ಬರಪೀಡಿತ ಪ್ರದೇಶಗಳ ಆಯ್ಕೆಗೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

asfASF

ಬೆಂಗಳೂರು, ಆ.16-ಸತತ ಮೂರನೇ ವರ್ಷವೂ ಕೂಡ ರಾಜ್ಯ ಬರದ ಛಾಯೆಯಲ್ಲಿ ಸಿಲುಕುವ ಲಕ್ಷಣಗಳು ಗೋಚರಿಸತೊಡಗಿದ್ದು, ಬರಪೀಡಿತ ಪ್ರದೇಶಗಳ ಘೋಷಣೆ ಮಾಡಲು ಕಂದಾಯ ಇಲಾಖೆ ಸಿದ್ಧತೆ ನಡೆಸತೊಡಗಿದೆ. ಮಳೆ ಕೊರತೆ, ಬೆಳೆ ಹಾನಿ, ತೇವಾಂಶದ ಅಭಾವ ಮೊದಲಾದ ಅಂಶಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಿದ್ದು, ಸತತ 4 ವಾರಗಳ ಕಾಲ ಒಣಹವೆ ಮುಂದುವರೆದಿರುವ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ರೈತರಲ್ಲಿ ಆಶಾಭಾವನೆ ಮೂಡಿಸಿದ್ದ ಮಳೆ, ಆಗಸ್ಟ್ನಲ್ಲಿ ಕೈಕೊಟ್ಟಿದೆ. ಕಳೆದ ಎರಡು ವಾರದಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.35ರಷ್ಟು ಮಳೆ ಕಡಿಮೆಯಾಗಿದ್ದು, ಬರದ ಛಾಯೆ ಆವರಿಸತೊಡಗಿದೆ.

ಮಳೆ ಕೊರತೆ ಉಂಟಾಗಿ ಬೆಳೆ ನಷ್ಟ ಆಗಿರುವ ಬಗ್ಗೆ ವರದಿ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ.  ಆಗಸ್ಟ್ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆದರೆ ಬರ ಪೀಡಿತ ಪ್ರದೇಶಗಳನ್ನು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಲಿದೆ. ಹವಾ ಮುನ್ಸೂಚನೆ ಪ್ರಕಾರ ಆಗಸ್ಟ್ ತಿಂಗಳ ಮೂರನೇ ವಾರದಲ್ಲೂ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ. ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದ್ದರೂ ಸಾಲುತ್ತಿಲ್ಲ.  ಬಹುತೇಕ ಕಡೆಗಳಲ್ಲಿ ಬಿತ್ತಿದ ಬೆಳೆಗಳು ಮೊಳಕೆ ಹಂತದಲ್ಲೇ ಒಣಗತೊಡಗಿವೆ. ಇದರಿಂದ ರೈತ ಸಮುದಾಯ ಕಂಗಾಲಾಗಿದೆ. ಸತತ ಎರಡು ವರ್ಷಗಳ ಕಾಲ ಬರದ ಛಾಯೆಗೆ ಸಿಲುಕಿ ನಲುಗಿದ್ದ ರಾಜ್ಯದ ಜನತೆ ಮೂರನೆ ವರ್ಷವೂ ಪರಿತಪಿಸುವಂತಹ ಲಕ್ಷಣಗಳು ಕಂಡುಬರುತ್ತಿವೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸದ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಆ.20ರ ನಂತರ ವಾತಾವರಣದಲ್ಲಿ ಬದಲಾವಣೆ ಉಂಟಾಗಿ ವಾಯುಭಾರ ಕುಸಿತ ಉಂಟಾದರೆ ಉತ್ತಮ ಮಳೆ ನಿರೀಕ್ಷಿಸಬಹುದು.

ಜುಲೈನಲ್ಲಿ ಶೇ.71ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದ್ದ ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ ಮೊದಲೆರಡು ವಾರದಲ್ಲಿ ಶೇ.75ರಷ್ಟು ತೀವ್ರ ಮಳೆಯ ಕೊರತೆ ಉಂಟಾಗಿದೆ. ಅದೇ ರೀತಿ ಮಲೆನಾಡಿನಲ್ಲಿ ಶೇ.30, ಕರಾವಳಿಯಲ್ಲಿ ಶೇ.25 ಹಾಗೂ ಉತ್ತರ ಕರ್ನಾಟಕ ಭಾಗದಲ್ಲೂ ಶೇ.40ರಷ್ಟು ಮಳೆ ಕೊರತೆ ಉಂಟಾಗಿದೆ. ಜೂನ್ 1 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಶೇ.10ರಷ್ಟು ಮಳೆ ಕೊರತೆಯಾಗಿದ್ದರೆ, ಮಲೆನಾಡು ಭಾಗದಲ್ಲಿ ಶೇ.26ರಷ್ಟು ಮಳೆ ಕೊರತೆ ಉಂಟಾಗಿದೆ.  ಅಧಿಕ ಮಳೆ ಬೀಳುವ ಮಲೆನಾಡು ಹಾಗೂ ಕರಾವಳಿ ಭಾಗದಲ್ಲೂ ಈ ಬಾರಿ ಮಳೆ ಕೊರತೆಯನ್ನು ಎದುರಿಸಲಾಗುತ್ತಿದೆ. ಇದರಿಂದ ಜಲಾಶಯಗಳು ಭರ್ತಿಯಾಗದೆ ಜಲಕ್ಷಾಮ ಉಂಟಾಗಿದೆ. ಜಲಾಶಯಗಳಿಂದ ಕೃಷಿಗೆ ನೀರು ಬಿಡದಿರಲು ಈಗಾಗಲೇ ಸರ್ಕಾರ ನಿರ್ಧರಿಸಿದೆ. ಮಳೆ ಕೂಡ ಕೈಕೊಟ್ಟಿದ್ದು, ಮಳೆಯಾಶ್ರಿತ ಬೆಳೆಯೂ ಕೂಡ ರೈತರ ಕೈ ಸೇರುವ ನಿರೀಕ್ಷೆ ಕಂಡು ಬರುತ್ತಿಲ್ಲ. ಹೀಗಾಗಿ ರಾಜ್ಯದ ಆಹಾರ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.

► Follow us on –  Facebook / Twitter  / Google+

Facebook Comments

Sri Raghav

Admin