ಬಡವರ ಮೇಲಿನ ದರ್ಪ ನಿಲ್ಲಿಸಿ , ಬಲಾಢ್ಯರ ಒತ್ತುವರಿ ತೆರವುಗೊಳಿಸಿ

ಈ ಸುದ್ದಿಯನ್ನು ಶೇರ್ ಮಾಡಿ

gsDGsdg

ಬೆಂಗಳೂರು, ಆ.8- ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ಆದರೆ ಈ ಕಾರ್ಯಾಚರಣೆ ಬಡವರಿಗೊಂದು ನ್ಯಾಯ. ಬಲ್ಲಿದರಿಗೊಂದು ನ್ಯಾಯ ಎಂಬಂತಾಗಿದೆ. ಕೂಡಲೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಪ್ರತಿಷ್ಠಿತರ ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು
ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  ನಗರದಲ್ಲಿ 857 ಕಿ.ಮೀ ಉದ್ದದ ರಾಜಕಾಲುವೆ ಹಾಗೂ 3428 ಎಕರೆ ಬಫರ್ ಜೋನ್ ಇದೆ.   ಇದರಲ್ಲಿ 480 ಕಿ.ಮೀ ಉದ್ದದ ರಾಜಕಾಲುವೆ ಮತ್ತು 1500 ಎಕರೆ ಬಫರ್ ಜೋನ್ ಒತ್ತುವರಿಯಾಗಿದೆ.   668 ಬಿಲ್ಡರ್‍ಗಳು, 29 ಟೆಕ್ ಪಾರ್ಕ್‍ಗಳು, 150ಕ್ಕೂ ಹೆಚ್ಚು ಐಟಿ ಬಿಟಿ ಕಂಪೆನಿಗಳು, 30ಕ್ಕೂ ಹೆಚ್ಚು ಮಾಲ್‍ಗಳು ರಾಜಕಾಲುವೆ ಮತ್ತು ಬಫರ್ ಜೋನ್ ಒತ್ತುವರಿ ಮಾಡಿಕೊಂಡಿರುವುದು ದಾಖಲೆಗಳಲ್ಲಿ ಬಹಿರಂಗವಾಗಿದೆ.

ಅದರಲ್ಲೂ ಪ್ರಮುಖವಾಗಿ ಪ್ರತಿಷ್ಠಿತ ಕಂಪೆನಿಗಳಾದ ಶೋಭಾ, ಪ್ರೆಸ್ಟೀಜ್, ಮಂತ್ರಿ, ಬ್ರಿಗೇಡ್, ನಿತೇಶ್, ಮಹಾವೀರ್, ಎಲ್‍ಅಂಡ್‍ಟಿ, ಟಾಟಾ ಹೌಸಿಂಗ್ ಕಾರ್ಪೊರೇಷನ್ , ಮಾನ್ಯತಾ, ಆರ್‍ಎಂಝಡ್, ಸಲಾರ್‍ಕುರಿಯಾ, ಸೆಸ್ನಾ, ಬಾಗ್‍ಮನೆ ಟೆಕ್‍ಪಾರ್ಕ್‍ಗಳು ಹಾಗೂ ಓರಾಯನ್, ಗರುಡಾ ಮತ್ತು ಪಿವಿಆರ್ ಮಾಲ್‍ನವರು ಶೇ.75ರಷ್ಟು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಆದರೆ ಇಂತಹ ಪ್ರತಿಷ್ಠಿತರು ಮಾಡಿಕೊಂಡಿರುವ ರಾಜಕಾಲುವೆ ಮತ್ತು ಬಫರ್ ಜೋನ್‍ಗಳನ್ನು ತೆರವುಗೊಳಿಸಲು ಮುಂದಾಗದ ಬಿಬಿಎಂಪಿ ಆಡಳಿತ ಕೇವಲ ಮಧ್ಯಮ ಮತ್ತು ಕೆಳ ವರ್ಗದವರ ಮನೆಗಳನ್ನು ಕೆಡವಿ ಹಾಕುತ್ತಿರುವುದು ಅಕ್ಷಮ್ಯ ಅಪರಾಧ.  ದೊಡ್ಡ ದೊಡ್ಡವರ ತಂಟೆಗೆ ಹೋಗದ ಬಿಬಿಎಂಪಿ ಅಧಿಕಾರಿಗಳು ಕೇವಲ ಸಣ್ಣ ಗಾತ್ರದ ಮನೆ ಕಟ್ಟಿಕೊಂಡು ಸೂರು ಕಂಡಿರುವ ಬಡ ವರ್ಗದವರನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತಿರುವುದು ಆಡಳಿತ ವ್ಯವಸ್ಥೆಯಲ್ಲಿನ ಪಕ್ಷಪಾತದ ಧೋರಣೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಈಗಲಾದರೂ ತಮ್ಮ ಆಡಳಿತ ಪಕ್ಷಪಾತ ಧೋರಣೆಯಿಂದ ಹೊರ ಬಂದು ಶೇ.75ರಷ್ಟು ರಾಜಕಾಲುವೆ ಮತ್ತು ಬಫರ್ ಜೋನ್ ಒತ್ತುವರಿ ಮಾಡಿಕೊಂಡಿರುವ ಗಣ್ಯರ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು.

ಸರ್ವೋಚ್ಚ ನ್ಯಾಯಾಲಯ ಒತ್ತುವರಿ ತೆರವಿಗೆ ನೀಡಿರುವ ಆದೇಶವನ್ನು ಎಲ್ಲಾ ವರ್ಗದ ಜನರ ವಿರುದ್ಧವೂ ಪ್ರಯೋಗಿಸಲು ಅವಕಾಶವಿದೆ. ಹೀಗಾಗಿ ಕೂಡಲೇ ಬಲಾಢ್ಯರ ವಿರುದ್ಧವೂ ಬಲಪ್ರಯೋಗಿಸಬೇಕು ಹಾಗೂ ಈ ಅಕ್ರಮಕ್ಕೆ ಕಾರಣಕರ್ತರಾಗಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಬೇಕು ಎಂದು ರಮೇಶ್ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಅದೇ ರೀತಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿರು ಅವರು ಬಡವರಿಗೆ ಆಗುತ್ತಿರುವ ಅನ್ಯಾಯ ಹಾಗೂ ಬಲಾಢ್ಯರ ತಂಟೆಗೆ ಹೋಗದ ಬಿಬಿಎಂಪಿ ಅಧಿಕಾರಿಗಳ ವರ್ತನೆ ಬಗ್ಗೆಯೂ ಅವರು ದೂರು ನೀಡಿದ್ದಾರೆ.ಬಡವರ ಮೇಲಿನ ದರ್ಪ ನಿಲ್ಲಿಸಿ , ಬಲಾಢ್ಯರ ಒತ್ತುವರಿ ತೆರವುಗೊಳಿಸಿ

Facebook Comments

Sri Raghav

Admin