ಬಡ್ತಿ ಮೀಸಲಾತಿಯ ರದ್ದುಗೊಳಿಸಿದ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ : ಸಿದ್ದರಾಮಯ್ಯ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ಮಾ.4- ಬಡ್ತಿ ಮೀಸಲಾತಿಯನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.  ಗೃಹ ಕಚೇರಿ ಕೃಷ್ಣಾದಲ್ಲಿಂದು ದಲಿತ ಸಂಘಟನೆಗಳ ಜತೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಲಾಯಿತು.  ಬಡ್ತಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕೆಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.  ಸುಪ್ರಿಂಕೋರ್ಟ್ ಆದೇಶವನ್ನು ಸಮಗ್ರವಾಗಿ ಪರಿಶೀಲಿಸಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳು ಕೆಪಿಎಸ್‍ಸಿಯ 2011ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಆಯ್ಕೆಯಾದವರನ್ನು ನೇಮಕಾತಿ ಮಾಡಿಕೊಳ್ಳಲು ಕೈಗೆತ್ತಿಕೊಂಡಿರುವ ತೀರ್ಮಾನ ಐತಿಹಾಸಿಕ ಎಂದು ದಲಿತ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.  2011ರಲ್ಲಿ ನಡೆದ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ 362 ಮಂದಿಯ ನೇಮಕಾತಿಯ ಪ್ರಕ್ರಿಯೆಯನ್ನೇ ರಾಜ್ಯ ಸರ್ಕಾರ 2014ರಲ್ಲಿ ರದ್ದುಪಡಿಸಿತ್ತು.  ಇದನ್ನು ವಿರೋಧಿಸಿ ಬಹಳಷ್ಟು ಸಂಘಟನೆಗಳು ಹೋರಾಟ ನಡೆಸಿದ್ದವು. ಮೀಸಲಾತಿ ಹೊರತು ಪಡಿಸಿ ಬಹಳಷ್ಟು ಎಸ್ಸಿ-ಎಸ್ಟಿ ಅಭ್ಯರ್ಥಿಗಳು ಕೆಎಎಸ್, ಕೆಎಸ್‍ಪಿಎಸ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರ ಈ ಪರೀಕ್ಷೆಯನ್ನು ರದ್ದು ಮಾಡಿದ್ದರಿಂದ ತಳ ಸಮುದಾಯದವರಿಗೂ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಕೆಎಟಿ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದು ಮಾಡಿ ತೀರ್ಪು ನೀಡಿತ್ತು. ಅದಕ್ಕೂ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತಾದರೂ ಅಂತಿಮ ಕ್ಷಣದಲ್ಲಿ ಹಿಂದೆ ಸರಿದಿತ್ತು.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 362 ಮಂದಿಯ ನೇಮಕಾತಿಯನ್ನು ಮರುಜೀವಗೊಳಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ.   ರಾಜ್ಯದ ಇತಿಹಾಸದಲ್ಲೇ ಕೈಗೊಂಡಿರುವ ನಿರ್ಣಯ ಇದಾಗಿದ್ದು, ಇದು ಕ್ರಾಂತಿಕಾರಿ ಹೆಜ್ಜೆ ಎಂದು ಇಂದು ನಡೆದ ಸಭೆಯಲ್ಲಿ ದಲಿತ ಮುಖಂಡರು ಶ್ಲಾಘಿಸಿದ್ದಾರೆ.  ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಾಗ ವಿರೋಧ ಹೆಚ್ಚಾಗುವುದು ಸಹಜ. ಅದಕ್ಕೆ ಮುಖ್ಯಮಂತ್ರಿಗಳು ಎದೆಗುಂದಬಾರದು. ತಳ ಸಮುದಾಯಗಳು ಸರ್ಕಾರದ ತೀರ್ಮಾನವನ್ನು ಪ್ರೀತಿಯಿಂದ ಸ್ವಾಗತಿಸಿದೆ. ಕೆಲವರು ಇದನ್ನು ತಡೆಯುವ ಪ್ರಯತ್ನ ಮಾಡಿದ್ದರು. ಷಡ್ಯಂತ್ರ ರೂಪಿಸಿದ್ದರು. ಅದಕ್ಕೆ ಮುಖ್ಯಮಂತ್ರಿಯವರು ಬಗ್ಗದೆ ಇರುವುದು ಮೆಚ್ಚುಗೆಗೆ ಕಾರಣವಾಗಿದೆ ಎಂದು ದಲಿತ ಮುಖಂಡರಾದ ಮಾರಸಂದ್ರ ಮುನಿಯಪ್ಪ, ಮಾವಳ್ಳಿ ಶಂಕರ್, ಶ್ರೀಧರ್‍ಕಲಿವೀರ ಮತ್ತಿತರರು ಅಭಿನಂದನೆ ಸಲ್ಲಿಸಿದರು. ಬಜೆಟ್‍ನಲ್ಲಿ ನಿಗದಿ ಪಡಿಸುವ ಅನುದಾವನ್ನು ಸಂಪುರ್ಣವಾಗಿ ಖರ್ಚು ಮಾಡಬೇಕೆಂದು ದಲಿತ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin