ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಶಾರ್ಟ್ ಸಕ್ರ್ಯೂಟ್ : ಲಕ್ಷಾಂತರ ನಷ್ಟ
ತಿ.ನರಸೀಪುರ, ಆ.9- ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದಾಗಿ ಪ್ಲಾಸ್ಟಿಕ್ ಬಿಂದಿಗೆ ಕಾರ್ಖಾನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿರುವ ಘಟನೆ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ನಡೆದಿದೆ.
ನವೀದ್ ಅಹಮ್ಮದ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಬಿಂದಿಗೆ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿದ್ದು, ಪರಿಣಾಮ ಇಡೀ ಫ್ಯಾಕ್ಟರಿಯು ಸಂಪೂರ್ಣ ಹೊತ್ತಿ ಉರಿದು ಭಸ್ಮವಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾಲೀಕರು, ಅಗ್ನಿಶಾಮಕ ದಳದವರಿಗೆ ಫೋನ್ ಮೂಲಕ ಕರೆ ಮಾಡಿ ತಿಳಿಸಲಾಗಿ, ಸ್ಥಳಕ್ಕಾಗಮಿಸಿದ ಪಟ್ಟಣದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಪಟ್ಟರಾದರೂ ಬೆಂಕಿ ನಂದಿಸಲಾಗಲಿಲ್ಲ.ನಂತರ ಹೆಚ್ಚುವರಿಯಾಗಿ ಮೈಸೂರಿನಿಂದ 3 ಅಗ್ನಿಶಾಮಕ ವಾಹನವನ್ನು ಕರೆಸಿಕೊಂಡು ಮಧ್ಯರಾತ್ರಿ 2 ಗಂಟೆಯವರೆಗೂ ಸತತ ಪ್ರಯತ್ನ ನಡೆಸಿದರೂ ಸಹ ಯಾವುದೇ ಪ್ರಯೋಜವಾಗದೇ ಇಡೀ ಫ್ಯಾಕ್ಟರಿಯೆ ಸಂಪೂರ್ಣ ಹೊತ್ತಿ ಉರಿದಿದ್ದು, ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ತಿನರಸೀಪುರ ಪಟ್ಟಣ ಠಾಣೆಯ ಸಬ್ಇನ್ಸ್ಪೆಕ್ಟರ್ ರವಿಶಂಕರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಲೀಕ ನವೀದ್ ಅಹಮ್ಮದ್, ಭಾನುವಾರವಾಗಿದ್ದರಿಂದ ಕಾರ್ಮಿಕರ್ಯಾರು ಫ್ಯಾಕ್ಟರಿಯಲ್ಲಿ ಇರಲಿಲ್ಲ. ಫ್ಯಾಕ್ಟರಿ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರಂ ಶಾರ್ಟ್ ಸಕ್ರ್ಯೂಟ್ನಿಂದಾಗಿ ಈ ಘಟನೆ ನಡೆದಿದ್ದು, ವಿಷಯ ನಮ್ಮ ಗಮನಕ್ಕೆ ಬರುವ ಹೊತ್ತಿಗೆ ಆದಾಗಲೇ ಫ್ಯಾಕ್ಟರಿ ಅರ್ಧ ಭಾಗ ಸುಟ್ಟು ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಚುರುಕಿನ ಕಾರ್ಯ ನಡೆಸಿದ್ದರೆ ಅಲ್ಪಸ್ವಲ್ಪವಾದರೂ ಸಾಮಾಗ್ರಿಗಳನ್ನು ಉಳಿಸಿಕೊಳ್ಳಬಹುದಿತೆಂದು ತಿಳಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.