ಬರಪೀಡಿತ ಪಟ್ಟಿಗೆ ಇನ್ನೂ 29 ತಾಲೂಕುಗಳ ಸೇರ್ಪಡೆ : ರಾಜ್ಯದ ಶೇ 80 ರಷ್ಟು ಬರಗಾಲ

ಈ ಸುದ್ದಿಯನ್ನು ಶೇರ್ ಮಾಡಿ

drought-areas
ಬೆಂಗಳೂರು, ಅ.30- ರಾಜ್ಯದ ಶೇ.80ರಷ್ಟು ಭಾಗ ಬರಕ್ಕೆ ತುತ್ತಾಗಿದ್ದು, ಮತ್ತೆ ಹೊಸದಾಗಿ ಇನ್ನೂ 29 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ  ಅವರುಗಳನ್ನೊಳಗೊಂಡ ಸಚಿವ ಸಂಪುಟ ಉಪಸಮಿತಿ ನಿನ್ನೆ ನಡೆದ ಸಭೆಯಲ್ಲಿ ಬರ ಪೀಡಿತ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದೆ. 2016ರ ಜೂ.1ರಿಂದ ಸೆ.30ರ ವರೆಗೆ ಸಂಪೂರ್ಣ ಮುಂಗಾರು ಮಳೆ ವಿಫಲವಾಗಿದೆ.

ಅಕ್ಟೋಬರ್‍ನಲ್ಲಿ ಶೇ.78ರಷ್ಟು ಮಳೆ ಕೊರತೆಯಾಗಿದೆ. ಈ ತಿಂಗಳ ಪೂರ್ತಿ ತೇವಾಂಶದ ಕೊರತೆ ಕಾಡುತ್ತಿದೆ. ಇದರಿಂದ ಈಗಾಗಲೇ ಬೆಳೆದು ನಿಂತಿರುವ ಬೆಳೆಗಳ ಮೇಲೂ ಅಡ್ಡ ಪರಿಣಾಮವಾಗಿದೆ. ಈ ಮೊದಲು 110 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಜೂ.1 ರಿಂದ ಅ.31ರ ವರೆಗೆ ಮಳೆ ವೈಫಲ್ಯ ಹಾಗೂ ತೇವಾಂಶದ ಕೊರತೆ ಆಧಾರದ ಮೇಲೆ 15 ಜಿಲ್ಲೆಗಳ ಇನ್ನೂ 29 ತಾಲೂಕುಗಳನ್ನು ಹೆಚ್ಚುವರಿಯಾಗಿ ಬರ ಪೀಡಿತ ಎಂದು ಘೋಷಿಸಲಾಗಿದೆ.

ಬರ ಪೀಡಿತ ತಾಲೂಕುಗಳು:

ಬೆಂಗಳೂರು ನಗರದ ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ತಾಲೂಕುಗಳು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಬಳ್ಳಾರಿ ಜಿಲ್ಲೆಯ ಹಡಗಲಿ, ಹೊಸಪೇಟೆ, ಕೂಡ್ಲಗಿ, ಸಿರಗುಪ್ಪ, ಹಗರಿ ಬೊಮ್ಮನಹಳ್ಳಿ, ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ರಾಯಚೂರು ಜಿಲ್ಲೆಯ ಮಾನ್ವಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ, ರಾಯಬಾಗ, ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಜಮಖಂಡಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಯಲ್ಲಾಪುರ ತಾಲೂಕುಗಳು ಬರ ಪೀಡಿತವಾಗಿವೆ ಎಂದು ಘೋಷಿಸಲಾಗಿದೆ. ಈ ತಾಲೂಕುಗಳಲ್ಲಿ ಭೂ ರಹಿತ ಕಾರ್ಮಿಕರು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸುವುದು, ಕುಡಿಯುವ ನೀರು ಸರಬರಾಜು, ಮೇವು ಸರಬರಾಜು, ಜಾನುವಾರು ಸಂರಕ್ಷಣೆಯಂತಹ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಎಸ್‍ಟಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಬೆಳೆನಷ್ಟ ಅಂದಾಜಿಸಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin