ಬಗೆಹರಿಯದ ಒಕ್ಕಲಿಗರ ಸಂಘದ ಬಿಕ್ಕಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Vakkaligara-sangha

ಬೆಂಗಳೂರು, ಫೆ.15-ಒಡೆದ ಮನೆಯಂತಾಗಿರುವ ರಾಜ್ಯ ಒಕ್ಕಲಿಗರ ಸಂಘದ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಘದ ನಿರ್ದೇಶಕರುಗಳ ಸಭೆ ನಡೆದ ನಂತರವೂ ಭಿನ್ನಮತದ ಚಟುವಟಿಕೆಗಳು ಸಂಘದಲ್ಲಿ ಮುಂದುವರೆದಿವೆ. ನಿರ್ದೇಶಕರೇ ಒಬ್ಬರ ಮೇಲೊಬ್ಬರು ಅವ್ಯವಹಾರ, ಭ್ರಷ್ಟಾಚಾರದ ಆರೋಪವನ್ನು ಹೊರಿಸುತ್ತಿರುವುದರಿಂದ ಹಾದಿಬೀದಿಯಲ್ಲಿ ಸಂಘದ ಬಗ್ಗೆ ಮಾತನಾಡುವಂತಾಗಿದೆ.  ಸಮುದಾಯದ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಬಹುತೇಕ ನಿರ್ದೇಶಕರು ಒಪ್ಪಿಗೆ ನೀಡಿದ ನಂತರವೂ ಸಂಘದಲ್ಲಿ ಸಹಮತ ಕಂಡುಬಂದಿಲ್ಲ. ಅವಿಶ್ವಾಸ ನಿರ್ಣಯ ನೋಟಿಸ್ ನೀಡಿದ್ದ 18 ಮಂದಿ ನಿರ್ದೇಶಕರು ಸೋಮವಾರ ಸಭೆ ಸೇರಿ ಅಧ್ಯಕ್ಷರಾಗಿದ್ದ ಬೆಟ್ಟೇಗೌಡ ಮತ್ತು ಇತರೆ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.

ಫೆ.22 ರಂದು ಅಧ್ಯಕ್ಷ ಹುದ್ದೆ ಸೇರಿದಂತೆ ಇತರೆ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವ ದಿನಾಂಕವನ್ನೂ ಕೂಡ ನಿಗದಿಪಡಿಸಲಾಗಿದೆ. ಸದ್ಯಕ್ಕೆ ಮುಂದಿನ ಅಧ್ಯಕ್ಷರು, ಪದಾಧಿಕಾರಿಗಳು ಯಾರಾಗಬೇಕೆಂಬ ನಿರ್ಣಯ ಆಗಿಲ್ಲ. ಜನಾಂಗದ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಿರುವುದಾಗಿ ಬಹುತೇಕ ನಾಯಕರು ಹೇಳುತ್ತಿದ್ದಾರೆ.
ಆದರೆ ಪದಚ್ಯುತಿಗೊಳಿಸಿದ ನಿರ್ಣಯವೇ ನಿಯಮ ಬಾಹಿರ ಎಂದು ಕೆಲವು ನಿರ್ದೇಶಕರು ಕಾನೂನು ಹೋರಾಟ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಹೀಗಾಗಿ ಬಗೆಹರಿಯಬೇಕಾಗಿದ್ದ ಬಿಕ್ಕಟ್ಟು ಮತ್ತಷ್ಟು ಜಟಿಲವಾಗುವ ಸಂದರ್ಭಗಳು ಹೆಚ್ಚಾಗಿವೆ. ಅಧಿಕಾರಕ್ಕಾಗಿ ಪದೇ ಪದೇ ಉಂಟಾಗುತ್ತಿರುವ ಭಿನ್ನಮತದಿಂದ ಒಕ್ಕಲಿಗ ಸಮುದಾಯದಲ್ಲಿ ಸಂಘದ ನಿರ್ದೇಶಕರ ಬಗ್ಗೆ ತೀವ್ರ ಅಸಮಾಧಾನ ಉಂಟಾಗಿದೆ.

ಬಹಳಷ್ಟು ಮಂದಿ ಆಡಳಿತಾಧಿಕಾರಿ ನೇಮಿಸಿದರೆ ಸೂಕ್ತ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸಮುದಾಯದ ನಾಯಕರು ಭಿನ್ನಮತ ಮರೆತು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿ ಕಡೆ ಗಮನ ಹರಿಸುವಂತೆ ಸಲಹೆ ಮಾಡುತ್ತಿದ್ದಾರೆ. ಈ ನಡುವೆ ಪದಾಧಿಕಾರಿಗಳ ಆಕಾಂಕ್ಷಿಯಾಗಿರುವವರು, ಜನಾಂಗದ ಪ್ರಮುಖ ರಾಜಕಾರಣಿಗಳನ್ನು ಸಂಪರ್ಕಿಸತೊಡಗಿದ್ದಾರೆ.
ಶ್ರೀಗಂಧದ ಕಾವಲು ಬಳಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ಆಸ್ಪತ್ರೆ ಉದ್ಘಾಟಿಸಿ ತಿಂಗಳು ಕಳೆದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಅಭಿವೃದ್ಧಿ ಕಡೆ ಗಮನಹರಿಸಬೇಕಾದ ನಿರ್ದೇಶಕರು ಪದೇ ಪದೇ ಅವಿಶ್ವಾಸ ನಿರ್ಣಯದ ಹಾದಿ ಹಿಡಿದಿರುವುದು ಮುಜುಗರವನ್ನುಂಟು ಮಾಡುತ್ತಿದೆ ಎಂದು ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟುಗಳ ದಾಖಲಾತಿಯಲ್ಲಿ ಹಣ ಮಾಡಲಾಗುತ್ತಿದೆ ಎಂಬ ಆರೋಪ ಸರ್ವೇಸಾಮಾನ್ಯವಾಗಿ ಕೇಳಿ ಬರುತ್ತಿದೆ.   ಒಟ್ಟಾರೆ ಜನಾಂಗದ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ಸಂಘದ ನಿರ್ದೇಶಕರ ಭಿನ್ನಮತ ಶಮನಗೊಳ್ಳುವ, ಇಲ್ಲವೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳು ಅವಲಂಬಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin