‘ಫ್ಯಾನ್’ ಚಿತ್ರದ ಫೋಸ್ಟರ್ ಲಾಂಚ್

ಈ ಸುದ್ದಿಯನ್ನು ಶೇರ್ ಮಾಡಿ

ಚಂದನವನಕ್ಕೆ ಪರದೆ ಮೇಲೆ ಕಿರುತೆರೆ ಬಳಗವೊಂದು ಸೇರಿಕೊಂಡು ನಿರ್ಮಿಸಿರುವ ಚಿತ್ರವೇ ಫ್ಯಾನ್. ಇದು ಶಾರುಕ್‍ಖಾನ್ ಅಭಿನಯದ ಹಿಂದಿಯ ಫ್ಯಾನ್ ಚಿತ್ರದ ರೀಮೇಕ್ ಅಲ್ಲ. ಕನ್ನಡ ಪ್ರತಿಭೆಗಳ ಸ್ವಮೇಕ್ ಚಿತ್ರ ಈ ಫ್ಯಾನ್. ಶಂಕರ್‍ನಾಗ್ ಅವರ ಅಭಿಮಾನಿಯೊಬ್ಬನ ಕಥೆಯನ್ನು ಈ ಚಿತ್ರದ ಮೂಲಕ ನಿರ್ದೇಶಕ ದರ್ಶಿತ್ ಭಟ್ ಬಲವಳ್ಳಿ ಅವರು ಹೇಳಹೊರಟಿದ್ದಾರೆ.

ಪ್ರತಿದಿನ ಕಡಿಮೆ ಎಂದರೂ ಎಲ್ಲಾ ಚಾನಲ್‍ಗಳಲ್ಲಿ ಸೇರಿದಂತೆ 50ಕ್ಕೂ ಹೆಚ್ಚು ಸೀರಿಯುಲ್‍ಗಳು ಪ್ರಸಾರವಾಗುತ್ತಿವೆ, ಇವುಗಳನ್ನೇ ನೋಡುವ ಒಂದು ಬಳಗವೇ ಇದೆ. ಇವರೆಲ್ಲ ಫೇಸ್‍ಬುಕ್, ವಾಟ್ಸಾಪ್, ಟ್ವಿಟರ್ ಮೂಲಕ ಇವುಗಳನ್ನು ಕುರಿತಂತೆ ಪ್ರತಿಕ್ರಿಯೆಗಳು, ವಿಮರ್ಶೆಗಳು, ಟೀಕೆಗಳನ್ನು ಮಾಡುತ್ತಾರೆ.

ಇಂಥ ಹಲವಾರು ಅಂಶಗಳನ್ನು ಇಟ್ಟುಕೊಂಡು ಧಾರಾವಾಹಿಯ ನಟ ಮತ್ತು ಆತನ ಅಭಿಮಾನಿಯ ಕಥೆಯನ್ನು ಫ್ಯಾನ್ ಚಿತ್ರದಲ್ಲಿ ಹೇಳಲಾಗಿದೆ. ಹಲವಾರು ಮೆಗಾ ಧಾರಾವಾಹಿಗಳಿಗೆ ಕಥೆ. ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ದರ್ಶಿತ್ ಭಟ್ ಬಲವಳ್ಳಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳ ಕುರಿತಂತೆ ನಡೆಯುವ ಸೀರಿಯಲ್ ಸಂತೆ, ಸಂವಾದದಂಥ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಇವರು ಆ ಸಂದರ್ಭದಲ್ಲಿ ಆಹ್ವಾನಿತರಿಂದ ಬರುವ ಸೋಜಿಗದ ಪ್ರಶ್ನೆಗಳನ್ನು ಕಂಡಾಗ ಇದೇ ಅಂಶ ಇಟ್ಟುಕೊಂಡು ಒಂದು ಕಥೆ ಮಾಡಿದರೆ ಹೇಗೆ ಎನಿಸಿದೆ.

ಆಗ ಆರಂಭವಾದ ಈ ಚಿತ್ರವೀಗ ಬಿಡುಗಡೆಯ ಹಂತದವರೆಗೆ ಬಂದಿದೆ. ಫ್ಯಾನ್ ಚಿತ್ರದ ಕಥೆ, ಚಿತ್ರಕತೆ, ಸಂಭಾಷಣೆಗಳನ್ನು ಕೂಡ ಇವರೇ ರಚಿಸಿದ್ದಾರೆ. ಅಪ್ಪಟ ಅಭಿಮಾನಿಯೊಬ್ಬನ ಅಭಿಮಾನದ ಕಥೆಯೇ ಫ್ಯಾನ್ ಚಿತ್ರದ ಎಳೆಯಾಗಿದೆ. ಚಿತ್ರದಲ್ಲಿ ಶಂಕರ್‍ನಾಗ್ ಅವರ ಬಗ್ಗೆ ಕೂಡ ಹೇಳಲಾಗಿದೆ. ಹಾಗಾಗಿ ಚಿತ್ರದ 80ರಷ್ಟು ಚಿತ್ರೀಕರಣವನ್ನು ಶಂಕರ್‍ನಾಗ್ ಅವರ ಹುಟ್ಟೂರು ಹೊನ್ನಾವರದಲ್ಲಿ ನಡೆಸಲಾಗಿದೆ.

ಆರ್ಯನ್ ಈ ಚಿತ್ರದ ನಾಯಕ. ಆತ ಶಂಕರ್‍ನಾಗ್ ಅವರ ಫ್ಯಾನ್. ಇದೇ ಪ್ರಥಮಬಾರಿಗೆ ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಅದ್ವಿತಿಶೆಟ್ಟಿ ಚಿತ್ರದ ನಾಯಕಿ. ಸೀರಿಯಲ್‍ಗಳಲ್ಲಿ ನಾಯಕನನ್ನು ನೋಡುತ್ತಲೇ ಆತನ ಅಭಿಮಾನಿಯಾಗಿರುತ್ತಾಳೆ. ಮುಂದೊಂದು ದಿನ ತನ್ನ ನೆಚ್ಚಿನ ನಟ ತನ್ನ ಕಣ್ಣೆದುರೇ ನಿಂತಾಗ ಆಗುವ ಆನಂದ ಹೇಗಿರುತ್ತೆ ಎಂಬುದನ್ನು ವ್ಯಕ್ತಪಡಿಸುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಮತ್ತೊಬ್ಬ ನಟಿ ಸುಮೀಕ್ಷಾ ಈ ಚಿತ್ರದಲ್ಲಿ ಒಬ್ಬ ಸೆಲಬ್ರಟಿ. ರಂಗಭೂಮಿ ನಟ ಪ್ರಸನ್ನ ಶೆಟ್ಟಿ ಅವ ರೊಂದಿಗೆ ಹಿರಿಯನಟ ವಿಜಯಕಾಶಿ, ರವಿಭಟ್, ಮಂಡ್ಯ ರಮೇಶ್, ತುಳು ನಟ ನವೀನ್. ಡಿ. ಪಡೀಲ, ರಘು ಪಾಂಡೇಶ್ವರ್, ವಿಟ್ಲ ಮುಂಗೇಶ್, ಸಂಗೀತಭಟ್, ವಿಜಯಲಕ್ಷ್ಮೀ ಉಪಾಧ್ಯ ಸೇರಿದಂತೆ ಹಲವಾರು ಹಿರಿಯ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ.

ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಸಾಹಿತ್ಯದ ನಾಲ್ಕು ಹಾಡುಗಳಿಗೆ ವಿಕ್ರಂ-ಚಂದನ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ಅಜನೀಶ್ ಲೋಕನಾಥ್ ಮಾಡಿದ್ದಾ. ಎಸ್.ಎಲ್.ಎನ್. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸವಿತಾ ಈಶ್ವರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಫೋಸ್ಟರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡರು, ಕಾರ್ಯದರ್ಶಿ ಬಾಮಾ ಹರೀಶ್, ನಿರ್ಮಾಪಕ ಬಾಮಾ ಗಿರೀಶ್ ಸೇರಿದಂತೆ ಮಂಡಳಿಯ ಹಲವು ಮುಖಂಡರ ಸಮ್ಮುಖದಲ್ಲಿ ಬಿಡುಗಡೆ
ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ