ಫುಡ್ ಪಾಯಿಸನ್’ನಿಂದ 3 ಮಕ್ಕಳ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಈ ಸುದ್ದಿಯನ್ನು ಶೇರ್ ಮಾಡಿ

Huliyaru--01-01

ತುಮಕೂರು,ಮಾ.9-ತಮ್ಮ ಮಕ್ಕಳ ಭವಿಷ್ಯದ ಸಹಸ್ರಾರು ಕನಸು ಹೊತ್ತು ಬೋರ್ಡಿಂಗ್ ಶಾಲೆಗೆ ಸೇರಿಸಿದ್ದ ಪೋಷಕರ ಆ ರೋದನ ಹೇಳತೀರದಾಗಿತ್ತು. ಇನ್ನೇನು ವಾರ ಕಳೆದರೆ ಆ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿತ್ತು. ನಿನ್ನೆ ನಡೆದ ದುರ್ಘಟನೆಯಲ್ಲಿ ಮೂವರು ಮಕ್ಕಳು ಹೆಣವಾಗಿದ್ದಾರೆ.  ಇದನ್ನು ನೋಡಿ ತಂದೆತಾಯಿಗಳು, ಬಂಧುಬಳಗದವರು ಎದೆ ಬಡಿದುಕೊಂಡು ಅಳುತ್ತಿದ್ದರು. ತಮ್ಮ ಕರುಳ ಕುಡಿಗಳು ತಮ್ಮೆದುರು ಹೆಣವಾಗಿ ಮಲಗಿದ್ದನ್ನು ಸಹಿಸಿಕೊಳ್ಳಲಾರದ ಪೋಷಕರ ನೋವು ಯಾರಿಗೂ ಬೇಡ.  ಮಕ್ಕಳು ತಿನ್ನುವ ಅನ್ನದ ಮೂಲಕ ಆ ವಿಧಿ ಬಂದೆರಗಿ  ಮೂವರು ಮಕ್ಕಳ ಪ್ರಾಣವನ್ನೇ ಕಸಿದುಕೊಂಡಿದೆ. [ ಹುಳಿಯಾರು ಶಾಲೆಯಲ್ಲಿ ವಿಷ ಮಿಶ್ರಿತ ಆಹಾರ ಸೇವಿಸಿ ಮೂರು ಮಕ್ಕಳ ಸಾವು ]

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿರುವ ರೆಸಿಡೆನ್ಷಿ ಶಾಲೆಯಲ್ಲಿ ನಡೆದ ಈ ದುರ್ಘಟನೆ ನಡೆದಿದೆ. ಏನೂ ಅರಿಯದ ಈ ಮೂವರು ವಿದ್ಯಾರ್ಥಿಗಳು ನಿನ್ನೆ ತಟ್ಟೆ ಹಿಡಿದು ಊಟಕ್ಕೆ ಹೋಗಿದ್ದರು. ಊಟ ಮಾಡಿದ ಕೂಡಲೇ ಹೊಟ್ಟೆ ನೋವು ಕಾಣಿಸಿಕೊಂಡು ಬಿದ್ದು ಒದ್ದಾಡಿದ್ದಾರೆ. ಇದನ್ನು ನೋಡಿದ ಬೇರೆಯವರು ಊಟ ಮಾಡಿಲ್ಲ. ಇದರಿಂದ ಹೆಚ್ಚಿನ ಅನಾಹುತ ತಪ್ಪಿತು.   ಆದರೆ ಶಾಲೆಯವರ ಬೇಜವಬ್ದಾರಿತನಕ್ಕೆ ಮೂವರು ಮಕ್ಕಳು ಬಲಿಯಾಗಿದ್ದಾರೆ. ಮಡಿದ ಮಕ್ಕಳನ್ನು ತಬ್ಬಿ ಪೋಷಕರು ಗೋಳಿಡುತ್ತಿದದ್ದು ಎಂಥವರ ಕರುಳನ್ನು ಹಿಂಡುತಿತ್ತು. ಲಕ್ಷಾಂತರ ರೂ. ವೆಚ್ಚ ಮಾಡಿ ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ಪೋಷಕರಿಗೆ ಇಂತಹ ಸ್ಥಿತಿ ಬರಬಾರದಿತ್ತು.

ಸಂಬಂಧಿಕರ ರೋಧನಕ್ಕೆ ಅಧಿಕಾರಿಗಳ ಕಣ್ಣಲ್ಲೂ ನೀರು ಬರುತಿತ್ತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾಜಿ ಶಾಸಕ ಕಿರಣ್‍ಕುಮಾರ್ ಹಾಸ್ಟೆಲ್‍ಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಭಾರೀ ಪ್ರತಿಭಟನೆ ಎದುರಿಸಬೇಕಾಗಿತ್ತು.   ಸಿಟ್ಟು , ಆಕ್ರೋಶದಿಂದ ಶಾಲೆಯ ಅಧ್ಯಕ್ಷ ಕಿರಣ್‍ಕುಮಾರ್ ಅವರನ್ನು ಪೋಷಕರು ಎಳೆದಾಡಿ ಗೋಳಾಡಿದರು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರಾದರೂ ಪ್ರಾಣವನ್ನು ಹಿಂದಕ್ಕೆ ತರಲು ಸಾಧ್ಯವೇ?.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin