ಬಂಟ್ವಾಳ ಬೂದಿ ಮುಚ್ಚಿದ ಕೆಂಡ, ಮಾರಕಾಸ್ತ್ರಗಳ ಸಮೇತ ಅಪರಿಚಿತರ ಎಂಟ್ರಿ ಗುಮಾನಿ, ಎಲ್ಲೆಡೆ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Bantwal--01

ಬಂಟ್ವಾಳ,ಜು.9- ದುಷ್ಕರ್ಮಿಗಳಿಂದ ಕಳೆದ ಜು.4ರಂದು ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್‍ಮಡಿವಾಳ ಶವಯಾತ್ರೆ ಸಂದರ್ಭದಲ್ಲಿ ನಿನ್ನೆ ಚಿರಂಜೀವಿ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮುಂತಾದ ಬೆಳಗವಣಿಗೆಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.  ಬಂಟ್ವಾಳ, ಬಿಸಿರೋಡ್, ಕೈಕಂಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ನಾಕಾಬಂಧಿ ಏರ್ಪಡಿಸಿದ್ದು , ತಾಲ್ಲೂಕಿನ ಒಳಬರುವ ಮತ್ತು ಒಳಹೋಗುವ ಎಲ್ಲ ವಾಹನಗಳನ್ನು ತೀವ್ರ ತಪಾಸಣೆ ಮಾಡಿ ಬಿಡಲಾಗುತ್ತಿದೆ.

ಅಪರಿಚಿತ ವಾಹನಗಳಲ್ಲಿ ಕೆಲವರು ಮಾರಕಾಸ್ತ್ರಗಳನ್ನು ತುಂಬಿಕೊಂಡು ಬಂಟ್ವಾಳ ತಾಲ್ಲೂಕನ್ನು ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ನಾಕಾಬಂಧಿ ಏರ್ಪಡಿಸಲಾಗಿದ್ದು , ಸಾವಿರಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು ಹಾಕಲಾಗಿದೆ. ನಿನ್ನೆ ಶರತ್ ಮಡಿವಾಳ ಶವಯಾತ್ರೆ ಸಂದರ್ಭ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಂಗಳೂರು ಹೊರವಲಯದ ಕುತ್ತಾರು ರಾಣಿಪುರ ನಿವಾಸಿ ಚಿರಂಜೀವಿ(24) ಎಂಬ ಯುವಕನ ತಲೆಗೆ ತಲ್ವಾರ್‍ನಿಂದ ಹೊಡೆದದ್ದರಿಂದ ಅವನ ಪರಿಸ್ಥಿತಿ ಗಂಭೀರವಾಗಿದೆ.
ಸಮೀಪದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿರಂಜೀವಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಅಘೋಷಿತ ಬಂದ್:

ಬಂಟ್ವಾಳ, ಬಿಸಿರೋಡ್ ಮತ್ತು ಕೈಕಂಬ ಪ್ರದೇಶಗಳಲ್ಲಿ ಇಂದು ಕೂಡ ಅಘೋಷಿತ ಬಂದ್ ಪರಿಸ್ಥಿತಿ ಮುಂದುವರೆದಿದೆ. ಅಂಗಡಿ -ಮುಂಗಟ್ಟುಗಳು, ಹೊಟೇಲ್‍ಗಳು ಮುಚ್ಚಿವೆ.  ಹಾಲು, ತರಕಾರಿ ಹೊರತುಪಡಿಸಿ ಯಾವುದೇ ಇತರೆ ವ್ಯಾಪಾರ ವಹಿವಾಟುಗಳು ನಡೆಯುತ್ತಿಲ್ಲ. ಹೊರಗಿನವರು ಈ ಪ್ರದೇಶಗಳಿಗೆ ಪ್ರವೇಶಿಸದಂತೆ ಪೊಲೀಸರು ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ಜನ ಪರದಾಡುವಂತಾಗಿದೆ.

ಕೆಸರೆರಚಾಟ:

ರಾಜಕೀಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಸಾವು ಹಾಗೂ ಹಲ್ಲೆ ಘಟನೆಗಳ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಪೊಲೀಸರು ಪರಿಸ್ಥಿತಿ ಶಾಂತಗೊಳಿಸಲು ಹರಸಾಹಸ ಪಡುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin