ಫ್ಲೈ ಓವರ್‍ನಿಂದ ಉರುಳಿಬಿದ್ದ ಕಾರು, ಬೆಚ್ಚಿಬಿದ್ದ ಜನ

ಈ ಸುದ್ದಿಯನ್ನು ಶೇರ್ ಮಾಡಿ

Car--02

ಯಲಹಂಕ, ಡಿ.20- ವಿಮಾನ ನಿಲ್ದಾಣದ ಕಡೆಯಿಂದ ಬೆಂಗಳೂರು ನಗರಕ್ಕೆ ಬರುತ್ತಿದ್ದ ಕಾರು ಸಿನಿಮೀಯ ರೀತಿ ಫ್ಲೈ ಓವರ್‍ನಿಂದ ಮೂರು ಪಲ್ಟಿಯಾಗಿ ಕೆಳಗೆ ಬಿದ್ದಿದ್ದು, ಈ ಭೀಕರ ಅಪಘಾತ ಕಂಡು ಸಂತೆಗೆ ಬಂದಿದ್ದ ಜನ ಒಂದು ಕ್ಷಣ ದಂಗಾಗಿ ಹೋದರು. ಈ ಘಟನೆಯಿಂದಾಗಿ ಕಾರಿನಲ್ಲಿದ್ದ ರಚಿತಾ ರೆಡ್ಡಿ (22), ಚೈತ್ರಾರೆಡ್ಡಿ (24) ಮತ್ತು ಕಾರು ಚಾಲನೆ ಮಾಡುತ್ತಿದ್ದ ವರುಣ್ ಜೈನ್ (32) ಎಂಬುವರ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಚಿತಾ ರೆಡ್ಡಿ ಮತ್ತು ಚೈತ್ರಾರೆಡ್ಡಿ ಬೆನ್ಸನ್‍ಟೌನ್ ನಿವಾಸಿಗಳಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ವರುಣ್ ಜೈನ್ ಲ್ಯಾವೆಲ್ಲೆ ರಸ್ತೆ ನಿವಾಸಿ. ಇಂದು ಮುಂಜಾನೆ 3.30ರಲ್ಲಿ ಈ ಮೂವರೂ ರಾಜಸ್ಥಾನ ನೋಂದಣಿಯ ಕಾರಿನಲ್ಲಿ ವಿಮಾನ ನಿಲ್ದಾಣ ಕಡೆಯಿಂದ ನಗರಕ್ಕೆ ಆಗಮಿಸುತ್ತಿದ್ದರು. ಕಾರು ರೈತರ ಸಂತೆ ಬಳಿ ಬರುತ್ತಿದ್ದಂತೆ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ಫ್ಲೈ ಓವರ್‍ನಿಂದ ಸುಮಾರು 15 ಅಡಿ ಕೆಳಕ್ಕೆ ಉರುಳಿ ಬಿದ್ದ ದೃಶ್ಯ ಬೆಚ್ಚಿ ಬೀಳಿಸುವಂತಿತ್ತು.

ಅಪಘಾತ ಸಂಭವಿಸಿದ್ದನ್ನು ನೋಡಿದ ಸಂತೆಗೆ ಬಂದಿದ್ದ ಜನರು ತಕ್ಷಣ ಯಲಹಂಕ ಸಂಚಾರಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಕಾರಿನೊಳಗೆ ಸಿಕ್ಕಿಕೊಂಡಿದ್ದ ಮೂವರನ್ನು ಹೊರ ಕರೆತಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂವರ ಪೈಕಿ ವರುಣ್ ಜೈನ್ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಂಚಾರ ದಟ್ಟಣೆ ಕಡಿಮೆ ಇದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಛಿದ್ರಛಿದ್ರವಾದ ಕಾರಿನ ಅವಶೇಷಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

Facebook Comments

Sri Raghav

Admin