ಪ್ರಾರಂಭ ತಂಡದಿಂದ  ಮತ್ತೊಂದು ಹೈ ವೊಲ್ಟೇಜ್ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಸದಭಿರುಚಿಯ ಚಿತ್ರಗಳನ್ನು ನೀಡುವ ನಿಟ್ಟಿನಲ್ಲಿ ಜೇನುಶ್ರೀ ತನುಷ್ ಪ್ರೊಡಕ್ಷನ್ಸ್ ಮುಂದಾಗಿದೆ.  ಜಗದೀಶ್ ಕಲ್ಯಾಡಿ ಅವರು ನಿರ್ಮಿಸಿ, ಮನು ಕಲ್ಯಾಡಿ ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನುರಂಜನ್ ನಾಯಕರಾಗಿ ನಟಿಸಿರುವ ಪ್ರಾರಂಭ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಲಾಕ್‍ಡೌನ್ ನಂತರ ತೆರೆಗೆ ಬರಲಿದೆ. ಈಗಾಗಲೇ ಚಿತ್ರ ಬಿಡುಗಡೆಗೆ ಸಿನಿ ರಸಿಕರು ಕಾತುರದಲ್ಲಿದ್ದಾರೆ.

ಪ್ರಾರಂಭದ ಮೂಲಕ ಚಿತ್ರರಂಗದಲ್ಲಿ ಶುಭಾರಂಭ ಮಾಡಲಿರುವ ನಿರ್ಮಾಪಕ ಜಗದೀಶ್ ಕಲ್ಯಾಡಿ ಹಾಗೂ ನಿರ್ದೇಶಕ ಮನು ಕಲ್ಯಾಡಿ ಅವರ ಕಾಂಬಿನೇಷನ್‍ನಲ್ಲಿ ಮತ್ತೊಂದು ಅದ್ಧೂರಿ ಚಿತ್ರ ನಿರ್ಮಾಣವಾಗಲಿದೆ.  ಈ ಚಿತ್ರದ ನಾಯಕರಾಗಿ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರು ನಟಿಸಲಿದ್ದು, ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಸದ್ಯದಮಾಹಿತಿ ನೀಡುವುದಾಗಿ ನಿರ್ದೇಶಕ ಮನು ಕಲ್ಯಾಡಿ ತಿಳಿಸಿದ್ದಾರೆ.

ಲಾಕ್‍ಡೌನ್ ಮುಗಿದು ಚಿತ್ರೀಕರಣಕ್ಕೆ ಅನುಮತಿ ದೊರಕಿದ ಕೂಡಲೆ ಈ ನೂತನ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಕೊರೊನಾ ಲಾಕ್‍ಡೌನ್ ನಂತರ ಚಿತ್ರ ನಿರ್ಮಾಣಕ್ಕೆ ಮುಂದಾಗುವವರು ಕಡಿಮೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಒಂದು ಚಿತ್ರ ಬಿಡುಗಡೆ ಹಂತದಲ್ಲಿರಬೇಕಾದರೆ ಮತ್ತೊಂದು ಅದ್ಧೂರಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಸಹೋದರರಾದ ನಿರ್ಮಾಪಕ ಜಗದೀಶ್ ಕಲ್ಯಾಡಿ ಹಾಗೂ ನಿರ್ದೇಶಕ ಮನು ಕಲ್ಯಾಡಿ ಅವರ ಧೈರ್ಯ ನಿಜಕ್ಕೂ ಮೆಚ್ಚುವಂಥದ್ದು ಎಂದೇ ಹೇಳಬಹುದು.

Facebook Comments