ಬಡಾವಣೆಗಳಲ್ಲಿ ಕಸ ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

bengaluru

ಬೆಂಗಳೂರು, ಫೆ.19-ಬಡಾವಣೆಗಳನ್ನು ಅಭಿವೃದ್ಧಿ ಪಡಿಸದೆ ಫಲಾನುಭವಿಗಳು ಅತ್ತ ಮನೆಗಳನ್ನು ಕಟ್ಟಲು ಸೌಕರ್ಯ ಕಲ್ಪಿಸದೆ ಇರುವುದರಿಂದ ಬಡಾವಣೆಗಳು ಬಟಾ ಬಯಲಾಗಿರುವುದು ಒಂದು ಕಡೆಯಾದರೆ ಅದೇ ಬಡಾವಣೆಗಳಲ್ಲಿ ಕಸದ ರಾಶಿಯನ್ನು ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಮಲಿನಗೊಳ್ಳುತ್ತಿರುವುದು ಬಿಡಿಎ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.ಚಿಕ್ಕಬಸ್ತಿ ಮತ್ತು ದೊಡ್ಡಬಸ್ತಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯ ದುಃಸ್ಥಿತಿಯ ಬಗ್ಗೆ ನಿವೇಶನದಾರರು ಹಾಗೂ ನಿವಾಸಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು ಸರ್ ಎಂ.ವಿಶ್ವೇಶ್ವರಯ್ಯ ನವರ ಹೆಸರಿನಲ್ಲಿ ಬಡಾವಣೆ ನಿರ್ಮಿಸಿ ಅವರ ಹೆಸರಿಗೆ ಅವಹೇಳನ ಮಾಡಿದಂತಾಗಿದೆ. ಈ ಬಗ್ಗೆ ಬಡಾವಣೆ ನಿವಾಸಿಗಳು ಪದೇ ಪದೇ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಬಡಾವಣೆ  ಹಾಗೂ ನೈಸ್ ರಸ್ತೆಗೆ ಹೊಂದಿಕೊಂಡಂತೆ ಇರುವ ರಾಮಸಂದ್ರ ಚಿಕ್ಕ ಕೆರೆಗೆ ಒಳಚರಂಡಿ ನೀರು ಸಹ ಬಿಡುತ್ತಿರುವುದರಿಂದ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡು ಕೆರೆಯ ಸುತ್ತಮುತ್ತ ಪ್ರದೇಶದ ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ.ಸರ್.ಎಂ.ವಿಶ್ವೇಶ್ವರಯ್ಯನರ ಹೆಸರನ್ನು ಬಿಡಿಎ ನೂತನವಾಗಿ ನಿರ್ಮಿಸಲಾದ ಬಡಾವಣೆಗಿಟ್ಟು ಅವರ ಹೆಸರಿಗೆ ಕಳಂಕ ತರುವಂತ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು ನಿವೇಶನದಾರರು ಈ ಬಡಾವಣೆಯಲ್ಲಿ ವಾಸಿಸಲು ಸಾಧ್ಯವಾಗದಂತಾಗಿದೆ.
ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ ನಾಗರಿಕರಿಗೆ ಹಂಚಲಾಗುತ್ತದೆ, ಉತ್ತಮ ಮೂಲಭೂತ ಸೌಕರ್ಯಗಳು ದೊರಕುತ್ತವೆ ಎಂಬ ಆಶಾಭಾವನೆಯಲ್ಲಿ ನಿವೇಶನ ಪಡೆದುಕೊಂಡ ನಾಗರಿಕರು ಅವ್ಯವಸ್ಥೆಯ ಅಗರವಾಗಿರುವ ಬಡಾವಣೆಯ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಕಟ್ಟಡದ ಅವಶೇಷಗಳನ್ನು ಕೆರೆಗೆ ತಂದು ಸುರಿಯುತ್ತಿರುವುದರಿಂದ ಕ್ರಮೇಣವಾಗಿ ಕೆರೆ ಮುಚ್ಚುವ ಹುನ್ನಾರವಾಗಿದೆ. ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಸವನ್ನು ಸುರಿದು ಬೆಂಕಿ ಹಚ್ಚಿ ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಹೆಸರಿಗೆ 80ಅಡಿ ರಸ್ತೆಯಿದ್ದರೂ ತ್ಯಾಜ್ಯವನ್ನು ರಸ್ತೆ ಬದಿಯೇ ಸುರಿಯುತ್ತಿರುವುದರಿಂದ ಈ ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿದೆ.ದುರ್ನಾತ ಬೀರುವ ಮಾಂಸದ ತ್ಯಾಜ್ಯಗಳನ್ನು ಹಾಗೂ ಕಸದ ರಾಶಿಯನ್ನು ಎಸೆದು ಹೋಗುವ ಪರಿಣಾಮ ಬೀದಿ ನಾಯಿ ಹಾಗೂ ರಣಹದ್ದು ಮತ್ತು ಕಾಗೆಗಳ ಕಾಟ ವಿಪರೀತವಾಗಿದೆ. ಅಭಿವೃದ್ಧಿಯ ನಿರೀಕ್ಷೆಯನ್ನು ನಿವಾಸಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin