ಬದುಕಿನ ಪ್ರತಿಯೊಂದು ಕ್ಷಣಕ್ಕೂ ಶ್ರೀಕೃಷ್ಣನೇ ಆದರ್ಶ

ಈ ಸುದ್ದಿಯನ್ನು ಶೇರ್ ಮಾಡಿ

Sri-Krishn

ಒಂದೆಡೆ ಶ್ರೀಕೃಷ್ಣ ಹೇಳುತ್ತಾನೆ, ನನ್ನನ್ನು ನಂಬುತ್ತೀಯಾ…?ನಂಬುವುದಾದರೆ ಪೂರ್ತಿಯಾಗಿ ನಂಬು… ಅನುಮಾನವಿಲ್ಲದೆ ಶುದ್ಧ ಮನಸ್ಸಿನಿಂದ ಮಗು ತಾಯಿಯನ್ನು ಅಪ್ಪುವ ಹಾಗೆ ನಂಬು…. ಹಾಗಿದ್ದಲ್ಲಿ ಮಾತ್ರ ನಾನು ನಿನಗೆ ಸಿಗುತ್ತೇನೆ. ಶ್ರೀಕೃಷ್ಣ ಹುಟ್ಟುವ ಮೊದಲೇ ಆತನ ಸಾವು ಆತನಿಗಾಗಿ ಕಾಯುತ್ತಿತ್ತು ಸೋದರಮಾವನ ರೂಪದಲ್ಲಿ. ಹೆತ್ತ ತಾಯಿಗೆ ಆತ ದಕ್ಕಲಿಲ್ಲ, ಸಲಹಿದ ತಾಯಿಗೆ ಆತ ಸಿಗಲಿಲ್ಲ. ಪ್ರೀತಿಸಿದ ರಾಧೆಯ ಪ್ರೀತಿ ಪೂರ್ತಿಯಾಗಲಿಲ್ಲ. ಆತ ತನಗೆ ಸಿಕ್ಕಿದ ಎಂದು ಅಂದುಕೊಂಡವರಿಗೆ ಸುಳ್ಳಾದ. ತಮಗೆ ಸಿಗುವುದೇ ಇಲ್ಲ ಅಂದುಕೊಂಡವರಿಗೆ ಅಷ್ಟೈಶ್ವರ್ಯಗಳನ್ನು ಒದಗಿಸಿದ.

ಒಟ್ಟಿನಲ್ಲಿ ಶ್ರೀಕೃಷ್ಣ ಒಂದು ಚೌಕಟ್ಟಿನಲ್ಲಿ ವ್ಯಕ್ತಿತ್ವ, ಪ್ರತಿಯೊಂದು ಸಂಬಂಧ, ಬಾಂಧವ್ಯವನ್ನು ಸಮರ್ಥವಾಗಿ ನಿಭಾಯಿಸಿದ ಆದರ್ಶ ಪುರುಷ. ಕೃಷ್ಣನ ಕಥೆ ಓದಿದ ಮೇಲೆ ಅಲ್ಲಿ ನಮಗೆ ಸಿಗುವುದೇನು? ಪ್ರೀತಿಸಿ, ಮುದ್ದಿಸಬೇಕಾದ ಸೋದರ ಮಾವನಾದ ಕಂಸನ ಪ್ರೀತಿ ನಮಗೆ ಸಿಗದಿರಬಹುದು. ತಾಯಿಯಂತೆ ಬಂದು ಮೊಲೆಯುಣಿಸುವ ಪೂತನಿಯೂ ನಮಗೆ ಸಿಗಬಹುದು. ಏನೂ ಬಯಸದ ಶುದ್ಧ ಹೃದಯದ ಪ್ರೀತಿ ಕೊಡುವ ರಾಧೆಯು ನಮಗೆ ಭೇಟಿಯಾಗಬಹುದು. ಕೃಷ್ಣ ಸಾಹಸವಂತ, ಲೋಕವಿಖ್ಯಾತ ಎಂದು ಮದುವೆಯಾದ ರುಕ್ಮಿಣಿ, ಪ್ರೀತಿಸಿ ಹಠಮಾಡಿ ಮದುವೆಯಾದ ಸತ್ಯಭಾಮೆ, ಅಪ್ಪ-ಅಮ್ಮನಾದರೂ ಅನಿವಾರ್ಯವಾಗಿ ಪ್ರೀತಿ ಮಾಡಲಾಗದ, ಜೊತೆಯಾಗಿ ಇರಲಾಗದ ಮುಗ್ಧ ಅಸಹಾಯಕರು. ಯಾರದ್ದೋ ಮಗುವನ್ನು ತನ್ನದೆಂದು ಮುದ್ದಿಸುವ ಯಶೋಧೆ, ನಂದಗೋಪನಂತವರು ನಮಗೆ ಸಿಗಬಹುದು.

ಪ್ರತಿಕ್ಷಣವೂ ಧ್ಯಾನಿಸುವ ಅರ್ಜುನ, ನೀನೇ ದೈವ ಎಂದು ನಂಬಿ ಪ್ರಾಣಕೊಡಲು ಸಿದ್ಧವಾಗಿರುವ ಕುಂತಿ ಮತ್ತು ಕುಂತಿ ಪುತ್ರರು ಹಾಗೂ ಅವರ ಜವಾಬ್ದಾರಿಗಳು, ಸಹೋದರಿ ದೌಪ್ರದಿ, ಒಳಗೊಳಗೇ ದೈವವೆಂದು ಪ್ರಾರ್ಥಿಸುವ, ಎದುರಿಗೆ ಧರ್ಮಕ್ಕೆ ಗಂಟು ಬಿದ್ದು ವಿರೋಧಿಸುವ ಭೀಷ್ಮ, ದ್ರೋಣ, ಕೃಪಾಚಾರ್ಯ.ಅತ್ತಿಗೆ ತಾಯಿ ಎಂದು ತಿಳಿದರೂ ಮಾನಭಂಗಕ್ಕೆ ಎದುರಾಗುವ ದುರುಳರು. ನಿನ್ನನ್ನು ನಂಬುವುದೇ ಇಲ್ಲ ಎಂದು ಧಿಕ್ಕರಿಸಿ ಎದುರಿಸುವ ದುರ್ಯೋಧನ, ಶಕುನಿ, ದುಶ್ಯಾಸನ, ಶಿಶುಪಾಲ, ಜರಾಸಂಧ, ಮಗುವಿನಂತಹ ಗೆಳೆಯ ಸುಧಾಮ, ದೈವವೆಂದು ಪ್ರಾರ್ಥಿಸುವ ಅಕ್ರೂರ, ವಿದುರ.

ಸ್ವಲ್ಪ ಖ್ಯಾತಿ ಸಿಕ್ಕಿದರೆ ಸಾಕು ತಾವು ದೈವ ವಂಶದವರು ಎಂದು ಹಾರಾಡುವ ಯದುವಂಶದವರು, ಕಷ್ಟದ ಮಹತ್ವ ತಿಳಿಯದ ಮಕ್ಕಳು, ಹುಟ್ಟು-ಬದುಕಿನುದ್ದಕ್ಕೂ ನ್ಯಾಯ, ಧರ್ಮ, ಸಂಸ್ಥಾಪನೆಗಾಗಿ ಹೋರಾಡಿ, ತಂತ್ರ, ಕಪಟ ನೀತಿಯನ್ನು ತನ್ನದಾಗಿಸಿ, ಜಗತ್ತು ಬಿಟ್ಟು ಹೋಗುವಾಗ ಎಲ್ಲವನ್ನೂ ಇಲ್ಲಿಯೇ ಬಿಟ್ಟು , ಏನನ್ನೂ ತನ್ನೊಡನೆ ಒಯ್ಯದ ಎಲ್ಲ ಐಹಿಕ, ಲೌಕಿಕ ಲೋಕದೊಳಗಿದ್ದು, ಏನನ್ನೂ ಅಂಟಿಸಿಕೊಳ್ಳದೆ ಕೊನೆಯಲ್ಲಿ ತನ್ನ ಕುಲ, ವಂಶ ನಾಶವಾಗುವುದನ್ನು ನೋಡಿ ಕೇವಲ ಬದುಕಿನ ಕರ್ತವ್ಯ ನಿಭಾಯಿಸುವ ಶ್ರೀಕೃಷ್ಣ ದುಷ್ಟರನ್ನು ನಿಗ್ರಹಿಸಲು ಧರ್ಮಸಂಸ್ಥಾಪನೆಗಾಗಿ ಶ್ರೀಕೃಷ್ಣನ ಬಾಳು ದೇವರ ಅವತಾರವಷ್ಟೇ. ಪ್ರಸ್ತುತ ಬದುಕಿಗೆ ಉದಾಹರಣೆ ಮತ್ತು ಯಾವತ್ತಿಗೂ ಆದರ್ಶ.

ನಮಗೂ ಸಹ ದುರ್ಯೋಧನ, ದುಶ್ಯಾಸನ, ಕರ್ಣರು ಎದುರಾಗಬಹುದು. ನಮಗೆ ಸಿಕ್ಕ ಪ್ರತಿಯೊಬ್ಬರೊಡನೆ ನಾವು ಹೇಗಿರಬೇಕು, ಹೇಗೆ ವ್ಯವಹರಿಸಬೇಕು ಎಂಬುದಕ್ಕೆ ಶ್ರೀಕೃಷ್ಣ ಅತ್ಯುತ್ತಮ ಉದಾಹರಣೆ. ವೈರಿಯೊಡನೆ, ಸ್ನೇಹಿತರೊಡನೆ, ಸಹೋದರಿಯೊಡನೆ, ದ್ರೌಪದಿಯಂತಹವರೊಡನೆ, ಪ್ರೇಮಿ, ಮಡದಿ, ಗೆಳೆಯರೊಡನೆ ಹೇಗಿರಬೇಕು, ಸಂಬಂಧ, ಬಾಂಧವ್ಯ, ಬದುಕಿನ ರಾಜಕೀಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಶ್ರೀಕೃಷ್ಣ ನಮಗೆ ಅಂದಿಗೂ, ಇಂದಿಗೂ, ಎಂದೆಂದಿಗೂ ಅತ್ಯುತ್ತಮ ಆದರ್ಶ.ಬದುಕಿನ ಪ್ರತಿಯೊಂದು ಕ್ಷಣಕ್ಕೂ ಆದರ್ಶವಾಗಿ ಶ್ರೀಕೃಷ್ಣ ಪರಮಾತ್ಮ ನಿಲ್ಲುತ್ತಾನೆ. ನಮ್ಮ ಬದುಕಿನ ಕುರುಕ್ಷೇತ್ರದಲ್ಲಿಯೂ ಕಿರುನಗುವಿನ ಶ್ರೀಕೃಷ್ಣನೇ ಸದಾ ನೆನಪಾಗುತ್ತಾನೆ. ಇದು ಶ್ರೀಕೃಷ್ಣನ ಮನುಷ್ಯ ಸಂಬಂಧದ ಪರಾಕಾಷ್ಠೆ.

ವಿಪರ್ಯಾಸವೆಂದರೆ, ಒಂದು ಚೌಕಟ್ಟಿನೊಳಗೆ ಎಂದೂ ಸಿಗುವುದೇ ಇಲ್ಲ. ಶ್ರೀಕೃಷ್ಣ ಹೀಗೇ ಎಂದು ಯಾವತ್ತಿಗೂ ಹೇಳಲಾಗುವುದಿಲ್ಲ. ನಮ್ಮ ಬುದ್ಧಿಮತ್ತೆ ಎಷ್ಟಿದೆಯೋ ಅಷ್ಟು ಮಾತ್ರ ಆತ ನಮಗೆ ದಕ್ಕುತ್ತಾನೆ. ಈ ಜಗತ್ತಿನ ಎಲ್ಲವೂ ನಮ್ಮದು, ನಮಗಾಗಿ ಎಂದು ಹೇಳಿಕೊಳ್ಳುತ್ತೇವೆ. ನಿತ್ಯವೂ ಮಿಥ್ಯ ಭ್ರಮೆಯಲ್ಲಿ ಬದುಕುತ್ತೇವೆ.ಈ ಜಗತ್ತು ನಮ್ಮದು, ಎಲ್ಲವೂ ನನ್ನದು, ಹುಟ್ಟಿದ ಪ್ರತಿಕ್ಷಣವೂ ನನ್ನದು. ಬರಿಗೈಯಲ್ಲಿ ಹುಟ್ಟಿ, ಖಾಲಿ ಕೈಯಲ್ಲಿ ಮರಳುವುದು ನಮ್ಮ ಬದುಕು. ಸಾವನ್ನು ಮರೆತು ಹಾರಾಡುವ ನಮ್ಮ ಬದುಕಿಗೆ ಹೇಗಿರಬೇಕು, ಹೇಗೆ ಬಾಳಬೇಕು ಎನ್ನುವುದಕ್ಕೆ ಶ್ರೀಕೃಷ್ಣ ನಮಗೆ ಆದರ್ಶವಾಗಿ ನಿಲ್ಲುತ್ತಾನೆ.
ಶ್ರೀಕೃಷ್ಣಂ ವಂದೇ ಜಗದ್ಗುರುಂ.

 

► Follow us on –  Facebook / Twitter  / Google+

Facebook Comments

Sri Raghav

Admin