ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಜನಹಿತ ರಕ್ಷಣೆ ಸಾಧ್ಯ : ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

devegowda
ಚಿಕ್ಕಮಗಳೂರು, ಅ.18- ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಯಾವುದೇ ರಾಜ್ಯದ ಹಿತ ಕಾಪಾಡಲು ಸಾಧ್ಯ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಇಂದಿಲ್ಲಿ ತಿಳಿಸಿದರು.ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ದೇವೇಗೌಡರು ಇಂದು ನಗರಕ್ಕೆ ಭೇಟಿ ನೀಡಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕರ್ನಾಟಕದ ಪರವಾಗಿ ಕೇಂದ್ರದಲ್ಲಿ ಶಕ್ತಿ ಪ್ರದರ್ಶನ ಮಾಡಲು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಲೆ ಎತ್ತಿ ನಿಂತಿವೆ. ನಮ್ಮ ರಾಜ್ಯದಲ್ಲಿ ಮಾತ್ರ ಇಲ್ಲ ಎಂದು ಹೇಳಿದರು.

ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಕೇಂದ್ರಕ್ಕೆ ಮುಟ್ಟಿಸುವ ಕೆಲಸವನ್ನು ಮಾಡಿದರೆ ಅವರು ಉತ್ತರವನ್ನೇ ಕೊಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಆಡಳಿತ ನಡೆಸುತ್ತಿದೆ. ಅವು ಕರ್ನಾಟಕವನ್ನು ಮುಗಿಸಲು ಪ್ರಯತ್ನ ಪಡುತ್ತಿವೆ. ಇದರ ಬಗ್ಗೆ ಎಲ್ಲರೂ ಚಿಂತಿಸಬೇಕು ಎಂದು ಹೇಳಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ದೇಶದ ಹಿತವನ್ನು ಬಲಿ ಕೊಡುತ್ತಿವೆ ಎಂದು ದೂರಿದರು. ನೀರಿನ ಹಂಚಿಕೆ ವಿಷಯ ಹಾಗೂ ರೈಲ್ವೆ ಅಭಿವೃದ್ಧಿ ಇದಕ್ಕೆ ಉದಾಹರಣೆಯಾಗಿದೆ. ಚಿಕ್ಕಮಗಳೂರಿನಲ್ಲಿ 1978ರಲ್ಲಿ ಇಂದಿರಾಗಾಂಧಿಯವರು ರೈಲ್ವೆ ಯೋಜನೆಗೆ ಶಿಲಾನ್ಯಾಸ ಮಾಡಿದ್ದರು. ಆದರೆ ಅನುಷ್ಠಾನ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ನಾನು ಪ್ರಧಾನಿಯಾದ ನಂತರ ಇದನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.
ನಿಮ್ಮ ಪಕ್ಷ ಗೆದ್ದ ನಂತರ ಬೇರೆ ಪಕ್ಷದ ಜೊತೆ ಕೈಜೋಡಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಮಗೆ ಖಂಡಿತಾ ಅಧಿಕಾರ ದಾಹ ಇಲ್ಲ. ಈಗಾಗಲೇ ಕೈ ಜೋಡಿಸಿ ಒಮ್ಮೆ ಶಿಕ್ಷೆ ಅನುಭವಿಸಿದ್ದೇವೆ. ಮತ್ತೆ ಅಂತಹ ತಪ್ಪು ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲೆಯ ಐದು ಕ್ಷೇತ್ರದಲ್ಲೂ ಜೆಡಿಎಸ್ ಶಕ್ತಿ ಇದೆ ಎಂದು ತಿಳಿಸಿದ ಅವರು, ನಮ್ಮ ಪಕ್ಷದಲ್ಲೂ ಭಿನ್ನಾಭಿಪ್ರಾಯ ಇದನ್ನು ಶಮನಗೊಳಿಸಲು ನವೆಂಬರ್ 1 ರಿಂದ ಹೈದರಾಬಾದ್-ಕರ್ನಾಟಕ ಭಾಗದಲ್ಲಿಎಚ್.ಡಿ.ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ನಾನು ಈ ಭಾಗದಲ್ಲಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಉಚ್ಛಾಟಿತ ಶಾಸಕರನ್ನು ಹೊರತುಪಡಿಸಿ ಈಗಿನ ಎಲ್ಲಾ ಜೆಡಿಎಸ್ ಶಾಸಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುತ್ತೇವೆ. ಉಚ್ಚಾಟಿತ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಜ್ವಲಂತ ಸಮಸ್ಯೆಗಳು ಹೆಚ್ಚಾಗಿರುವುದರಿಂದ ರಾಜ್ಯದ ಸಮಸ್ಯೆಗಳಿಗೆ ಒತ್ತು ಕೊಡಲು ಆಗುತ್ತಿಲ್ಲ. ಹೀಗಾಗಿ ಸಚಿವರು ಅಂತಹ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ಪಕ್ಷದ ಮುಖಂಡರಾದ ಎಚ್.ಎಸ್.ದೇವರಾಜ್, ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin