ಪ್ರೇಕ್ಷಕರನ್ನು ಅರ್ಧದಲ್ಲಿಯೇ ವಾಪಸ್ ಕಳಿಸಿ ಎಲಿವೆಂಟ್ ಮಾಲ್‍ನಲ್ಲಿ ‘ರಾಜಕುಮಾರ’ನಿಗೆ ಅವಮಾನ

ಈ ಸುದ್ದಿಯನ್ನು ಶೇರ್ ಮಾಡಿ

Rajakumara--01

ಬೆಂಗಳೂರು,ಏ.8- ನಾಗಾವರ ರಸ್ತೆಯ ಎಲಿವೆಂಟ್ ಮಾಲ್‍ನಲ್ಲಿರುವ ಚಿತ್ರಮಂದಿರದಲ್ಲಿ ಕನ್ನಡದ ರಾಜಕುಮಾರ ಚಿತ್ರಕ್ಕೆ ಅವಮಾನ ಮಾಡಲಾಗಿದೆ. ಚಿತ್ರದ ಪ್ರೇಕ್ಷಕರನ್ನು ಅರ್ಧದಲ್ಲಿಯೇ ವಾಪಸ್ ಕಳುಹಿಸಿ ಮಾಲ್‍ನವರು ದರ್ಪ ಮರೆದಿದ್ದಾರೆ. ಎಲಿವೆಂಟ್ ಮಾಲ್‍ನಲ್ಲಿ ಪುನೀತ್ ಅಭಿನಯದ ರಾಜಕುಮಾರ ಕನ್ನಡ ಚಿತ್ರ ನೋಡಲು ಟಿಕೆಟ್ ತೆಗೆದುಕೊಂಡು ಹೋಗಿದ್ದ ಪ್ರೇಕ್ಷಕರಿಗೆ ಭಾರೀ ನಿರಾಸೆ ಕಾದಿತ್ತು.   ಚಿತ್ರಪ್ರದರ್ಶನ ಪ್ರಾರಂಭಗೊಂಡು ಅರ್ಧಗಂಟೆ ನಂತರ ಸೆಕೆ ಪ್ರಾರಂಭವಾಗಿದೆ. ಪ್ರೇಕ್ಷಕರು ಏಸಿ ಆನ್ ಮಾಡಲು ಕೇಳಿಕೊಂಡಿದ್ದಾರೆ. ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳಿಗೆ ಏಸಿ ಹಾಕುವುದಿಲ್ಲ. ಬೇಕಾದರೆ ನೋಡಿ ಇಲ್ಲದಿದ್ದರೆ ಹೋಗಿ ಎಂದು ದೌಲತ್ತು ತೋರಿದ್ದಾರೆ. ಏಸಿ ಇಲ್ಲದ ಕನ್ನಡ ಚಿತ್ರದ ಪ್ರೇಕ್ಷಕರು ಮಹಿಳೆಯರು, ಮಕ್ಕಳೊಂದಿಗೆ ಚಿತ್ರಮಂದಿರದಿಂದ ಹೊರಬಂದು ಪ್ರತಿಭಟಿಸಿದ್ದಾರೆ.

ಪ್ರತಿ ಬಾರಿ ಮಾಲ್‍ಗಲ್ಲಿರುವ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಹಾಕುವುದೇ ಅಪರೂಪ. ಪರಭಾಷಾ ಚಿತ್ರಗಳದ್ದೇ ಇಲ್ಲಿ ಕಾರುಬಾರು. ಅಂಥದ್ದರಲ್ಲಿ ಹಾಕಿರುವ ಉತ್ತಮ ಕನ್ನಡ ಚಿತ್ರವನ್ನು ನೋಡಲು ಬಂದರೆ ಏಸಿ ಇಲ್ಲ , ಫ್ಯಾನ್ ಇಲ್ಲ ಎಂದು ಬೇಕೆಂದೇ ತಗಾದೆ ತೆಗೆಯುತ್ತಾರೆ ಎಂದು ಹಲವು ಪ್ರೇಕ್ಷಕರು ದೂರಿದರು.

ವರನಟ ಡಾ.ರಾಜ್ ಅವರನ್ನು ನೆನೆಪಿಸುವ ರಾಜಕುಮಾರ ಹೆಸರಿನ ಚಿತ್ರಕ್ಕೆ ಈ ಮಾಲ್‍ನವರು ಅವಮಾನ ಮಾಡಿದ್ದಾರೆ. ಈ ಮಾಲ್‍ನಲ್ಲಿ 7 ಚಿತ್ರಮಂದಿರಗಳಿವೆ. ಅಲ್ಲೆಲ್ಲ ಬೇರೆ ಭಾಷೆಯ ಚಿತ್ರಗಳು ಓಡುತ್ತಿವೆ. ಅಲ್ಲಿ ಏಸಿ ಸರಿ ಇದೆ. ಆದರೆ ಕನ್ನಡ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಮಂದಿರದಲ್ಲಿ ಮಾತ್ರ ಏಸಿ ಸರಿಯಿಲ್ಲ. ಉದ್ದೇಶಪೂರ್ವಕವಾಗಿಯೇ ಅವಮಾನ ಮಾಡಲು ಈ ರೀತಿ ಮಾಡುತ್ತಾರೆ ಎಂದು ಹಲವರು ಆರೋಪ ಮಾಡಿದ್ದಾರೆ.   ಪ್ರೇಕ್ಷಕರೆಲ್ಲ ಒಟ್ಟಾಗಿ ಚಿತ್ರಮಂದಿರ ಮಾಲೀಕರ ವಿರುದ್ದ ಮುಗಿ ಬೀಳುತ್ತಿದ್ದಂತೆ ಅರ್ಧಕ್ಕೆ ಚಿತ್ರ ನಿಲ್ಲಿಸಿ ಹಣವನ್ನು ವಾಪಸ್ ಕೊಟ್ಟು ಕಳುಹಿಸಿದ್ದಾರೆ.

ವ್ಯಾಪಕ ವಿರೋಧ:

ಕನ್ನಡ ಚಲನಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿದ್ದು ಪ್ರೇಕ್ಷಕರಿಗೆ ಅವಮಾನ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕನ್ನಡ ಚಿತ್ರಗಳಿಗೆ ಏಸಿ ಹಾಕುವುದಿಲ್ಲ. ಬೇಕಿದ್ದರೆ ನೋಡಿ ಇಲ್ಲವಾದರೆ ಹೋಗಿ ಎಂಬ ಚಿತ್ರಮಂದಿರಗಳ ಮಾಲೀಕರ ಧೋರಣೆಗೆ ಕನ್ನಡಪರ ಸಂಘಟನೆಯವರು ಕಿಡಿಕಾರಿದ್ದಾರೆ.   ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಮಾಲ್‍ಗಳವರದ್ದು ಪಾಶ್ಚಿಮಾತ್ಯ ಸಂಸ್ಕøತಿ, ಕನ್ನಡ ಸಂಸ್ಕøತಿ ಅವರಿಗಿಲ್ಲ. ಅವರನ್ನು ಈ ನೆಲದಿಂದ ಓಡಿಸಬೇಕು, ಆಗ ಬುದ್ದಿ ಬರುತ್ತದೆ ಎಂದಿದ್ದಾರೆ.

ಶಿವರಾಮೇಗೌಡ, ರಮೇಶ್‍ಗೌಡ ಮುಂತಾದವರು ಮಾತನಾಡಿ, ಎಲ್ಲ ಮಾಲ್‍ಗಳಲ್ಲೂ ಪರಭಾಷಾ ಚಿತ್ರಗಳದ್ದೇ ಪಾರುಪತ್ಯ ನಡೆಯುತ್ತಿದೆ. ಕನ್ನಡಕ್ಕೆ ನಿರಂತರ ಅವಮಾನ ಮಾಡಲಾಗುತ್ತಿದೆ. ಆಳುವ ಸರ್ಕಾರಗಳು ಕಣ್ಮುಚ್ಚಿಕುಳಿತಿವೆ. ಇದೇ ಧೊರಣೆ ಮುಂದುವರೆದರೆ ಕನ್ನಡಿಗರ ಸಿಟ್ಟು ರಟ್ಟೆಗೆ ಬರುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin