ಬಣ್ಣಿಸಲಾಗದ ಹೋಳಿ ಬಣ್ಣಗಳ ಭಾವ

ಈ ಸುದ್ದಿಯನ್ನು ಶೇರ್ ಮಾಡಿ

Colours-1

ಬಣ್ಣಗಳು ಉಂಟುಮಾಡುವ ಅನುಭವವನ್ನು ಕೇವಲ ಮಾತಿನಲ್ಲಿ ಬಣ್ಣಿಸಲು ಸಾಧ್ಯವೇ? ಕೇವಲ ಗಾಳಿಯನ್ನು ಬೊಗಸೆಯಲ್ಲಿ ಹಿಡಿದಂತಾಗುತ್ತದೆ. ಅದೆಷ್ಟೇ ಸವಿವರವಾದ ಮಾತುಗಳಿಂದ ವಿವರಿಸಿದರೂ ಬಣ್ಣಗಳು ನೇರವಾಗಿ ಸೃಷ್ಟಿಸುವ ಭಾವನೆಗಳ ಪ್ರಪಂಚಕ್ಕೆ ಸಮನಾಗಲಾರದು. ಬಣ್ಣಗಳು ಮನಕ್ಕಲ್ಲದೆ, ಕೇವಲ ಜ್ಞಾನಕ್ಕೆ ಅರಿವಾಗದು. ಬಣ್ಣವಿರುವುದು ಭಾವಿಸಲಿಕ್ಕೆ ಅಥವಾ ಬಣ್ಣವೇ ಭಾವ. ಬೆಳಕಿನ ಇರುವಿಕೆ ಬಣ್ಣಗಳ ಅಸ್ತಿತ್ವ. ಬಣ್ಣದ ಭಾವವನ್ನು ಬರೀ ಮಾತಿನಲ್ಲಿ ಬಣ್ಣಿಸಲಾಗದ್ದಕ್ಕೆ ಪ್ರಾಯಶಃ ಕಾವ್ಯ ಪ್ರತಿಮೆಗಳು ಹುಟ್ಟಿಕೊಂಡಿರಬಹುದು.

Colours-2

ಪ್ರಕೃತಿ ವರ್ಣಮಯವಾಗಿ ತನ್ನಿಂತಾನೇ ಪರಿಪೂರ್ಣವಾಗಿದೆ. ಅನಾದಿ ಕಾಲದಿಂದಲೂ ಈ ಪ್ರಕೃತಿ ಮನುಷ್ಯನಿಗೆ ಹೇಗೆ ವಿಸ್ಮಯವಾಗಿದೆಯೋ ಹಾಗೆ ಈ ಬಣ್ಣಗಳು, ರಾಗಗಳು ಅಷ್ಟೇ ವಿಸ್ಮಯ. ಇವು ನಮ್ಮೊಡನೆಯೇ ಹುಟ್ಟಿ ನಮ್ಮೊಡನೆಯೇ ಸಾಯುತ್ತಾ.. ನಾವು ಉಸಿರಾಡುವಷ್ಟೇ ಸತ್ಯ ಸರಳ ಸತ್ವವೆನಿಸಿದೆ. ಬೆಳಕಿನ ಬಣ್ಣದ ಪ್ರಪಂಚಕ್ಕೂ ಮಾನವ ಜಗತ್ತಿಗೂ ನಿರುದ್ದಿಶ್ಯವಾದ ವ್ಯಾಪಾರ ನಡೆದೇ ಇದೆ.

Holi-3D-Animation

Holi-2017-GIF-Images

 

Holi-Animation

Holi-GIF

Moving-Pics-Holi

ಬಣ್ಣಗಳು ಎಂದಾಕ್ಷಣ ಬೆರಗುಗೊಳ್ಳದವರಾರು! ನಮ್ಮನ್ನು ನಾವೇ ಕನ್ನಡಿಯೊಳಗೆ ಭಿನ್ನವಾಗಿ ಕಂಡುಕೊಂಡಂತೆ ತಿಳಿದಿರುವುದನ್ನೇ ಅರಿವಾಗಿಸಿಕೊಳ್ಳುವಂತೆ. ಬಣ್ಣಗಳ ಬಗ್ಗೆ ಹೊಸ ಭಾವಾರ್ಥಗಳೇ ಮೂಡುತ್ತದೆ. ಬಣ್ಣಗಳಿಂದ ಜೀವಜನ್ಯವಾದ ಅನುಭವ ಸೃಷ್ಟಿಯಾಗುತ್ತದೆ. ಹಾಗಾಗಿ ವರ್ಣಮಯ ಜಗತ್ತಿನ ವ್ಯವಹಾರ ನಮ್ಮ ಅನುಭವದ ನೈಪುಣ್ಯವನ್ನು ಪ್ರಕಟಿಸುತ್ತೇವೆ.   ಬಣ್ಣಗಳಲ್ಲಿ ರಹಸ್ಯವೇನೂ ಇಲ್ಲ. ಇದ್ದರದು ನಮ್ಮಲ್ಲೇ. ಭಾವವಿದ್ದರದೂ ನಮ್ಮಲ್ಲೇ. ನಾವು ಬಣ್ಣಗಳನ್ನು ನೋಡುತ್ತೇವೆ. ಕಾಣುತ್ತೇವೆ. ಆಲೋಚಿಸುತ್ತೇವೆ. ಅರ್ಥ ಮಾಡಿಕೊಳ್ಳುತ್ತೇವೆ. ಅನುಭವಿಸುತ್ತೇವೆ. ಪ್ರೀತಿಸುತ್ತೇವೆ. ದ್ವೇಷಿಸುತ್ತೇವೆ. ಪ್ರಖ್ಯಾತ ಚಿತ್ರಕಲಾವಿದ ಪಾಲ್ ಕ್ಲೀ – ಬಣ್ಣವೆಂದರೆ, ನಮ್ಮ ಬುದ್ಧ್ದಿ ಮತ್ತು ಈ ಬ್ರಹ್ಮಾಂಡ. ಕೂಡುವ ತಾಣ ಎಂದು ಹೇಳುತ್ತಾರೆ.

Colours-4

ಬೆಳಕಿನ ಮಾಯೆಯಾದ ಬಣ್ಣಗಳು- ಬಹಳಷ್ಟು ಬಾರಿ ಮನುಷ್ಯನ ಪ್ರಜ್ಞಾಪೂರ್ವಕ ಮಿತಿಯಲ್ಲಿ ಒಳಪಟ್ಟು ಸೀಮಿತ ಅರ್ಥವ್ಯಾಪ್ತಿ ಹೊಂದಿ, ತಮ್ಮ ಆಗಾಧ ಭಾವತೀವ್ರತೆಯ ಸಾಧ್ಯತೆಗಳನ್ನು ಕಳೆದುಕೊಂಡು ನಿರ್ವಿಣ್ಣಗೊಳ್ಳುತ್ತವೆ. ಭಾವ ಸೋಂಕದೆ ಕೇವಲ ಮಾನವಪ್ರಜ್ಞೆಗೆ ಗೆ ಸಿಲುಕುವ ಇಂತಹ ಬಣ್ಣಗಳಿಂದಾಗಿಯೇ ಜಾತಿ-ಪಂಗಡಗಳಾಗುತ್ತವೆ. ಧರ್ಮ-ದೇಶಗಳಾಗುತ್ತವೆ. ರಾಗದ್ವೇಷಗಳಿಂದ ಯುದ್ಧಗಳಾಗುತ್ತವೆ. ಮನುಷ್ಯ ಕುಲಗಳೇ ನಾಶವಾಗುತ್ತವೆ. ಅದದೇ ಬಣ್ಣಗಳು ಮತ್ತೆ ಮತ್ತೆ ಮರು ರೂಪ. ಮರು ಅರ್ಥ ಪಡೆಯುತ್ತವೆ. ಕಾಲದೇಶ ಸನ್ನಿವೇಶ ಭಾವಗಳು ಬದಲಾದಂತೆ ಅವೂ ಬದಲಾಗುತ್ತಲೇ ಇರುತ್ತವೆ.
ಕವಿ-ಕಲಾವಿದರನ್ನು ಹೊರತುಪಡಿಸಿದರೆ ಪ್ರಾಯಶಃ ಮಕ್ಕಳಿಗೆ ಮಾತ್ರವೇ ಬಣ್ಣಗಳ ಸಾಧ್ಯತೆಗಳನ್ನು ಹಿಗ್ಗಿಸುವ ಶಕ್ತಿಯಿದೆ. ಒಂದು ಖಾಲಿ ಹಾಳೆಯ ಮೇಲೆ ಮಗುವೊಂದು ಗೀಚಿದ ಹಸಿರು ಹುಲ್ಲು, ಗಿಡಮರವಾಗಬೇಕಿಲ್ಲ. ಮಗು ಬಳಿದ ನೀಲವರ್ಣ ಆಕಾಶವಲ್ಲ. ಆ ನೀಲಿಯು ಮರವಾಗಬಹುದು, ಆನೆಯಾಗಬಹುದು. ಅಪ್ಪ, ಅಜ್ಜಿ – ಹೀಗೆ ಏನು ಬೇಕಾದರೂ ಆಗಬಹುದು. ಮಕ್ಕಳಿಗೆ ಕಲೆಗಾರಿಕೆಯ ತಂತಾನೆ ವೇದ್ಯವಾಗಿರುತ್ತದೆ. ಮಗುವಿನ ವೈಚಾರಿಕ ಪ್ರಪಂಚ ವಿಸ್ತರಿಸಿದಂತೆಲ್ಲಾ ಆ ಮಗುವಿನೊಳಗೆ ಕಲಾವಿದ ಮಾಯವಾಗುತ್ತಾನೆ. ಕಲಾವಿದರು ಮಕ್ಕಳಾಗಿ ಚಿತ್ರಿಸಬೇಕು ಎಂದರೆ ಮಗುವಂತೆ ಕೇವಲ ಮುಗ್ಧವಾಗುವುದಲ್ಲ ಮಗುವಲ್ಲಿ ಇರುವ ಕಲಾವಿದನಂತಾಗಬೇಕು . ಹಾಗಾದಾಗ ಬಣ್ಣಗಳು ತಮ್ಮ ನೈಜ ವರ್ಣಾಕಾರ ತೊರೆದು ವಿಶ್ವರೂಪ ತಾಳುತ್ತವೆ.
ಭಾರತೀಯ ಚಿತ್ರಕಲಾ ಪರಂಪರೆಯಲ್ಲಿ ಬಣ್ಣಗಳನ್ನು ಗ್ರಹಿಸುವ ಪರಿಯೇ ಬೇರೆ. ಬಣ್ಣಗಳು ಸಂದರ್ಭಾನುಸಾರ ತಮ್ಮ ಅರ್ಥಭಾವ ಬದಲಿಸುತ್ತವೆ. ನಮ್ಮ ಜೀವನಶೈಲಿಯಲ್ಲೇ ಬಣ್ಣಗಳು ಹೇಗೆಲ್ಲಾ ಮಿಳಿತಗೊಂಡಿವೆ ಎನ್ನುವುದಕ್ಕೆ ನಮ್ಮ ದೇಶದಲ್ಲಿನ ಅನೇಕರ ಹೆಸರುಗಳು ಬಣ್ಣಗಳ ಹೆಸರಾಗಿರುವುದೇ ಸಾಕ್ಷಿ. ನಾವೇ ಬಣ್ಣಗಳಾಗಿರುವಾಗ ಇನ್ನು ನಮ್ಮ ದೇವಾನುದೇವತೆಯರಿಗೆ ಕೊರತೆಯೇ? ಅವರನ್ನು ಮತ್ತೂ ವರ್ಣರಂಜಿತವಾಗಿಯೇ ನಾವು ಚಿತ್ರಿಸಿದ್ದು. ಅಜಂತಾ ಎಲ್ಲೋರದ ಗುಹಾಲಯಗಳಲ್ಲಿರುವ ಭಿತ್ತಿಚಿತ್ರಗಳಲ್ಲಿನ ವರ್ಣ ಸಂಯೋಜನೆ, ಚಿಕಣಿ ಚಿತ್ರಗಳ ಬಣ್ಣಗಳ ಹರಹು ವಿಶೇಷವಾಗಿ ಭಾರತೀಯ ಚಿತ್ರ ಸಂಪ್ರದಾಯಗಳನ್ನು ಎತ್ತಿ ತೋರಿಸಿವೆ.

Colours-3

ಚಿಕಣಿ ಚಿತ್ರಗಳಲ್ಲಿ ಸಂಗೀತದ ರಾಗಮಾಲ ಎಂಬ ರಾಗವನ್ನು ವರ್ಣಚಿತ್ರ ಸಂಯೋಜನೆಯ ಮೂಲಕ ಒಡಮೂಡಿಸಲಾಗಿದೆ. ಇದು ರಾಗ-ವರ್ಣಗಳನ್ನು ಒಗ್ಗೂಡಿಸಿರುವ ಕ್ರಿಯೆ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ ವಿಶಿಷ್ಟ ಪ್ರಯೋಗ. ನಮ್ಮ ಹಬ್ಬಗಳೂ ವರ್ಣಮಯ ಜಗತ್ತು. ಸಂಕ್ರಾಂತಿಯಲ್ಲಿ ರಾಸುಗಳು ಅದೆಷ್ಟು ಸಿಂಗಾರಗೊಳ್ಳುತ್ತವೆ. ಜಾತ್ರೆಗಳ ತೇರುಗಳು ಹೇಗೆ ರಂಜಿತವಾಗಿವೆ ಎಂಬುದನ್ನು ನಾನು ಬಿಡಿಸಿ ಹೇಳುವ ಪ್ರಮೇಯವಿಲ್ಲ.   ಕೃಷ್ಣ ಮೊದಲು ಮೆತ್ತಿಕೊಂಡದ್ದು ಮಣ್ಣಿನ ಬಣ್ಣ. ಮಣ್ಣನ್ನು ತಿನ್ನುವ ಮೂಲಕ ಪಂಚಭೂತಗಳಿಗೂ ಒಂದು ಬಣ್ಣದ ಲೇಪ ಕೊಟ್ಟ ಹಿರಿಮೆ ಆತನದ್ದು. ಕೃಷ್ಣ ಆಮೇಲೆ ಹಚ್ಚಿಕೊಂಡದ್ದು ಬೆಣ್ಣೆಯ ಬಣ್ಣ, ಬಿಳಿಯಲ್ಲಿ ಪ್ರಕೃತಿಯ ಎಲ್ಲಾ ಏಳು ಬಣ್ಣಗಳೂ ಮೇಳೈಸಿರುವುದರ ಸಂಕೇತವೋ ಎನ್ನುವಂತೆ ಕೃಷ್ಣ ಬೃಂದಾವನವನ್ನು ರಂಗಿನರಮನೆ ಯನ್ನಾಗಿಸುವ ಆ ಕ್ಷಣ ಹೋಳಿಯೇ ಸೃಷ್ಟಿಯಾಗುತ್ತದೆ.

ಕಣ್ಣಿನ ಕಾಡಿಗೆಯಿಂದ ಹಣೆಯ ಕುಂಕುಮದ ತನಕ, ಚಿನ್ನದ ಬಳೆಯಿಂದ ಹವಳದ ಸರದ ತನಕ, ಸರಿಯಾಗಿ ನೆರಿಗೆ ತೆಗೆದು ಉಡುವ ಸೀರೆಯಿಂದ ತೊಡಗಿ ರೇಷ್ಮೆಯ ಶಾಲಿನ ತನಕ ನಮ್ಮ ಜೀವನ ಬಣ್ಣಾಭಿಮುಖಿಯಾಗಿದೆ. ಇಲ್ಲಿ ಯಾವ ಬಣ್ಣವನ್ನೂ ತೆಗೆದು ಹಾಕುವಂತಿಲ್ಲ. ಸಾಧ್ಯವಾದರೆ ಬದುಕಿನ ದಾರಿಯಲ್ಲಿ ಸಿಗುವ ಪ್ರೀತಿ, ವಿಶ್ವಾಸ, ನಂಬಿಕೆ, ನಂಟು, ವಾತ್ಸಲ್ಯ, ಸ್ನೇಹಗಳಿಗೆಲ್ಲಾ ಒಂದೊಂದು ಬಣ್ಣ ಹಚ್ಚಿ ಇಡೀ ಬದುಕನ್ನೇ ಇನ್ನಷ್ಟು ಸುಂದರಗೊಳಿಸ ಬಹುದೇನೋ !
ನಮ್ಮೆಲ್ಲಾ ಆಶೆ ಮತ್ತು ಆಶಯ ಒಂದೇ; ನಮ್ಮ ಅಂಗಿಗೆ, ನಮ್ಮ ಮುಖಕ್ಕೆ ಬಣ್ಣ ತಗುಲಲೇಬಾರದು! ಹೋಳಿ ಹಬ್ಬ ಮುಖ್ಯವಾಗುವುದೇ ಬಣ್ಣದ ಭಯವನ್ನು ಅದು ತೊಡೆದು ಹಾಕುತ್ತದೆ ಎನ್ನುವ ಕಾರಣಕ್ಕಾಗಿಯೇ. ಎಲ್ಲಾ ಸಂಕೋಚ ಬಿಟ್ಟು ಮಳೆಯಲ್ಲಿ ನೆನೆಯುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟ ನಮ್ಮನ್ನು ನಾವೇ ಬಣ್ಣಕ್ಕೆ ಒಪ್ಪಿಸಿಕೊಳ್ಳುವುದರಲ್ಲೂ ಇದೆ.

ನಮ್ಮೊಳಗೆ ಕೆಲವೇ ಕೆಲವು ಮೂಲ ಬಣ್ಣಗಳಿದ್ದರೂ ಸಾಕು, ಅವುಗಳ ಹದವಾದ ಮಿಶ್ರಣದಿಂದ ಬೇಕಾದ ಬಣ್ಣಗಳನ್ನು ಪಡೆಯಬಹುದು! ಪ್ರೀತಿ – ನಂಬಿಕೆ-ಭಕ್ತಿಗಳಿಂದ ಮಿಗಿಲಾದ ಮೂಲ ಬಣ್ಣಗಳಿವೆಯೇ? ಇವುಗಳೇ ಇಲ್ಲವಾದರೆ ರಂಗಿನಾಟ ಸಾಧ್ಯವೇ?  ಬಣ್ಣ ಮತ್ತು ರೂಪಗಳಿಲ್ಲವೆಂದು ನಾವು ತಿಳಿದುಕೊಂಡಿರುವ ನೀರಿಗೆ ಎಲ್ಲ ಬಣ್ಣಗಳನ್ನೂ ನುಂಗುವ ಅದ್ಭುತ ಚಲನೆಯಿದೆ. ತಿಳಿ ನೀರಿಗೆ ನೀಲಿ ಬೆರೆಸಿದಾಗ ನೀರು ನೀಲಿಯಾಗುತ್ತದೆ; ಕೆಂಪು ಬೆರೆಸಿದಾಗ ಕೆಂಪಾಗುತ್ತದೆ. ಜಲ ತೀರ್ಥವಾದಂತೆ ನೀರು ಓಕುಳಿಯಾಗಿ ಅವರಿವರ ಮೈ ಮನಗಳಿಗೆ ತಟ್ಟಿ ಶ್ರದ್ಧೆಯನ್ನು ಗಟ್ಟಿ ಮಾಡಿ ಸಾಮಾನ್ಯ ಮನುಷ್ಯರನ್ನು ರೂಪಾಂತರಿಸುವಾಗ ಹೋಳಿ ಹುಣ್ಣಿಮೆ ಬರುತ್ತದೆ!

ಕಾಮ ದಹನ :

ಈ ಬದುಕಿನಲ್ಲಿರುವುದೆಲ್ಲಾ ರೂಪಾಂತರಗೊಂಡ ಕಾಮನೆಗಳೇ. ನೋಡುವುದೂ ಒಂದು ಬಯಕೆ. ಮುಟ್ಟುವುದು, ಕೇಳುವುದು, ಇರುವುದು, ಇರುವ ಸ್ಥಳದಿಂದ ಬೇರೆಡೆಗೆ ಹೋಗುವುದೆಲ್ಲಾ ಬಯಕೆಗಳೇ! ಭಕ್ತಿಯೂ ಒಂದು ಮೂಲ ಬಯಕೆಗಳಿಂದ ಸಾಗುವುದೇ ಬಾಳು. ಬದುಕಿಗೆ ಬಯಕೆ ಬೇಕು ಎನ್ನುವುದಕ್ಕೂ ಬಯಕೆಯೇ ಬದುಕು ಎನ್ನುವುದಕ್ಕೂ ವ್ಯತ್ಯಾಸವಿದೆ. ಮಿತಿ ಮೀರಿದ ಬಯಕೆಯ ದಹನವಾಗಬೇಕಾದರೆ ಮೂರನೆಯ ಕಣ್ಣು ತೆರೆಯಬೇಕು.
ಕಾಮವೂ ನಮ್ಮದೇ; ಮೂರನೆಯ ಕಣ್ಣು ನಮ್ಮದೇ; ದಹಿಸಬೇಕಾಗಿರುವುದೂ ನಮ್ಮನ್ನೇ. ಬದುಕಿನ ಯಾವುದೋ ಒಂದು ಸಂದರ್ಭದಲ್ಲಿ ಅವರವರ ಕಾಮದಹನ ಅವರವರಿಂದಲೇ ನಡೆದಿರುತ್ತದೆ. ಅದು ಬಯಕೆಯ ಮೇಲೆ ಸಾಧಿಸಿದ ವಿಜಯದ ಕ್ಷಣ!

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin