ಬಡವರನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ಬೆಂಬಲಕ್ಕೆ ನಿಂತ ರಾಜಕಾರಣಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Hospitals--02

ಬೆಂಗಳೂರು,ನ.16-ಖಾಸಗಿ ಆಸ್ಪತ್ರೆಗಳು ಸುಲಿಗೆಯ ಕೇಂದ್ರಗಳು ಎಂಬುದು ಜಗಜ್ಜಾಹೀರವಾಗಿದೆ. ಹೈಟೆಕ್ ಆರೋಗ್ಯ ಸೇವೆಯ ನೆಪದಲ್ಲಿ ರೋಗಿಗಳನ್ನು ಸುಲಿಯುವ ಕೇಂದ್ರಗಳಾಗಿರುವುದು ಸುಳ್ಳಲ್ಲ. ಇಂತಹ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಸರ್ಕಾರ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿರುವುದನ್ನು ಎಲ್ಲರೂ ಬೆಂಬಲಿಸಬೇಕಿತ್ತು. ದುರಂತವೆಂದರೆ ಆಡಳಿತ ಪಕ್ಷದ ಕೆಲ ಸದಸ್ಯರು, ಪ್ರತಿಪಕ್ಷದವರು ಈ ವಿಧೇಯಕವನ್ನು ವಿರೋಧಿಸುತ್ತಿರುವುದು ವಿಪರ್ಯಾಸ.

ವಿಧೇಯಕದಲ್ಲಿ ಹಲವು ನ್ಯೂನತೆಗಳಿರಬಹುದು. ಅವುಗಳನ್ನು ಸದನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ ವಿಧೇಯಕ ಮಂಡನೆಗೆ ಮೊದಲೇ ಖಾಸಗಿ ವೈದ್ಯರು ಪ್ರತಿಭಟನೆಗಿಳಿದು ಸರ್ಕಾರವನ್ನೇ ಬ್ಲಾಕ್‍ಮೇಲ್ ಮಾಡುವ ತಂತ್ರ ಅನುಸರಿಸುತ್ತಿರುವುದು ಎಷ್ಟು ಸಮಂಜಸ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಖಾಸಗಿ ಆಸ್ಪತ್ರೆ ವೈದ್ಯರು ಬಿಲ್ ಮಂಡನೆಗೂ ಮೊದಲೇ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ. ಇವರಿಗೆ ಹೆದರಿ ವಿಧೇಯಕ ಮಂಡಿಸದಿದ್ದರೆ ಮುಂದೆ ಸರ್ಕಾರಗಳನ್ನು ಯಾವ ರೀತಿ ಅಲ್ಲಾಡಿಸಲಿದ್ದಾರೆ ಎಂಬ ಭೀತಿ ಜನರನ್ನು ಕಾಡತೊಡಗಿದೆ. ಆಳುವ ಸರ್ಕಾರಗಳು ಜನಪರವಾಗಿರಬೇಕು. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕು. ಆದರೆ ಇಂತಹ ಖಾಸಗಿಯವರ ಲಾಭಿಗೆ ಮಣಿಯಬಾರದು. ಸಾಕಷ್ಟು ಪರಿಶೀಲನೆ ನಡೆಸಿ ವಿಧೇಯಕ ರೂಪಿಸಿ ಮಂಡನೆಗೆ ಸರ್ಕಾರ ಮುಂದಾಗಿದೆ. ಆದರೆ ವೈದ್ಯರು ಪ್ರತಿಭಟನೆ ನಡೆಸಿ ವಿಧೇಯಕಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ಪ್ರತಿಪಕ್ಷಗಳು ನಿಂತಿವೆ.

ನಾಲ್ಕು ದಿನಗಳ ಕಾಲ ವೈದ್ಯರು ಪ್ರತಿಭಟನೆ ನಡೆಸಿ ರಾಜ್ಯಾದ್ಯಂತ ಹಲವರ ಸಾವುನೋವಿಗೆ ಕಾರಣವಾಗಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಮಸೂದೆಯನ್ನು ವಾಪಸ್ ಪಡೆಯುವುದಾಗಿ ಹೇಳುವ ಮೂಲಕ ಖಾಸಗಿ ಆಸ್ಪತ್ರೆ ವೈದ್ಯರ ಸುಲಿಗೆಯನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇಷ್ಟು ತರಾತುರಿಯಲ್ಲಿ ಈ ವಿಧೇಯಕ ಮಂಡನೆ ಅಗತ್ಯವಿತ್ತೆ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಸರ್ಕಾರವೂ ಕೂಡ ಕೂಲಂಕುಷವಾಗಿ ಪರಿಶೀಲಿಸದೆ ವೈದ್ಯರನ್ನು ಬೀದಿಗಿಳಿಯುವಂತೆ ಮಾಡಿ ಹಲವರ ಸಾವುನೋವಿಗೆ ಕಾರಣವಾಗಿದೆ. ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಪದೇ ಪದೇ ಇಂತಹ ಪ್ರತಿಭಟನೆಗಳು ಮರುಕಳಿಸುತ್ತಲೇ ಇರುತ್ತವೆ.

Facebook Comments

Sri Raghav

Admin