ಬಂದ್‍ಗೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

df1867cb-15a3-4003-b8e1-1964c04e8eee

ಬೆಳಗಾವಿ/ಹುಬ್ಬಳ್ಳಿ/ಧಾರವಾಡ,ಸೆ.9- ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳ ರೈತರು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ವ್ಯಾಪಕ ಬೆಂಬಲ ಪ್ರತಿಕ್ರಿಯೆ ಕಂಡುಬಂದಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರಗಳಲ್ಲಿ ಬೆಳಗ್ಗೆಯಿಂದಲೇ ಎಲ್ಲಾ ಅಂಗಡಿಮುಂಗಟ್ಟುಗಳು ಬಂದ್ ಆಗಿದ್ದವು. ಅಲ್ಲಲ್ಲಿ ಖಾಸಗಿ ವಾಹನ ಹಾಗೂಆಟೋ ಸಂಚಾರ ಆರಂಭವಿದ್ದರೂ ಹೋಟೆಲ್, ಚಿತ್ರಮಂದಿರಗಳು ಬಂದ್ ಮಾಡಲಾಗಿತ್ತು. ಶಾಲೆಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.  ರೈತ ಹೋರಾಟಗಾರರು, ಕರವೇ ಕಾರ್ಯಕರ್ತರು ಇಂದು ನಗರದ ಜುಬಲಿ ಸರ್ಕಲ್ ಬಳಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರ ಪ್ರತಿಕೃತಿ ದಹಿಸಿ ಟಯರ್‍ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ದ ಘೋಷಣೆ ಮೊಳಗಿದವು.

ಗೂಟ ಚಳುವಳಿ: ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ತಂಟೆಗೆ ಯಾರಾದರೂ ಬಂದರೆ ಮನೆಯ ಗೂಟ ಕಿತ್ತು ಹೊಡೆಯಿರಿ ಎಂದು ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ರೈತರಪರ ಧ್ವನಿ ಎತ್ತಿದ್ದನ್ನು ನೆನಪಿಸಿದ ರೈತರು ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗೂಟ ಬಡಿಯುವ ಚಳುವಳಿ ನಡೆಸಿದರು. ಹುಬ್ಬಳ್ಳಿಯಲ್ಲೂ ಸಹ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ರಾಜ್ಯ ರಸ್ತೆ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಅಲ್ಲಲ್ಲಿ ಕೆಲವು ವಾಹನಗಳ ಓಡಾಟ ಬಿಟ್ಟರೆ, ಬಸ್‍ಗಳಿಲ್ಲದೆ ದೂರ ದೂರದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಳಗಾವಿ ವರದಿ: ನಗರದ ಚನ್ನಮ್ಮ ವೃತ್ತದಲ್ಲಿ ವಾಹನಗಳನ್ನು ತಡೆಯಲು ಯತ್ನಿಸಿದ ರೈತರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಕನ್ನಡಪರ ಸಂಘಟನೆಗಳು ಇಂದು ಬೆಳಗ್ಗೆಯಿಂದಲೇ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಯಲಲಿತ ಪ್ರತಿಕೃತಿ ದಹನ ಮಾಡಿದರು. ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಗದಗ ವರದಿ: ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಎಂದಿನಂತೆ ಬಸ್ ಓಡಾಟ, ಆಟೋ ಸಂಚಾರ ಪ್ರಾರಂಭವಾಗಿದೆ. ಜನಜೀವನ ಮಾಮೂಲಿನಂತೆ ಇದೆ. ಬೆಳಗ್ಗೆ ಕೆಲ ಹೊತ್ತು ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ನಂತರ ಮತ್ತೆ ಅಂಗಡಿಗಳನ್ನು ತೆರೆಯಲಾಯಿತು. ಕನ್ನಡಪರ ಸಂಘಟನೆಗಳವರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಂತರ ಗಾಂಧಿಚೌದ ಬಳಿ ಜಯಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin