ಬಡವ-ಶ್ರೀಮಂತ ಭಾರತ : ದೊರೆಸ್ವಾಮಿ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

doreswamy

ಮಹದೇವಪುರ, ಆ.22-ಬಡವ ಹಾಗೂ ಶ್ರೀಮಂತರ ಭಾರತ ಎಂಬ ಎರಡು ದೇಶಗಳು ನಮ್ಮ ದೇಶದಲ್ಲಿ ಕಾಣುವಂತಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.  ಮಹದೇವಪುರ ಕ್ಷೇತ್ರದ ಹೂಡಿಯಲ್ಲಿ ಭಾರತೀಯರ ಸೇವಾ ಸಮಿತಿ ಸಂಘಟನೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದೊರೆತು 70 ವರ್ಷ ಕಳೆದರೂ ಇನ್ನೂ ಪಂಜರದೊಳಗಿನ ಹಕ್ಕಿಯಂತೆ ಜೀವನ ಸಾಗಿಸುವಂತಾಗಿದೆ. ಸಂಪೂರ್ಣ ಸ್ವಾತಂತ್ರ್ಯ ಲಭಿಸಿರುವುದು ಗೋಚರವಾಗುತ್ತಿಲ್ಲ ಎಂದು ಹೇಳಿದರು.

ಅತ್ಯಂತ ಬಡತನದಿಂದಲೇ ಬೆಳೆದು ಈ ಪ್ರಪಂಚ ಕಂಡ ಅತ್ಯುತ್ತಮ ಸಂವಿಧಾನ ನಿರ್ಮಿಸಿದ ಡಾ. ಬಿ.ಆರ್.ಅಂಬೇಡ್ಕರ್‍ರವರು ಬಯಸಿದ್ದರೆ ಐಷಾರಾಮಿ ಜೀವನ ಸಾಗಿಸಬಹುದಿತ್ತು. ಆದರೆ, ಅವರು ದಲಿತರು, ಅಲ್ಪಸಂಖ್ಯಾತರು, ತುಳಿತಕ್ಕೊಳಗಾದವರ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಇಂತಹ ವ್ಯಕ್ತಿಗಳು ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಬೇಕೆಂದರು.ಬಡವರು ಹಾಗೂ ಶ್ರೀಮಂತರ ದೇಶ ಎಂದು ಭಾರತವನ್ನು ಕರೆಯಲು ಇಂದಿನ ರಾಜಕಾರಣಿಗಳೇ ಕಾರಣ ಎಂದು ದೂರಿದರು.  ಸಾರ್ವಜನಿಕರು ಉತ್ತಮ ಚಾರಿತ್ರ್ಯ ಬೆಳೆಸಿಕೊಂಡು ವಿದ್ಯೆ, ಉದ್ಯೋಗ ಉತ್ತಮ ಭವಿಷ್ಯಕ್ಕಾಗಿ ತಮ್ಮ ಸುತ್ತಮುತ್ತಲಿನ ಜನರಿಗಾಗಿ ಹೋರಾಡಲು ಮುಂದಾಗಬೇಕು, ಮತ್ತು ಸದುದ್ದೇಶಕ್ಕಾಗಿ ಹೋರಾಟಗಳನ್ನು ಹಮ್ಮಿಕೊಂಡಾಗ ಸಾರ್ವಜನಿಕರು ಬೆಂಬಲ ಸೂಚಿಸಿ ಕೈ ಬಲಪಡಿಸಬೇಕೆಂದು ಕರೆ ನೀಡಿದರು. ಪತ್ರಕರ್ತ ಅಗ್ನಿಶ್ರೀಧರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಶತ್ರುಗಳು ಯಾರೆಂಬುದು ಸ್ಪಷ್ಟವಾಗಿ ಗೊತ್ತಿತ್ತು. ಆದರೆ ಸ್ವಾತಂತ್ರ್ಯಗಳಿಸಿದ ಪ್ರಸ್ತುತ ಭಾರತದಲ್ಲಿ ಶತ್ರುಗಳು ಯಾರೆಂಬುದು ಗೊತ್ತಾಗುತ್ತಿಲ್ಲ, ಅದು ನಮ್ಮ ನೆರೆಹೊರೆಯವರಿರಬಹುದು, ನಮ್ಮ ಮನೆಯಲ್ಲೆ ಇರಬಹುದು ಹಾಗಾಗಿ ಅವರನ್ನು ಗುರುತಿಸಲಾಗದೆ ನಮ್ಮ ಭಾರತ ಸ್ವಾತಂತ್ರ್ಯ ಪಡೆದು 70 ವರ್ಷ ಕಳೆದರೂ ಸಂಪೂರ್ಣ ಸ್ವಾತಂತ್ರ್ಯದ ಜೀವನ ಸಾಗಿಸಲಾಗುತ್ತಿಲ್ಲ ಎಂದರು.
ಸಂಪತ್ತಿನ ಹಂಚಿಕೆಯ ಆದೋಲನವಾಗಬೇಕು, ಸಮಾನ ಸಂಪತ್ತಿನ ಅರಿವು ಮೂಡಿಸುವ ಕಿಚ್ಚನ್ನು ಸ್ವಾತಂತ್ರ್ಯಹೋರಾಟಗಾರರಾದ ದೊರೆಸ್ವಾಮಿಯವರಿಂದ ಆರಂಭವಾಗಲಿ ಎಂದು ಮನವಿ ಮಾಡಿದರು. ನೂರಕ್ಕೆ ಕೇವಲ ಶೇ.5ರಷ್ಟು ಮಾತ್ರ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆಂದರು.ಪರಿಸರಪ್ರೇಮಿ ರಾಷ್ಟ್ರಪ್ರಶಸ್ತಿ ಪುರಸ್ಕøತೆ ಸಾಲುಮರದ ತಿಮ್ಮಕ್ಕ, ನಿವೃತ್ತ ಐಜಿಪಿ ಎಸ್.ರಾಜು, ಭಾರತೀಯರ ಸೇವಾ ಸಮಿತಿ ರಾಜ್ಯಾಧ್ಯಕ್ಷ ರಾಮಚಂದ್ರ(ಚಿಹ್ನಿ), ಮಹಿಳಾ ಅಧ್ಯಕ್ಷೆ ವರ್ತೂರು ಪದ್ಮ, ಹೂಡಿ ವಿಜಯ್‍ಕುಮಾರ್, ವರ್ತೂರು ಶ್ರೀಧರ್, ನಟ ಸೂರಜ್ ತೂಗುದೀಪ್, ಬಸವಮಠದ ಮಹದೇವಸ್ವಾಮಿ, ನಿವೃತ್ತ ಪಿಎಸ್‍ಐ ಗರುಡಯ್ಯ, ಅಲ್ಪಸಂಖ್ಯಾತರ ಒಕ್ಕೂಟದ ಹೆಚ್. ಹನುಮಂತಪ್ಪ, ಮಂಜುಳಾ ಹಾವೇರಿ,ಭೂವನೇಶ್ವರಿ ಮೈಸೂರು ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin