಂತಹ ಕಂಪೆನಿಗಳ ವಿರುದ್ಧ ಶೇ.1ರಿಂದ 10ರವರೆಗೂ ದಂಡ ವಿಧಿಸಲಾಗುವುದು.  ಅದೇ ರೀತಿ ಶಾಲಾಮಕ್ಕಳ ಶೂ, ಸಾಕ್ಸ್ ವಿಚಾರದಲ್ಲೂ ಗುಣಮಟ್ಟ ಕಾಪಾಡಿಕೊಳ್ಳಬೇಕು. ಒಂದು ವರ್ಷ ಕಾಲ ಗ್ಯಾರಂಟಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಮುಲಾಜಿಲ್ಲದೆ ಕ್ರಮ:

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಸಿಐಡಿ ತನಿಖೆಯ ಅಂತಿಮ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಪಿಯುಸಿ ಪೂರಕ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಿತು. 2.41 ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಿದ್ದು, 5.86ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಫಲಿತಾಂಶ ಯಾವುದೇ ಸಮಸ್ಯೆಯಿಲ್ಲದೆ ಪ್ರಕಟವಾಗಿದೆ.

ಬೀಡುಬಿಟ್ಟವರ ಎತ್ತಂಗಡಿ:

ಪದವಿ ಪೂರ್ವ ಪರೀಕ್ಷಾ ಮಂಡಳಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ.  ಅಧಿಕಾರಿ ಮತ್ತು ಸಿಬ್ಬಂದಿ ಬೆಂಗಳೂರಿನಲ್ಲೇ ಕೇಳಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗುವುದು. ಪರೀಕ್ಷಾ ವ್ಯವಸ್ಥೆಯಲ್ಲಿ ಬಿಗಿಯಾದ ಹಿಡಿತ ಸಾಧಿಸುವ ಮೂಲಕ ಲೋಪ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.

ತರಗತಿಗೆ ಅವಕಾಶ:

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗದಿರುವ ವಿದ್ಯಾರ್ಥಿಗಳು ಮತ್ತೆ ಖಾಸಗಿಯಾಗಿ ಪರೀಕ್ಷೆಗೆ ಹಾಜರಾಗುವ ಪದ್ಧತಿ ಇತ್ತು. ಈಗ ಮತ್ತೆ ಪೇಲಾದ ವಿದ್ಯಾರ್ಥಿಗಳು 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಂತೆ ತರಗತಿಗೆ ಹಾಜರಾಗುವ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಪರಿಹಾರ:

ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಶಾಲಾ ಕಟ್ಟಡ ಕುಸಿದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೃತಪಟ್ಟ ವಿದ್ಯಾರ್ಥಿಗಳ ಪೋಷಕರಿಗೆ ತಲಾ 4 ಲಕ್ಷ ರೂ. ನೀಡಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆ, ನಗರಾಭಿವೃದ್ಧಿ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಾಲಾ ಕಟ್ಟಡದ ಸ್ಥಿತಿಗತಿ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ನೆಲಸಮ ಮಾಡಲು ಆದೇಶಿಸಲಾಗಿದೆ. ಕುಡಿಯುವ ನೀರು ಹಾಗೂ ಶೌಚಾಲಯ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದು ತನ್ವೀರ್ಸೇಠ್ ತಿಳಿಸಿದರು.

ಶಾಲೆಗಳಿಗೆ ಸಂಬಂಧಿಸಿದ ಆಸ್ತಿ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ಶಾಲೆಗಳಲ್ಲಿನ ಆಸ್ತಿಗೆ ಸಂಬಂಧಿಸಿದ ಖಾತೆ ಮತ್ತಿತರ ದಾಖಲಾತಿಗಳನ್ನು ಮಾಡಿಸಿಕೊಳ್ಳುವ ಅಭಿಯಾನವನ್ನು ಆರಂಭಿಸಲಾಗಿದೆ. ಒತ್ತುವರಿಯಾಗಿದ್ದರೆ ತೆರವಿಗೂ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕೇಂದ್ರದಿಂದ ಹಣ ಬಂದಿಲ್ಲ:

ಕಳೆದ ಮೂರು ವರ್ಷಗಳಿಂದ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಈ ವಿಚಾರವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಅವರ ಗಮನಕ್ಕೂ ತಂದು ಪತ್ರ ಬರೆಯಲಾಗಿದೆ. ಪ್ರಸಕ್ತ ಸಾಲಿಗೆ ಈ ಯೋಜನೆಯಡಿ 475 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, 444 ಕೋಟಿ ರೂ. ಮಂಜೂರು ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು. ಸರ್ವಶಿಕ್ಷಣ ಅಭಿಯಾನದಡಿ ನೇಮಕಗೊಂಡಿದ್ದ ಶಿಕ್ಷಕರಿಗೆ ಕಳೆದ 6 ತಿಂಗಳಿನಿಂದ ವೇತನ ನೀಡಿರಲಿಲ್ಲ. ಕೇಂದ್ರ ಸರ್ಕಾರ ಹಣ ನೀಡದೇ ಇರುವುದರಿಂದ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ರಾಜ್ಯ ಸರ್ಕಾರಿ ವೆಚ್ಚದಲ್ಲೇ ಅವರಿಗೆ ವೇತನ ನೀಡಲಾಗಿದೆ.

ವಯೋಮಿತಿ ಮೀರಿದವರಿಗೂ ಅವಕಾಶ:

2015ರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಸ್ಥಗಿತಗೊಳಿಸಿ ಹೊಸ ನೇಮಕಾತಿಯ ಪ್ರಕ್ರಿಯೆ ಪ್ರಾರಂಭಿಸುವುದರಿಂದ ವಯೋಮಿತಿ ಮೀರಿದ 268 ಅಭ್ಯರ್ಥಿಗಳಿಗೂ ಹೊಸ ನೇಮಕಾತಿಯಲ್ಲಿ ಅವಕಾಶ ನೀಡಲಾಗುವುದು. ಬಿಇಒ ಮತ್ತು ಪ್ರಾಂಶುಪಾಲರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುವುದು. 806 ಪ್ರಾಂಶುಪಾಲರ ಹುದ್ದೆಗಳು ಖಾಲಿ ಇದ್ದು, 411 ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಮೂಲಕ ಬಡ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.  ಧಾರವಾಡ ಸಂಚಾರಿ ಪೀಠವು 1727 ಪ್ರೌಢಶಾಲಾ ಶಿಕ್ಷಕರನ್ನು ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊಸದಾಗಿ ರೂಪಿಸಲಾಗುತ್ತಿದೆ. 2007ರ ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಗೊಂದಲವಿದ್ದು, ಈ ಬಾರಿ ಸರಳವಾಗಿ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಾಯಿತು. ಪಿಯುಸಿ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಬಡ್ತಿ ನೀಡುವ ಸಂಬಂಧ ಉನ್ನತ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

728 ಶಾಲೆ ಮರು ಆರಂಭ:

ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ದಪಡಿಸಿ ನಿಯೋಜಿಸಿದ್ದರಿಂದ ಮುಚ್ಚಿ ಹೋಗಿದ್ದ 728 ಶಾಲೆಗಳು ಪುನರಾರಂಭವಾಗಿವೆ. ಶಿಕ್ಷರಿಲ್ಲದ ಗ್ರಾಮೀಣ ಶಾಲೆಗಳಿಗೆ ಶಿಕ್ಷಕರು ದೊರೆಯುವಂತಾಯಿತು. ಹನ್ನೆರಡುವರೆಸಾವಿರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳು 19 ಸಾವಿರಕ್ಕೆ ಹೆಚ್ಚಳವಾದವು. ಇದರಿಂದ 7500 ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಲಾಗುತ್ತಿದೆ ಎಂದರು.

212 ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿ :

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂಬ ಕಾರಣಕ್ಕೆ ಒಬ್ಬ ವಿದ್ಯಾರ್ಥಿ ಇರುವ 212 ಶಾಲೆಗಳನ್ನು ನಡೆಸಲಾಗುತ್ತಿದೆ. 4164 ಶಾಲೆಗಳಲ್ಲಿ 10 ವಿದ್ಯಾರ್ಥಿಗಳಿಗಿಂತ ಕಡಿಮೆ ಸಂಖ್ಯೆ ಇದೆ.  120 ವಿದ್ಯಾರ್ಥಿಗಳಿಗಿಂತ ಹೆಚ್ಚಿರುವ ಶಾಲೆಗಳ ಸಂಖ್ಯೆ 11ಸಾವಿರ ಮಾತ್ರ. ಇನ್ನು 36 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶೇ.32ರಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು. ಕಳೆದ 12 ವರ್ಷದಲ್ಲಿ ಹೊಸ ಸರ್ಕಾರಿ ಶಾಲೆಯನ್ನು ಮಂಜೂರು ಮಾಡಿಲ್ಲ. ಸರ್ಕಾರಿ ಶಾಲೆ ಮಂಜೂರಾತಿಗೆ ಬೇಡಿಕೆ ಇದ್ದರೂ ಕೂಡ ಮಂಜೂರಾತಿ ಮಾಡಿಲ್ಲ ಎಂದು ತಿಳಿಸಿದರು. ಜನವಸತಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮುಚ್ಚಿರುವ ಶಾಲೆಗಳ ಸ್ಥಳಾಂತರ, ಹೊಸ ಶಾಲೆಗಳ ಅವಕಾಶದ ಬಗ್ಗೆ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘ:

ಪ್ರತಿ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕನ್ನಡ ಭಾಷಾ ಕಲಿಕೆಗೆ ಆದ್ಯತೆ ನೀಡಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಲಭ್ಯ ಒದಗಿಸಲಾಗುವುದು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಸಲಹೆಯಂತೆ ಆಂಗ್ಲ ಭಾಷೆಯನ್ನು ಪೂರ್ಣ ಪ್ರಮಾಣದಲ್ಲಿ ಕಲಿಸುವ ಬಗ್ಗೆ ಶಿಕ್ಷಣ ತಜ್ಞರು, ಸಾಹಿತಿಗಳ ಜತೆ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದರು.

ಗ್ರಂಥಾಲಯ ಕೊಡುಗೆ:

ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುವ ಎಲ್ಲಾ ಶಿಕ್ಷಕರಿಗೆ ಪ್ರೋತ್ಸಾಹಿಸುವ ಜತೆಗೆ ಬಹುಮಾನ, ಪ್ರಶಸ್ತಿಯ ಜತೆಗೆ  ಆಯಾ ಶಾಲೆಗಳಿಗೆ ಗ್ರಂಥಾಲಯವನ್ನು ನೀಡಲಾಗುವುದು.
ಗ್ರಂಥಾಲಯಗಳಲ್ಲಿ ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದ ಪುಸ್ತಕಗಳಿರದೆ, ಉದ್ಯೋಗ ಅವಕಾಶ ಕಲ್ಪಿಸುವ ಪರಾಮರ್ಶನ ಗ್ರಂಥಗಳಿರಬೇಕು. ತಾಂತ್ರಕ, ವೈದ್ಯಕೀಯ, ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವಂತಿರಬೇಕು ಎಂದು ಹೇಳಿದರು.

ಐದು ಸಾವಿರ ಶಾಲೆ ದತ್ತು:

ರಾಜ್ಯದ 47,417 ಸರ್ಕಾರಿ ಶಾಲೆಗಳ ಪೈಕಿ 5 ಸಾವಿರ ಶಾಲೆಗಳನ್ನು ದತ್ತು ಪಡೆಯಲು ಉದ್ದೇಶಿಸಲಾಗಿದೆ. ಕೈಗಾರಿಕೆಗಳು ಸಿಎಸ್ಆರ್ ಕಾಯ್ದೆಯಡಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮೂಲಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಪಡಿಸಲು ಅವಕಾಶ ನೀಡಲಾಗುವುದು ಎಂದರು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಿಂದ ಖಾಸಗಿ ಶಾಲೆಗಳನ್ನು ಪೋಷಿಸುವಂತಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಮತ್ತಿತರ ಸೌಲಭ್ಯ ಪಡೆದಿರುವ ಶಾಲೆಗಳು ಶುಲ್ಕ ಮರುಪಾವತಿ ಮಾಡಬೇಕಾಗಿಲ್ಲ.  ಈ ಕಾಯ್ದೆಯಡಿ ನೀಡುವ ಹಣವನ್ನೇ ಬಳಸಿ 1ರಿಂದ 10ನೇ ತರಗತಿವರೆಗೆ ನೀಡುತ್ತಿರುವ ಉಚಿತ ಶಿಕ್ಷಣವನ್ನು 12ನೇ ತರಗತಿವರೆಗೂ ವಿಸ್ತರಿಸಲು ಅವಕಾಶವಿದೆ. ಆರ್ಟಿಇ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ನೋಡುತ್ತಿರುವ ನಿದರ್ಶನಗಳು ಕೂಡ ಬೆಳಕಿಗೆ ಬಂದಿವೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ತನ್ವೀರ್ಸೇಠ್ ಭರವಸೆ ನೀಡಿದರು.

ಕ್ಲಸ್ಟರ್ ಮಟ್ಟದಲ್ಲಿ ಅಡುಗೆ ಕೋಣೆ:

ಶಿಕ್ಷಕರ ಮೇಲಿನ ಹೊರೆ ತಗ್ಗಿಸಲು ಖಾಸಗಿ ಸಹಭಾಗಿತ್ವದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಬಿಸಿಯೂಟದ ಅಡುಗೆ ಮಾಡಿ ವಿತರಿಸುವ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸರ್ಕಾರೇತರ ಸಂಘ-ಸಂಸ್ಥೆಗಳು ಇಲಾಖೆ ಷರತ್ತನ್ನು ಒಪ್ಪಿ ಕೆಲಸ ಮಾಡಲು ಸಿದ್ಧವಿದ್ದರೆ ಮುಕ್ತ ಅವಕಾಶ ನೀಡಲಾಗುವುದು. ದಾಸೋಹ ಪದ್ಧತಿ ಹಳೆಯದಾಗಿದ್ದು, ಮಠಮಾನ್ಯಗಳು, ಸಂಘ-ಸಂಸ್ಥೆಗಳಿಗೂ ಮುಕ್ತ ಅವಕಾಶ ನೀಡಲಾಗುವುದು ಎಂದರು.

ಹೆಚ್ಚುವರಿ ಶಿಕ್ಷಕರು:

ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಟ್ಟದಲ್ಲಿ 20 ಹೆಚ್ಚುವರಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.  ಹೆರಿಗೆ ರಜೆ ಸೇರಿದಂತೆ ದೀರ್ಘ ರಜೆ ಹಾಕಿದ ಶಿಕ್ಷಕರ ಸ್ಥಳದಲ್ಲಿ ಈ ಶಿಕ್ಷಕರು ಕೆಲಸ ಮಾಡಲಿದ್ದಾರೆ. ಉಳಿದಂತೆ ಕಚೇರಿ ಕೆಲಸಕ್ಕೆ ನಿಯೋಜಿಸಲಾಗುವುದು.  ಜತೆಗೆ ಜೂನ್ನಿಂದ ಫೆಬ್ರವರಿ ನಡುವೆ ನಿವೃತ್ತಿಯಾಗುವ ಶಿಕ್ಷಕರನ್ನು 2017ರ ಮಾರ್ಚ್ ವರೆಗೂ ಮುಂದುವರೆಸಲು ತೀರ್ಮಾನಿಸಲಾಗಿದೆ.

ಬೀಡು ಬಿಟ್ಟವರ ಎತ್ತಂಗಡಿ

ಪದವಿ ಪೂರ್ವ ಪರೀಕ್ಷಾ ಮಂಡಳಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ.  ಅಧಿಕಾರಿ ಮತ್ತು ಸಿಬ್ಬಂದಿ ಬೆಂಗಳೂರಿನಲ್ಲೇ ಕೇಳಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗುವುದು. ಪರೀಕ್ಷಾ ವ್ಯವಸ್ಥೆಯಲ್ಲಿ ಬಿಗಿಯಾದ ಹಿಡಿತ ಸಾಧಿಸುವ ಮೂಲಕ ಲೋಪ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.

ಸಂದರ್ಶನ – ಶಿವಣ್ಣ 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin