ಬಂಡಿಪುರದಲ್ಲಿ ಭಿಕ್ಷುಕನ ವೇಷದಲ್ಲಿದ್ದ ಒಡಿಶಾ ಬೇಟೆಗಾರ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Bandipur--004

ಬೆಂಗಳೂರು, ಅ.3-ಬಂಡಿಪುರ ಅರಣ್ಯ ಪ್ರದೇಶದಲ್ಲಿ ಭಿಕ್ಷುಕನ ವೇಷದಲ್ಲಿದ್ದ ಒಡಿಶಾದ ಶಂಕಿತ ಬೇಟೆಗಾರನೊಬ್ಬನನ್ನು ಹುಲಿ ರಕ್ಷಿತಾ ವಲಯದ ಅರಣ್ಯಾಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವ್ಯಾಘ್ರಗಳನ್ನು ಬೇಟೆಯಾಡಲು ಈತ ಶಿಕಾರಿದಾರರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದನು ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ.  ಬಂಡಿಪುರದ ಡಿ-ಲೈನ್ (ಹುಲಿ ಪ್ರದೇಶ) ದಾಟಿದ್ದ ನರೇನ್ ದೆಬುರಿ ಎಂಬಾತ ಬಂಧಿತ ಆರೋಪಿ. ಭಿಕ್ಷುಕ ಮತ್ತು ಮಾನಸಿಕ ಅಸ್ವಸ್ಥನ ಸೋಗಿನಲ್ಲಿ ಶಂಕಾಸ್ಪದವಾಗಿ ಅಡ್ಡಾಡುತ್ತಿದ್ದಾಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲವು ಆತಂಕಕಾರಿ ಮಾಹಿತಿ ಲಭಿಸಿವೆ ಎಂದು ಅರಣ್ಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಈತ ಅರಣ್ಯದ ಒಳ ಭಾಗ ಪ್ರವೇಶಿಸಲು ಕಾರಣವೇನು ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಕಂಡುಕೊಳ್ಳಲಾಗುತ್ತಿದೆ. ಹುಲಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶದಲ್ಲಿ ವ್ಯಾಘ್ರಗಳ ಚಲನವಲನಗಳ ಜಾಡು ಹಿಡಿದು ಆ ಮಾಹಿತಿಯನ್ನು ಬೇಟೆಗಾರರಿಗೆ ರವಾನಿಸುವ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದ (ಟ್ರ್ಯಾಕರ್) ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಭಾರತದ ಮಧ್ಯಭಾಗದ ಕೆಲವು ಬುಡಕಟ್ಟು ಅಲೆಮಾರಿಗಳು ಕಣ್ಣಿಟ್ಟಿದ್ದು, ವ್ಯಾಘ್ರಗಳನ್ನು ಬೇಟೆಯಾಡಿ ಕೊಂದು ಲಕ್ಷಾಂತರ ರೂ.ಗಳ ಬೆಲೆಬಾಳುವ ಚರ್ಮ, ಮೂಳೆ, ಉಗುರುಗಳನ್ನು ಕಳ್ಳಸಾಗಣೆ ಮಾಡಲಿದ್ದಾರೆ ಎಂಬ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‍ಟಿಸಿಎ) ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಾಗರಹೊಳೆ ಮತ್ತು ಬಂಡಿಪುರ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin