ಫೇಸ್‍ಬುಕ್ ಮೂಲಕ 8 ಕೋಟಿ ರೂ. ವಂಚನೆ..! ಖತರ್ನಾಕ್ ಜೋಡಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Crime

ಬೆಂಗಳೂರು, ಏ.12– ಫೇಸ್‍ಬುಕ್‍ನಲ್ಲಿ ನೂರಾರು ಮಂದಿಯನ್ನು ಪರಿಚಯ ಮಾಡಿಕೊಂಡು ಸುಮಾರು 8 ಕೋಟಿ ರೂ. ವಂಚನೆ ಮಾಡಿದ್ದ ನೈಜೀರಿಯಾ ಪ್ರಜೆ ಹಾಗೂ ಮಹಿಳೆಯೊಬ್ಬರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.  ನೈಜೀರಿಯಾದ ಆ್ಯಂಡ್ರೋ ಅಲಿಯಾಸ್ ಎರಿಕ್ ಪೀಟರ್ (41) ಮತ್ತು ಈತನ ಕೃತ್ಯಕ್ಕೆ ಸಹಕರಿಸುತ್ತಿದ್ದ ಮಹಾರಾಷ್ಟ್ರದ ಬಬ್ಲಿ ಪರ್ವೀನ್ ಹಾಶ್ಮಿ (52) ಎಂಬುವರನ್ನು ಬಂಧಿಸಿ ಲ್ಯಾಪ್‍ಟಾಪ್ ಮತ್ತು ಆರು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. 2016ರ ಆಗಸ್ಟ್‍ನಲ್ಲಿ ಆರೋಪಿ ಎರಿಕ್ ಪೀಟರ್ ಫೇಸ್‍ಬುಕ್‍ನಲ್ಲಿ ವಿಜಯಾ ಎಂಬುವರನ್ನು ಪರಿಚಯ ಮಾಡಿಕೊಂಡು ಹಾವು ಕಡಿತ, ನೆಬುಲಾ ಸೇರಿದಂತೆ ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಔಷಧಿಯಾದ ಅಂಜೆಲಿಕಾ ಹರ್ಬಲ್ ಸೀಡ್ಸ್ ಪ್ಯಾಕೆಟ್‍ಗಳನ್ನು ಖರೀದಿಸಿ ಬಿಜಿನೆಸ್ ಮಾಡುವಂತೆ ಆಮಿಷವೊಡ್ಡಿದ್ದನು.

ವಿಜಯಾ ಅವರಿಗೆ ಈ ಸಂಬಂಧ ಹರಿಯಾಣ ಮತ್ತು ಗುರುಗ್ರಾಮದಲ್ಲಿರುವ ರವೀಂದರ್ ಎಂಬುವರಿಂದ ಒಂದು ಪ್ಯಾಕೆಟ್ ಹರ್ಬಲ್ ಸೀಡ್ಸ್‍ಗಳನ್ನು 40 ಸಾವಿರ ರೂ.ಗಳಿಗೆ ಖರೀದಿಸಿ ನಾನು ಸೂಚಿಸುವ ಕಂಪೆನಿಗಳಿಗೆ ಕೊಡುವುದಾದಲ್ಲಿ ಯುಎಸ್ ಡಾಲರ್‍ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸಿಕೊಡುತ್ತೇನೆ ಎಂದು ಆಮಿಷವೊಡ್ಡಿದ್ದಾನೆ.  ವಿಜಯಾ ಅವರಿಂದ 50 ಲಕ್ಷ ರೂ. ಹಣವನ್ನು ಆರ್‍ಟಿಜಿಎಸ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಬೇರೆ ಬೇರೆ ಬ್ಯಾಂಕ್‍ನ ಅಕೌಂಟ್ ನಂಬರ್‍ಗಳಿಗೆ ಟ್ರಾನ್ಸ್‍ಫರ್ ಮಾಡಿಸಿಕೊಂಡು 100 ಪ್ಯಾಕೆಟ್ ಅಂಜಲಿಕಾ ಹರ್ಬಲ್ ಸೀಡ್ಸ್‍ಗಳನ್ನು ರವೀಂದರ್ ಅವರಿಂದ ಕೊಳ್ಳುವಂತೆ ಮಾಡಿದ್ದಾನೆ.
ಅದನ್ನು ಎರಿಕ್‍ಪೀಟರ್ ಕೊಳ್ಳದೆ ಕಸ್ಟಮ್ಸ್‍ರವರಿಗೆ ಲಂಚ ಕೊಡಬೇಕೆಂದು ತಗಾದೆ ತೆಗೆದು ವಿಜಯಾ ಅವರಿಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದನು.
ಈ ಬಗ್ಗೆ ವಿಜಯಾ ಅವರು ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಈ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಆ್ಯಂಡ್ರೋ ಅಲಿಯಾಸ್ ಎರಿಕ್ ಪೀಟರ್‍ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈತ ಇದೇ ರೀತಿ 101 ವ್ಯಕ್ತಿಗಳಿಗೆ 8 ಕೋಟಿ ವಂಚನೆ ಮಾಡಿರುವುದು ತಿಳಿದುಬಂದಿದೆ. ಈ ಆರೋಪಿ ಮಹಾರಾಷ್ಟ್ರದ ಬಬ್ಲಿ ಪರ್ವಿನ್ ಹಶ್ಮಿ ಮುಖಾಂತರ ಕೆಲವರನ್ನು ಸಂಪರ್ಕಿಸಿ ವಂಚನೆ ಮಾಡುತ್ತಿದ್ದನು. ಆಕೆಯೂ ಸಹ ಕಮಿಷನ್ ಪಡೆದು ಈತನಿಗೆ ಸಹಕರಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ವಿಜಯಾರವರಿಂದ ವರ್ಗಾವಣೆ ಪಡೆದಿರುವ ವಿವಿಧ ಬ್ಯಾಂಕ್‍ಗಳಲ್ಲಿ 21 ಲಕ್ಷ ರೂ. ನಗದು ಹಣವಿದ್ದು, ಈ ಹಣವನ್ನು ಅವರಿಗೇ ಬಿಡುಗಡೆ ಮಾಡುವ ಬಗ್ಗೆ ನ್ಯಾಯಾಲಯದಿಂದ ಆದೇಶವಾಗಬೇಕಿದೆ.   ದಕ್ಷಿಣ ವಿಭಾಗದ ಉಪ ಪೊಲೀಸ್ ಕಮಿಷನರ್ ಶರಣಪ್ಪ, ಇನ್ಸ್‍ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin