ಬಯಲಾಯ್ತು ಪ್ರಧಾನಿ ಮೋದಿ, ಯೋಗಿ ಸೇರಿ ಹಲವರ ಹತ್ಯೆಗೆ ಪಾಕ್ ನ ನಿಷೇಧಿತ ಉಗ್ರಗಾಮಿ ಸಂಘ ರೂಪಿಸಿದ್ದ ಸಂಚು

ಈ ಸುದ್ದಿಯನ್ನು ಶೇರ್ ಮಾಡಿ

ter

ನವದೆಹಲಿ/ಉತ್ತರ ಪ್ರದೇಶ, ನ.22- ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲು ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆಗಳು ಸಂಚು ರೂಪಿಸಿವೆ. ಎಂಬ ಆತಂಕಕಾರಿ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿವೆ. ಜೈಷ್-ಎ-ಮಹಮದ್(ಜೆಇಎಂ) ಮತ್ತು ಲಷ್ಕರ್-ಎ-ತೈಬಾ(ಎಲ್‍ಇಟಿ) ಉಗ್ರಗಾಮಿಗಳು ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಕುತಂತ್ರ ರೂಪಿಸಿದ್ದು, ಇದನ್ನು ಕಾರ್ಯಗತಗೊಳಿಸಲು ಬಾಂಗ್ಲಾದೇಶದ ಇಸ್ಲಾಂ ಭಯೋತ್ಪಾದಕರಿಗೆ ಜವಾಬ್ದಾರಿ ವಹಿಸಿದ್ದಾರೆ ಎಂಬ ಗೋಪ್ಯ ಸಂಗತಿಯೂ ಬಯಲಾಗಿದೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಗುಪ್ತಚರ ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಬಾಂಗ್ಲಾ ಮೂಲದ ಉಗ್ರರು ಈಗಾಗಲೇ ಗಡಿ ದಾಟಿ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ವಿಶೇಷ ಕಾರ್ಯಪಡೆ ತಂಡದ(ಎಸ್‍ಟಿಎಫ್) ಅಧಿಕಾರಿಗಳು ಕೋಲ್ಕತಾದಲ್ಲಿ ನಿನ್ನೆ ಮೂವರು ಉಗ್ರಗಾಮಿಗಳನ್ನು ಬಂಧಿಸಿದ್ದಾರೆ. ಬಂಧಿತರು ಬಾಂಗ್ಲಾದೇಶ ಮೂಲದ ಅನ್ಸರುಲ್ಲಾ ಬಂಗ್ಲಾ ಟೀಮ್ (ಎಬಿಟಿ) ಸದಸ್ಯರು. ಗುಪ್ತಚರ ಇಲಾಖೆ ಅಧಿಕಾರಿಗಳ ಈ ಮಾಹಿತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಧಾನಿ, ಯೋಗಿ, ಹಾಗೂ ಬಿಜೆಪಿ ಹಿರಿಯ ಮುಖಂಡರುಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆ ಇತ್ತೀಚೆಗೆ ಎನ್‍ಕೌಂಟರ್‍ಗಳ ಮೂಲಕ ಜೈಷ್ ಮತ್ತು ಲಷ್ಕರ್‍ನ ಕುಖ್ಯಾತ ಉಗ್ರಗಾಮಿಗಳನ್ನು ಕೊಂದು ಹಾಕುತ್ತಿರುವುದಕ್ಕೆ ಪ್ರತೀಕಾರವಾಗಿ ಈ ಸಂಚು ರೂಪಿಸಲಾಗಿದೆ. ಜೈಷ್ ಮುಖಂಡ ಮಸೂದ್ ಅಜರ್ ಅಣತಿಯಂತೆ ಉಗ್ರರು ಈ ಹುನ್ನಾರ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಕುಖ್ಯಾತ ಭಯೋತ್ಪಾದಕರ ಹತ್ಯೆಗಳಿಂದ ಜೈಷ್ ಮತ್ತು ಲಷ್ಕರ್ ಸಂಘಟನೆಗಳಿಗೆ ದೊಡ್ಡ ಹೊಡೆತ ಬಿದ್ದಿದ್ದು, ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇದಕ್ಕಾಗಿ ಅತಿಗಣ್ಯ ವ್ಯಕ್ತಿಗಳು ಮತ್ತು ಬಿಜೆಪಿ ಮುಖಂಡರನ್ನು ಗುರಿಯಾಗಿಟ್ಟುಕೊಂಡಿದ್ಧಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin