ಫೆ.19ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಮೈಸೂರು, ಫೆ.10-ಬಹುನಿರೀಕ್ಷಿತ ಮೈಸೂರು-ಬೆಂಗಳೂರು ನಡುವಿನ ರೈಲು ಸಂಚಾರ ಸೇರಿದಂತೆ ಹಲವು ಯೋಜನೆಗಳ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ.  ಫೆ.19ಕ್ಕೆ ಪ್ರಧಾನಿ ಮೈಸೂರಿಗೆ ಆಗಮಿಸಿ ಮಹತ್ವದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದ್ದಾರೆ. ಅಂದು ಪ್ರಧಾನಿ ಮೈಸೂರು-ಬೆಂಗಳೂರು ಜೋಡಿ ಹಳಿ ರೈಲು ಮಾರ್ಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದರೊಂದಿಗೆ ಈ ಮಾರ್ಗದ ವಿದ್ಯುದ್ಧೀಕರಣಕ್ಕೂ ಚಾಲನೆ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರು, ರಾಜಸ್ಥಾನ ನಡುವಿನ ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಪ್ರಸಕ್ತ ಬಜೆಟ್‍ನಲ್ಲಿ 789.29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ನಾಗನಹಳ್ಳಿ ಸಾಟಸೈಟ್ ರೈಲ್ವೆ ನಿಲ್ದಾಣವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.ಹಾಗೆಯೇ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೈಸೂರು-ಬೆಂಗಳೂರು ನಡುವೆ 8 ಪಥದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.ಅದಲ್ಲದೆ, ಇಎಸ್‍ಐ ಆಸ್ಪತ್ರೆಯನ್ನೂ ಸಹ ಉದ್ಘಾಟಿಸಲಿದ್ದಾರೆ. ಅದೇ ದಿನ ಸಂಜೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ 89.60ಕೋಟಿ ರೂ. ಬಿಡುಗಡೆ  : 
ಮೈಸೂರು, ಫೆ.10- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 89.60ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಪ್ರತಾಪ್ ಸಿಂಹ ಮೈಸೂರು ನಗರದ ಮೆಟ್ರೋಪೋಲ್ ವೃತ್ತದಿಂದ ಜಲದರ್ಶಿನಿ ಅತಿಥಿಗೃಹದ ವರೆಗಿನ ರಸ್ತೆ ಅಭಿವೃದ್ಧಿಗೆ 5 ಕೋಟಿ, ಮೈಸೂರು ತಾಲೂಕು ಎಂ.ಬಿ.ರಸ್ತೆಯಿಂದ ಕೂರ್ಗಳ್ಳಿ ಮಾಗ್ವಂಗಿ ಕೆಆರ್‍ಎಸ್ ಸಂಪರ್ಕಿಸುವ ರಸ್ತೆಗೆ 5 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಇದರೊಂದಿಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರಕಾಳೇಶ್ವರ ದೇವಸ್ಥಾನ ರಸ್ತೆಯ ಹಿಂಭಾಗದಿಂದ ಚೈನಾಧೀರ ಕುಟುಂಬದ ರಸ್ತೆ ಸಂಪರ್ಕಿಸುವ 1.50 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ 2 ಕೋಟಿ ಹಾಗೂ ವಿರಾಜಪೇಟೆ ತಾಲೂಕು ಕೊಣನೂರು-ಮಾರ್ಕೂಟ ರಸ್ತೆಯ ಅಂಬಟ್ಟಿ ವೃತ್ತದಲ್ಲಿ ರಸ್ತೆ ಸುರಕ್ಷತೆ ಕಾಮಗಾರಿಗಾಗಿ 4 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು. ಇದು ಸೇರಿದಂತೆ ಹುಣಸೂರು, ಪಿರಿಯಾಪಟ್ಟಣದ ಹಲವು ರಸ್ತೆಗಳ ಅಭಿವೃದ್ಧಿಗಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin