ಬಂಧಿತ ಕಾವೇರಿ ಪ್ರತಿಭಟನಾಕಾರರ ಬಿಡುಗಡೆಗೆ ಲಕ್ಷ ರೂ. ಲಂಚ..!

ಈ ಸುದ್ದಿಯನ್ನು ಶೇರ್ ಮಾಡಿ

Cauvery

ಬೆಂಗಳೂರು, ಅ.4- ಕಾವೇರಿ ವಿಷಯದಲ್ಲಿ ಅನ್ಯಾಯವಾದಾಗ ಹೋರಾಟ ನಡೆಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿ ದೌರ್ಜನ್ಯ ನಡೆಸಲಾಗುತ್ತಿದ್ದು, ಅಮಾಯಕರನ್ನು ಬಿಡುಗಡೆ ಮಾಡಲು ಸಾವಿರಾರು ರೂ. ಲಂಚ ಪಡೆಯಲಾಗುತ್ತಿದೆ ಎಂದು ನವ ಕರ್ನಾಟಕ ಸೇನೆ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸೇನೆಯ ಅಧ್ಯಕ್ಷ ಆರ್.ಜಯಕುಮಾರ್‍ಗೌಡ, ಬೆಂಗಳೂರಿನ ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಚಂದ್ರಾಲೇಔಟ್, ರಾಜರಾಜೇಶ್ವರಿನಗರ, ಪೀಣ್ಯ ಸೇರಿದಂತೆ 16 ಠಾಣೆಗಳ ವ್ಯಾಪ್ತಿಯಲ್ಲಿ ಕನ್ನಡ ಹೋರಾಟಗಾರರನ್ನು ಬಂಧಿಸಲಾಗಿದ್ದು, ಅವರಲ್ಲಿ ಶೇ.80ರಷ್ಟು ಅಮಾಯಕರಿದ್ದಾರೆ ಎಂದು ಹೇಳಿದರು.

ಗುರುದೇವ ನಾರಾಯಣಕುಮಾರ್ ಮಾತನಾಡಿ, ಬಂಧಿತರನ್ನು ಬಿಡುಗಡೆ ಮಾಡಲು 30ಸಾವಿರದಿಂದ ಲಕ್ಷ ರೂ.ವರೆಗೂ ಲಂಚ ಪಡೆಯಲಾಗುತ್ತಿದೆ. ಮೈಕೋಲೇಔಟ್‍ನಲ್ಲಿ ಬಂಧಿತರಾದವರನ್ನು ಬಿಡಿಸಿಕೊಳ್ಳಲು ಹೋದಾಗ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡದಿರಲು ನಮಗೆ ಮೇಲಿನಿಂದ ಆದೇಶವಿದೆ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂಬ ಅಂಶವನ್ನು ತಿಳಿಸಿದರು.  ಹಲವು ಪೊಲೀಸ್ ಅಧಿಕಾರಿಗಳು ಕನ್ನಡ ವಿರೋಧಿ ಧೋರಣೆ ತಾಳಿದ್ದು, ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡಲು ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿದರು.

ಕನ್ನಡ ಸಂಘಟನೆಯವರು ಹೋರಾಟ ಮಾಡಿದ್ದು ಸ್ವಾರ್ಥಕ್ಕಾಗಿ ಅಲ್ಲ. ನಾಡಿನ ಹಿತರಕ್ಷಣೆಗಾಗಿ. ಸರ್ಕಾರ ಈ ರೀತಿ ದೌರ್ಜನ್ಯ ನಡೆಸಿದರೆ ಮುಂದೆ ಅನ್ಯಾಯವಾದಾಗ ಕೇಳಿದವರಿಲ್ಲದಂತಾಗುತ್ತದೆ. ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಿ ದಾಖಲಿಸಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪೊಲೀಸರು ದೌರ್ಜನ್ಯ ನಡೆಸಿರುವುದಕ್ಕೆ ನಮ್ಮ ಬಳಿ ಸಾಕ್ಷಿಗಳಿವೆ. ಸುಳ್ಳು ಆರೋಪಗಳನ್ನು ದಾಖಲಿಸಲಾಗುತ್ತಿದೆ. ಕೊಲೆ ಯತ್ನದಂತಹ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಜಿಲ್ಲಾಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ಸರ್ಕಾರ ಆಯಕಟ್ಟಿನ ಸ್ಥಳಗಳಿಗೆ ಕನ್ನಡಿಗ ಅಧಿಕಾರಿಗಳನ್ನೇ ನೇಮಿಸಬೇಕೆಂದು ಒತ್ತಾಯಿಸಿದರು.
ಪತ್ರಕರ್ತ ರ.ಸೋಮನಾಥ್, ನಿರ್ಮಾಪಕ ಸಂಪತ್, ಹೋರಾಟಗಾರರಾದ ಪಾಲನೇತ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಬಂದ್ ವೇಳೆ ದುರುದ್ದೇಶಪೂರಕವಾಗಿ ಕಾನೂನು ಬಾಹಿರ ಕೆಲಸಗಳನ್ನು ಮಾಡಿದ ಆರೋಪಿಗಳನ್ನು ರಕ್ಷಿಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ಆದರೆ, ಅಮಾಯಕರ ಮೇಲೆ ದೌರ್ಜನ್ಯವಾಗಬಾರದು. ಬೇಷÀರತ್ತಾಗಿ ಪ್ರಕರಣಗಳನ್ನು ಹಿಂಪಡೆಯಿರಿ ಮತ್ತು ಜೈಲಿನಲ್ಲಿರುವವರನ್ನು ಬಿಡುಗಡೆ ಮಾಡಿ ಎಂದು ಇದೇ ವೇಳೆ ಹೋರಾಟಗಾರರು ಒತ್ತಾಯಿಸಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin