ಬಯಲು ಸೀಮೆಯಲ್ಲಿ ಮತ್ತೊಂದು ಮರ್ಯಾದ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Bagepalli-1

ಚಿಂತಾಮಣಿ, ಅ.21-ಬಯಲು ಸೀಮೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆಯಿತೆ. ಹೌದು ಎನ್ನುತ್ತಿವೆ ಪೋಲಿಸ್ ಮೂಲಗಳು. ಹೀಗಾಗಿ ಹತ್ಯೆಯ ಮೂಲ ಹುಡುಕುತ್ತಾ ಚಿಂತಾಮಣಿಗೆ ಬಂದಿದ್ದಾರೆ ಬೆಂಗಳೂರು ಪೋಲಿಸರು. ವಿವಾಹಿತೆಯಾಗಿದ್ದರೂ ಪತಿಗೆ ಕೈ ಕೊಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಪ್ರೇಮಾ ಹಾಗೂ ಆಕೆಯ ಪ್ರಿಯಕರ ಶ್ರೀನಾಥ್ ಅವರನ್ನು ಹತ್ಯೆ ಮಾಡಿರಬಹುದೇ ಎಂಬ ಸಂಶಯ ಬೆಂಗಳೂರಿನ ಕಾಡುಗೋಡಿ ಪೋಲಿಸರನ್ನು ಕಾಡುತ್ತಿದೆ. ಈ ಹತ್ಯೆಯ ಜಾಡು ಹಿಡಿದು ಚಿಂತಾಮಣಿಗೆ ಬಂದಿರುವ ಬೆಂಗಳೂರು ಪೋಲಿಸರು ಪ್ರೇಮಾ ಪತಿ ಮತ್ತಿತರರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಕೆಂಚಾರ್ಲಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಅನುಪಲ್ಲಿ ಗ್ರಾಮದಲ್ಲಿರುವ ಪ್ರೇಮಾ ಅವರ ಸಮಾಧಿಗೆ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಏನಿದು ಪ್ರಕರಣ : ತಾಲ್ಲೂಕಿನ ಬುರುಡುಗುಂಟೆ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರನಾಗಿದ್ದ ಹನುಮೈಗಾರಹಳ್ಳಿಯ ಶ್ರೀನಾಥ್ ಕದರೇನಹಳ್ಳಿ ಗ್ರಾಮದ  ಪ್ರೇಮಾಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿ ವಿಚಾರ ತಿಳಿದ ಪ್ರೇಮಾ ಪೋಷಕರು ಕಳೆದ ವರ್ಷ ಬೆಂಗಳೂರಿನ ವೆಂಕಟರೆಡ್ಡಿ ಎಂಬುವರಿಗೆ ವಿವಾಹ ಮಾಡಿಕೊಟ್ಟಿದ್ದರು. ವಿವಾಹವಾದ ನಂತರ ಕಳೆದ ಜುಲೈ 10ರಂದು ಪ್ರೇಮಾ ಪತಿಗೆ ಕೈ ಕೊಟ್ಟು ಪ್ರಿಯಕರ ಶ್ರೀನಾಥನೊಂದಿಗೆ ಪರಾರಿಯಾಗಿದ್ದಳು. ಈ ಕುರಿತಂತೆ ವೆಂಕಟರೆಡ್ಡಿ ಕಾಡುಗೋಡಿ ಪೋಲಿಸರಿಗೆ ಪತ್ನಿ ನಾಪತ್ತೆ ಕುರಿತಂತೆ ದೂರು ನೀಡಿದ್ದ.

ಆದರೆ, ಪ್ರೇಮಾ ಪ್ರಿಯಕರನೊಂದಿಗೆ ಪರಾರಿಯಾದ ಮರುದಿನವೇ ಶ್ರೀನಾಥನ ತಾಯಿ ಭಾಗ್ಯಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಸಾವಿನ ಸುದ್ದಿ ತಿಳಿದ ಶ್ರೀನಾಥ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರೇಮಾಳೊಂದಿಗೆ ವಾಪಾಸಾಗಿದ್ದ. ಈ ಸಂದರ್ಭದಲ್ಲಿ ಪೋಲಿಸರ ಸಮ್ಮುಖದಲ್ಲಿ ರಾಜಿಪಂಚಾಯ್ತಿ ನಡೆದು ಪ್ರೇಮಾಳನ್ನು ಮತ್ತೆ ಗಂಡ ವೆಂಕಟರೆಡ್ಡಿ ಜತೆ ಕಳುಹಿಸಿಕೊಡಲಾಗಿತ್ತು. ಆದರೆ, ಗಂಡನ ಮನೆಗೆ ಹೋದ ವಾರದೊಳಗೆ ಪ್ರೇಮಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತಂತೆ ವೆಂಕಟರೆಡ್ಡಿ ಪೋಷಕರು ಪೋಲಿಸರಿಗೆ ಯಾವುದೇ ದೂರು ನೀಡದೆ ಅನುಪಲ್ಲಿ ಗ್ರಾಮದಲ್ಲಿ ಪ್ರೇಮಾಳ ಶವಸಂಸ್ಕಾರ ನಡೆಸಿಬಿಟ್ಟಿದ್ದರು. ಇತ್ತ ಪ್ರೇಮಾ ಸಾವನ್ನಪ್ಪುತ್ತಿದ್ದಂತೆ ಅತ್ತ ಪ್ರಿಯಕರ ಶ್ರೀನಾಥ್ ನಾಪತ್ತೆಯಾಗಿದ್ದ. ಎಲ್ಲರೂ ಶ್ರೀನಾಥ ಎಲ್ಲೋ ಓಡಿಹೋಗಿರಬಹುದೆಂದೇ ಭಾವಿಸಿದ್ದರು. ಆದರೆ, ಬೆಂಗಳೂರಿನ ಕಾಡುಗೋಡಿ ಪೋಲಿಸರಿಗೆ ಬಂದ ಒಂದು ಅನಾಮಧೇಯ ಪತ್ರ ಪ್ರೇಮಾ ಮತ್ತು ಶ್ರೀನಾಥನ ಹತ್ಯೆ ಮಾಡಿರುವ ಬಗ್ಗೆ ಮಹತ್ವದ ಸುಳಿವು ನೀಡಿದೆ. ಪತ್ನಿ ಶ್ರೀನಾಥನ ಜತೆ ಪರಾರಿಯಾಗುತ್ತಿದ್ದಂತೆ ಕುಪಿತಗೊಂಡ ವೆಂಕಟರೆಡ್ಡಿ ಶ್ರೀನಾಥನ ತಾಯಿ ಭಾಗ್ಯಮ್ಮಳಿಗೂ ವಿಷ ಉಣಿಸಿ ಹತ್ಯೆ ಮಾಡಿ ಆತ್ಮಹತ್ಯೆ ಎಂದು ನಂಬಿಸಿದ್ದ.

ಅದೇ ರೀತಿ ಮತ್ತೆ ವಾಪಾಸಾದ ಪತ್ನಿ ಪ್ರೇಮಾಳಿಗೂ ವಿಷವಿಕ್ಕಿ ಹತ್ಯೆ ಮಾಡಿದ್ದೇ ಅಲ್ಲದೆ, ಶವ ಸಂಸ್ಕಾರ ನಡೆಸಿ ನಂತರ ಆಕೆಯ ಪ್ರಿಯಕರ ಶ್ರೀನಾಥನನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ  ಎನ್ನುವುದಕ್ಕೆ ಕಳೆದ 6 ತಿಂಗಳಿನಿಂದ ಶ್ರೀನಾಥ ಎಲ್ಲಿದ್ದಾನೆ ಎಂಬುದೇ ಯಾರಿಗೂ ತಿಳಿದಿಲ್ಲ. ಇತ್ತ ಕರ್ತವ್ಯಕ್ಕೂ ಆಗಮಿಸಿಲ್ಲ. ಇದೆಲ್ಲವನ್ನು ಗಮನಿಸಿದರೆ  ಆತನನ್ನೂ ಹತ್ಯೆ ಮಾಡಿರಬಹುದೇ ಎಂಬುದನ್ನು  ಅನಾಮಧೇಯ ಪತ್ರ ಬಹಿರಂಗಪಡಿಸಿತ್ತು. ಅನಾಮಧೇಯ ಪತ್ರ  ಸಂಚಲನ ಸೃಷ್ಟಿಸುತ್ತಿದ್ದಂತೆ ತಡಬಡಾಯಿಸಿ ಎದ್ದ ಪೋಲಿಸ್ ಇಲಾಖೆ ಮರ್ಯಾದಾ ಹತ್ಯೆಯ ಜಾಡು ಭೇದಿಸಲು ಮುಂದಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕಿಗೆ ಆಗಮಿಸಿರುವ ಕಾಡುಗೋಡಿ ಪೋಲಿಸರ ತಂಡ ವೆಂಕಟರೆಡ್ಡಿಯನ್ನು ವಶಕ್ಕೆ ತೆಗೆದುಕೊಂಡು ಪೋಲಿಸ್ ಆತಿಥ್ಯ ನೀಡಿ ಸತ್ಯ ಬಹಿರಂಗಗೊಳಿಸುವ ಸಾಹಸಕ್ಕೆ ಕೈ ಹಾಕಿದೆ. ಮಾತ್ರವಲ್ಲ ಅನುಪಲ್ಲಿ ಗ್ರಾಮದಲ್ಲಿರುವ ಪ್ರೇಮಾ ಸಮಾಧಿಗೂ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ತನಿಖೆಯನ್ನು ತೀವ್ರಗೊಳಿಸಿದೆ.

Facebook Comments

Sri Raghav

Admin