ಬಂದ್ ಯಶಸ್ವಿಯಾಗದಂತೆ ರಾಜ್ಯ ಸರ್ಕಾರದಿಂದ ವ್ಯವಸ್ಥಿತ ಪಿತೂರಿ, ವಾಟಾಳ್ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

Vatal--001

ಬೆಂಗಳೂರು,ಜೂ.12- ರಾಜ್ಯ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಏನೇ ಪ್ರಯತ್ನ ಮಾಡಿದರೂ ಬೇಡಿಕೆಗಳು ಈಡೇರುವವರೆಗೂ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಕನ್ನಡ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.   ಟೌನ್‍ಹಾಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಯಶಸ್ವಿಯಾಗದಂತೆ ರಾಜ್ಯ ಸರ್ಕಾರ ವ್ಯವಸ್ಥಿತ ಪಿತೂರಿ ನಡೆಸಿದೆ. ಕೆಲವು ಪ್ರತಿಭಟನಾಕಾರರನ್ನು ರಾತ್ರಿಯೇ ಬಂಧಿಸಲಾಗಿದೆ. ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎಂದು ಗುಡುಗಿದರು.

ನಮ್ಮ ಹೋರಾಟ ಕನ್ನಡಪರ ಹಾಗೂ ರೈತಪರವಾಗಿದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಇಟ್ಟುಕೊಂಡು ನಾವು ಪ್ರತಿಭಟನೆ ನಡೆಸುತ್ತಿಲ್ಲ. ಕೆಲವು ಸಂಘಟನೆಗಳನ್ನು ಮುಂದೆ ಬಿಟ್ಟು ಪ್ರತಿಭಟನೆ ಯಶಸ್ವಿಯಾಗದಂತೆ ಸರ್ಕಾರ ಪಿತೂರಿ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ರಾಜ್ಯದ 140ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇಂದು ಇಡೀ ರಾಜ್ಯದಲ್ಲಿ ಕುಡಿಯುವ ನೀರು, ಜಾನುವಾರುಗಿಗೆ ಮೇವು, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ದಶಕಗಳ ಈ ಬೇಡಿಕೆಯನ್ನು ಈಡೇರಿಸುವಂತೆ ನಾವು ನಡೆಸಿದ ಹೋರಾಟ ಈಡೇರದೇ ಇದ್ದಾಗ ಬಂದ್‍ಗೆ ಕರೆ ಕೊಡುವುದು ಅನಿವಾರ್ಯ ಎಂದು ವಾಟಾಳ್ ನಾಗರಾಜ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ನನ್ನ ಪ್ರಕಾರ ಇಂದು ಕರೆ ನೀಡಲಾಗಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ. ಕೆಲವು ಸಂಘಟನೆಗಳು ಬಾರದಿದ್ದರೂ ತೊಂದರೆಯಿಲ್ಲ. ಇಡೀ ಕರ್ನಾಟಕವೇ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿರುವಾಗ ಕೆಲವರು ದೂರ ಉಳಿದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.  ಭದ್ರಾ ಮೇಲ್ದಂಡೆ, ಮಹದಾಯಿ, ಕುಡಿಯುವ ನೀರು, ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ, ರೈತರ ಸಾಲಮನ್ನಾ, ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಡೆಸುತ್ತಿರುವ ಅಟ್ಟಹಾಸಕ್ಕೆ ಕಡಿವಾಣ, ಕಾಸರಗೂಡಿನಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕಾಗಿದೆ ಎಂದರು.
ಇದು ನಿನ್ನೆ ಮೊನ್ನೆಯಿಂದ ಆರಂಭವಾಗಿರುವ ಹೋರಾಟವಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ತುಮಕೂರು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಎತ್ತಿನಹೊಳೆ ಯೋಜನೆ ಜಾರಿ ಮಾಡಬೇಕೆಂಬುದು ಈ ಭಾಗದ ಜನತೆಯ ಹಲವು ದಶಕಗಳ ಹೋರಾಟವಾಗಿವೆ.

ಇದೇ ರೀತಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಅನುಷ್ಠಾನವಾಗಬೇಕೆಂದು ಕಳೆದ ಎರಡು ವರ್ಷಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಮೇಲೆ ಗೋವಾ, ಗೋವಾದ ಮೇಲೆ ಕರ್ನಾಟಕ, ಕರ್ನಾಟಕದ ಮೇಲೆ ಈ ಎರಡೂ ರಾಜ್ಯಗಳು ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.   ಇನ್ನು ಪ್ರಧಾನಿ ನರೇಂದ್ರಮೋದಿಗಂತೂ ಈ ಸಮಸ್ಯೆ ಪರಿಹರಿಸುವಷ್ಟು ವ್ಯವಧಾನವಿಲ್ಲ. ರಾಜ್ಯ ಸರ್ಕಾರ ಯುವ ನಾಯಕ ರಾಹುಲ್ ಗಾಂಧಿ ಒಡ್ಡೋಲಗಕ್ಕೆ ಸಿದ್ದತೆ ನಡೆಸಿದೆ. ಇಂತಹ ವೇಳೆ ನಾವು ಬಂದ್ ಮಾಡದೆ ಇನ್ನೇನು ಮಾಡಬೇಕೆಂದು ಪ್ರಶ್ನಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ನಮ್ಮ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತದೆ. ರಾಜ್ಯ ಸರ್ಕಾರ ಕನ್ನಡ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಪ್ರತಿಭಟನೆಗೆ ಯಾರೇ ಬಂದರೂ ಅಭ್ಯಂತರವಿಲ್ಲ ಎಂದು ಸ್ಪಷ್ಟಿಸಿದರು. ಕನ್ನಡ ಸೇನೆ ಅಧ್ಯಕ್ಷ ಎನ್.ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.   ಟೌನ್‍ಹಾಲ್‍ನಿಂದ ಪ್ರತಿಭಟನಾನಿರತರು ಹಡ್ಸನ್ ವೃತ್ತ , ಮೈಸೂರು ಬ್ಯಾಂಕ್ ವೃತ್ತದ ಮೂಲಕ ಸ್ವಾತಂತ್ರ್ಯವನ ಉದ್ಯಾನದ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಪೊಲೀಸರು ವಿಫಲಗೊಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin