ಪ. ಜಾತಿ – ಪಂಗಡಗಳ ವಿಭಾಗ ಮಟ್ಟದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

belgam-2

ರಾಯಬಾಗ,ಆ.27- ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಪೊಲೀಸ್ ಇಲಾಖೆ ಆಶ್ರಯದಲ್ಲಿ ಪ. ಜಾತಿ ಮತ್ತು ಪಂಗಡಗಳ ವಿಭಾಗ ಮಟ್ಟದ ಸಭೆಯು ಅಥಣಿಯ ಡಿವಾಯ್‍ಎಸ್‍ಪಿ ಸತೀಶ ಚಿಟಗುಪ್ಪಿ ಅಧ್ಯಕ್ಷತೆಯಲ್ಲಿ ಜರುಗಿತು. ಸಭೈಯ ಪ್ರಾರಂಭದಲ್ಲಿ ಎ.ಪಿ. ಸೂರ್ಯವಂಶಿ ಅವರು ಅಥಣಿಯಲ್ಲಿ ನಡೆದ ಸಭೆಯ ನಡಾವಳಿ ಕುರಿತು ವರದಿ ವಾಚಿಸಿದರು. ನಂತರ ದಲಿತ ಮುಖಂಡ ಸಾಗರ ಝೇಂಡೆನ್ನವರ ಮಾತನಾಡಿ, ದಲಿತ ಯುವಕರಿಗೆ ಔದ್ಯೋಗಿಕ ಉದ್ಯಮ ಸ್ಥಾಪಿಸಲು ರಾಯಬಾಗ ವಿಭಾಗದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಯುವ ಮುಖಂಡ ಶಶಿಕಾಂತ ಕಾಂಬಳೆ ಅವರು, ಈಗ ಎರಡು ವರ್ಷಗಳಿಂದ 1ರಿಂದ 8ನೇ ವರ್ಗದವರೆಗೆ ಅಧ್ಯಯನ ಮಾಡುತ್ತಿರುವ ಎಸ್‍ಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಆಗಿರುವುದಿಲ್ಲ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.ಆಗ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಬಿ.ವಾಯ್. ಕುರಿಹುಲಿ ಉತ್ತರಿಸಿ, ಈ ಮುಂಚೆ ವಿದ್ಯಾರ್ಥಿಗಳಿಗೆ 400 ರು. ಶಿಷ್ಯವೇತನ ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ಹೆಚ್ಚಿಸಿ 800 ರು. ನೀಡಲಾಗುತ್ತಿದೆ.

ಅದಕ್ಕಾಗಿ ಅನುದಾನ ಕೊರತೆ ಉಂಟಾಗಿ ಶಿಷ್ಯವೇತನ ನೀಡಲು ವಿಳಂಬವಾಗಿದೆ. ಅಷ್ಟೇ ಅಲ್ಲದೇ ಕೆಲವೊಂದು ಪಾಲಕರು ಸರಿಯಾದ ದಾಖಲೆ ನೀಡದೇ ಇದ್ದಕಾರಣ ಮತ್ತು ಶಿಕ್ಷಕರ ತಪ್ಪಿನಿಂದಾಗಿ ಹಾಗೂ ಬ್ಯಾಂಕ್‍ನವರು ಖಾತೆ ತೆರೆಯಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡದೇ ಇದ್ದಕಾರಣ ಸಮಸ್ಯೆಯಾಗಿತ್ತು ಎಂದು ಸಮರ್ಥಿಸಿಕೊಂಡ ಅವರು, ರಾಯಬಾಗ ತಾಲೂಕಿನಲ್ಲಿ ಬಾಕಿಇರುವ ಸುಮಾರು ರು.30 ಲಕ್ಷ ಬಿಡುಗಡೆಯಾಗಿದೆ ಎಂದರು. ಸುರೇಶ ಐಹೊಳೆ ಮಾತನಾಡಿ, ಹಾರೂಗೇರಿ ಪುರಸಭೆಯಲ್ಲಿ ಮೊದಲಿನಿಂದ ಕೆಲಸ ಮಾಡುವ ಸಫಾಯ ಕರ್ಮಚಾರಿಗಳನ್ನು ಬಿಟ್ಟು, ಇತ್ತಿಚೆಗೆ ನೇಮಕಗೊಂಡವರನ್ನು ಖಾಯಂ ಮಾಡುತ್ತಿರುವುದರಿಂದ ಮೊದಲಿನಿಂದ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ತೊಂದರೆಯಾಗುತ್ತದೆ. ಇದನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಸೇವಾಕೇಂದ್ರದಲ್ಲಿ ಪಡಿತರ ಪಡೆದುಕೊಳ್ಳಲು ಕೂಪನ್ ವ್ಯವಸ್ಥೆ ಮಾಡಿದ್ದು, ದಲಿತ ಕೂಲಿಕಾರರು 2-3 ದಿನ ಸೇವಾಕೇಂದ್ರಗಳಿಗೆ ಅಲೆಯುವಂತಾಗಿದೆ ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಎಲ್ಲರೂ ಒಕ್ಕೊರಿಲಿನಿಂದ ಒತ್ತಾಯಿಸಿದರು. ಸೇವಾಕೇಂದ್ರದಲ್ಲಿ ಉಚಿತವಾಗಿ ಕೂಪನ್ ಪಡೆದುಕೊಳ್ಳಬಹುದು ಎಂದು ಸರಕಾರ ಹೇಳಿದ್ದರೂ, ಸೇವಾ ಕೇಂದ್ರದವರು 10-20 ರು.ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕೆಂದಾಗ, ತಹಶೀಲ್ದಾರ ಸಂಜೀವ ಕಾಂಬಳೆ ಉತ್ತರಿಸಿ, ಇದರ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚಿತ ವಿಷಯವಾಗಿದ್ದು, ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾವುದು ಎಂದು ತಿಳಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin