ಬರಪೀಡಿತ ಹಳ್ಳಿಗಳಿಗೆ ತೆರಳಲು ಸಚಿವರಿಗೆ ಸಿಎಂ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

> ಉಮೇಶ್ ಕೊಲಿಗೆರೆ 

ಬೆಳಗಾವಿ(ಸುವರ್ಣಸೌಧ), ನ.23– ಬರ ನಿರ್ವಹಣೆ ಕಾಮಗಾರಿಗಳನ್ನು ಶಾಸಕರು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಉಸ್ತುವಾರಿ ಸಚಿವರು ಹಳ್ಳಿ ಹಳ್ಳಿಗಳಿಗೆ ತೆರಳಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಅಗತ್ಯ ಸೌಲಭ್ಯಗಳನ್ನು ಜನರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ದಿ ಕೆಲಸಗಳು ಹಿನ್ನಡೆಯಾದರೂ ಪರವಾಗಿಲ್ಲ. ಬರ ನಿರ್ವಹಣೆ ಕಾಮಗಾರಿಗಳಿಗೆ ಶಾಸಕರು ಆದ್ಯತೆ ನೀಡಬೇಕು. ಸಮರೋಪಾದಿಯಲ್ಲಿ ಕಾರ್ಯೋ ನ್ಮುಖರಾಗಬೇಕು.  ಸಚಿವರು ಕೇಂದ್ರ ಸ್ಥಾನದಲ್ಲಿ ಕುಳಿತು ಅಧಿಕಾರಿಗಳಿಂದ ಕೇವಲ ವರದಿ ತರಿಸಿಕೊಳ್ಳುವಂತಹ ಕೆಲಸವನ್ನು ಮಾಡಬಾರದು. ಹಳ್ಳಿ ಹಳ್ಳಿಗಳಿಗೆ ತೆರಳಿ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಬೇಕು. ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ.

139 ತಾಲೂಕುಗಳಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದೆ. ನಾನು ಆರು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಅಧಿವೇಶನದ ನಂತರ ಉಳಿದ ಜಿಲ್ಲೆಗಳಿಗೆ ತೆರಳಿ ವಾಸ್ತವತೆಯನ್ನು ಅರಿಯುತ್ತೇನೆ. ಪ್ರತಿ ಬರಪೀಡಿತ ವಿಧಾನಸಭಾ ಕ್ಷೇತ್ರಕ್ಕೆ 60 ಲಕ್ಷ ಹಾಗೂ ಬರಪೀಡಿತವಲ್ಲದ ವಿಧಾನಸಭಾ ಕ್ಷೇತ್ರಗಳಿಗೆ 40 ಲಕ್ಷ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಈಗಾಗಲೇ 384 ಕೋಟಿ ರೂ.ಗಳು ಹಣ ಇದ್ದು, ಅದನ್ನು ಅಗತ್ಯಕ್ಕಗನುಗುಣವಾಗಿ ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಹೆಚ್ಚಿನ ಶಾಸಕರು ಮನೆಗಳನ್ನು ಒದಗಿಸುವಂತೆ ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ಒದಗಿಸಲು ಸಿಎಂ ಸೂಚಿಸಿದ್ದಾರೆ.
ಬರ ಪರಿಹಾರ ನಿರ್ವಹಣೆ ಸಂದರ್ಭದಲ್ಲಿ ಸಚಿವರುಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಶಾಸಕರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಸಭೆಯಲ್ಲಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಚಿವರು, ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.  ಕೆರೆ ಸಂಜೀವಿನಿ ಯೋಜನೆ ಉತ್ತಮವಾಗಿದ್ದು, ಅದನ್ನು ಮುಂದುವರೆಸುವಂತೆ ಶಾಸಕರು ಆಗ್ರಹ ಪಡಿಸಿರುವ ಹಿನ್ನೆಲೆಯಲ್ಲಿ ಸಿಎಂ ಅದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬರಗಾಲ ಇದ್ದುದರಿಂದ ಆಹಾರ ಉತ್ಪಾದನೆ ಕಡಿಮೆಯಾಗಿದೆ. ನೋಟು ನಿಷೇಧದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದೆ. ವಾಹನ ನೋಂದಣಿ ಕಡಿಮೆಯಾಗಿದೆ. ವ್ಯಾಪಾರ ವಹಿವಾಟು ಕುಸಿತದಿಂದ ರಾಜ್ಯಸರ್ಕಾರಕ್ಕೆ ಆದಾಯ ಕಡಿಮೆಯಾಗಿದೆ. ಆದರೂ ರಾಜ್ಯ ಸರ್ಕಾರ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ ಎಂದು ಹೇಳಿದರು.

ಆರ್ಥಿಕ ಶಿಸ್ತಿನ ಮಿತಿಯಡಿಯಲ್ಲಿ ರಾಜ್ಯಸರ್ಕಾರ ಸಾಲ ಮಾಡಿದೆ. ಶೇ.25ರಷ್ಟು ಮಿತಿಯಲ್ಲಿ ಸಾಲ ಮಾಡಬೇಕೆಂಬ ಕಾಯ್ದೆಯಡಿಯಲ್ಲಿಯೇ ಸಾಲವನ್ನು ಸರ್ಕಾರ ಮಾಡಿದೆ. ವಿತ್ತೀಯ ಕೊರತೆಯನ್ನು ಸರ್ಕಾರ ಮೀರಿಲ್ಲ. ಕೇಂದ್ರ ಸರ್ಕಾರದ ಆರ್ಥಿಕ ಶಿಸ್ತಿನ ಮಿತಿಯನ್ನು ಮೀರಿಲ್ಲ. ಎಲ್ಲ ರಾಜ್ಯ ಸರ್ಕಾರಗಳ ಆರ್ಥಿಕ ಅಭಿವೃದ್ಧಿಯ ಸರ್ವೆ ನಡೆಸಿದ ಇಂಡಿಯಾ ಟುಡೇ ಕರ್ನಾಟಕ ರಾಜ್ಯ ಸರ್ಕಾರ, ಸ್ಟೇಟ್ ಆಫ್ ದಿ ಸ್ಟೇಟ್ಸ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಭೆಯಲ್ಲಿ ಸಾಲ ಮನ್ನಾ ಬಗ್ಗೆ ಪ್ರಸ್ತಾಪವಾಗಿದೆ. ಸಹಕಾರಿ ಸಂಘಗಳ ಮೂಲಕ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ. ರಾಷ್ಟ್ರೀಯ ಬ್ಯಾಂಕ್‍ಗಳು ಹಾಗೂ ಪ್ರಾದೇಶಿಕ ಬ್ಯಾಂಕ್‍ಗಳ ಮೂಲಕ 35 ಸಾವಿರ ಕೋಟಿ ರು. ಹೆಚ್ಚು ಸಾಲ ನೀಡಲಾಗಿದೆ. ಕೇಂದ್ರ ಸರ್ಕಾರ ಶೇ.50ರಷ್ಟು ಸಾಲ ಮನ್ನಾ ಮಾಡಲು ಮುಂದಾದರೆ ರಾಜ್ಯ ಸರ್ಕಾರ ಸಾಲ ಮನ್ನಾ ಬಗ್ಗೆ ಚಿಂತನೆ ನಡೆಸಬಹುದಾಗಿದೆ. ರಾಜ್ಯ ಸರ್ಕಾರವೊಂದೇ ಸಾಲದ ಹೊರೆ ಹೊರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಂತರ ಮಾತನಾಡಿದ ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. ಎಲ್ಲಾ ರಾಜ್ಯಗಳಿಗಿಂತ ನಂ.1 ಸ್ಥಾನದಲ್ಲಿದೆ ಎಂದು ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಹೇಳಿದೆ. ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಶಾಸಕರು, ಸಚಿವರು, ತ್ವರಿತವಾಗಿ ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ನೈಸ್ ವಿಷಯವಾಗಲಿ, ತನ್ವೀರ್‍ಸೇಠ್ ವಿಷಯವಾಗಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪರಂ ಉತ್ತರಿಸಿದರು.

<  ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : ಪರಿಚಯಿಸುತ್ತಿದ್ದೇವೆ Eesanje News 24/7 ನ್ಯೂಸ್ ಆ್ಯಪ್ –  Click Here to Download >

Facebook Comments

Sri Raghav

Admin