ಬರಿದಾದ ಕಾವೇರಿಕೊಳ್ಳ, ಕುಡಿವ ನೀರಿಗೆ ಹಾಹಾಕಾರ, ರಾಜ್ಯವನ್ನು ಕಾಡಲಿದೆ ಭೀಕರ ಜಲಕ್ಷಾಮ..!

ಈ ಸುದ್ದಿಯನ್ನು ಶೇರ್ ಮಾಡಿ

Drinking-Water-Eesanje

ಬೆಂಗಳೂರು, ಫೆ.7-ನಾಲ್ಕು ದಶಕಗಳ ನಂತರ ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಜಲಕ್ಷಾಮ ಎದುರಾಗಲಿದೆ. ರಾಜಧಾನಿ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ನೀರು ಬರಿದಾಗಿದೆ.  ಮಧ್ಯ ಕರ್ನಾಟಕದ ಪ್ರಮುಖ ನೀರಿನ ಆಸರೆಯಾದ ತುಂಗಭದ್ರಾ ನದಿಯೂ ಕೂಡ ಖಾಲಿಯಾಗಿದ್ದು, ಈ ಭಾಗದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಗೂ ಕುಡಿಯುವ ನೀರಿನ ಬಿಸಿ ತಟ್ಟಿದೆ.

ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ನೀರು ಪೂರೈಸುವ ತುಂಗಭದ್ರಾ ನದಿಯಲ್ಲೂ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದ್ದುದರಲ್ಲೇ ಮುಂಬೈ ಮತ್ತು ಹೈದರಾಬಾದ್-ಕರ್ನಾಟಕದ ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ತುಸು ನೀರಿನ ಪ್ರಮಾಣ ಹೆಚ್ಚಾಗಿರುವುದು ಮುಳುಗುವವರೆಗೆ ಹುಲ್ಲು ಕಡ್ಡಿ ಆಸರೆಯಂತಾಗಿದೆ.

ಡೆಡ್ ಸ್ಟೋರೆಜ್ ತಲುಪಿರುವ ಕಾವೇರಿ ಕೊಳ್ಳ:

ಬೆಂಗಳೂರಿನ ಪ್ರಮುಖ ನೀರಿನ ಆಸರೆಯಾದ ನಾಲ್ಕು ಕಾವೇರಿ ಕೊಳ್ಳದ ಜಲಾಶಯಗಳು ಬರಗಾಲದಿಂದ ಬರಿದಾಗುವ ಹಂತ ತಲುಪಿವೆ. ಇದರ ಪರಿಣಾಮ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕೆಆರ್‍ಎಸ್ ಅಣೆಕಟ್ಟಿನಲ್ಲಿ ಸದ್ಯಕ್ಕೆ 78.96ಅಡಿ ನೀರು ಸಂಗ್ರಹವಾಗಿದೆ. ಇದರಲ್ಲಿ ಬಳಕೆಗೆ ಯೋಗ್ಯವಾಗಿರುವುದು ಕೇವಲ ಒಂದು ಟಿಎಂಸಿ ಮಾತ್ರ. ಈಗಾಗಲೇ ಜಲಾಶಯದ ನೀರು ಡೆಡ್ ಸ್ಟೋರೇಜ್ ತಲುಪಿರುವುದರಿಂದ ಹೆಚ್ಚೆಂದರೆ ಈ ತಿಂಗಳ ಅಂತ್ಯದವರೆಗೂ ಮಾತ್ರ ನೀರು ಪೂರೈಕೆ ಮಾಡಬಹುದಾಗಿದೆ.  ಮುಂದಿನ ಮಳೆಗಾಲ ಆರಂಭವಾಗುವವರೆಗೂ ಅಂದರೆ ಮೇ ಅಂತ್ಯದವರೆಗೆ ಬೆಂಗಳೂರಿಗೆ ಕನಿಷ್ಠ ಅರ್ಧ ಟಿಎಂಸಿ ನೀರಿನ ಅಗತ್ಯವಿದೆ. ಇನ್ನು ಹಾರಂಗಿ, ಹೇಮಾವತಿ ಮತ್ತು ಕಬಿನಿ ಜಲಾಶಯಗಳಲ್ಲೂ ನೀರು ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಹಾರಂಗಿ ಜಲಾಶಯದಲ್ಲಿ 2820.43 ಅಡಿ, ಹೇಮಾವತಿಯಲ್ಲಿ 2864.32 ಹಾಗೂ ಕಬಿನಿಯಲ್ಲಿ 2256.76 ಅಡಿ ನೀರು ಸಂಗ್ರಹವಾಗಿದೆ. ಇನ್ನೊಂದು ತಿಂಗಳು ಕಳೆದರೆ ಈ ನೀರನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

ಪ್ರಾಣಿಪಕ್ಷಿಗಳಿಗೂ ನೀರಿನ ಕೊರತೆ:

ಕಾವೇರಿ ಕೊಳ್ಳದಲ್ಲಿ ನೀರಿನ ಮಟ್ಟ ಕುಸಿದಿದ್ದು, ಈ ಭಾಗದ ಪ್ರಾಣಿ ಸಂಕುಲಗಳಿಗೂ ನೀರಿನ ಹಾಹಾಕಾರ ಉಂಟಾಗಿದೆ.  ಬಂಡೀಪುರ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಕಾಡು ಪ್ರಾಣಿಗಳಾದ ಆನೆ, ಸಿಂಹ, ಚಿರತೆ ಸೇರಿದಂತೆ ರಾಸುಗಳಿಗೂ ನೀರು ಇಲ್ಲವಾಗಿದೆ.  ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಈ ಜಲಾಶಯಗಳಿಗೆ ಹೊರರಾಜ್ಯಗಳಿಂದ ಪ್ರಾಣಿಪಕ್ಷಿಗಳು ವಲಸೆ ಬರುತ್ತಿದ್ದವು. ಪ್ರತಿವರ್ಷ ಡಿಸೆಂಬರ್ ಆಗಮಿಸುತ್ತಿದ್ದಂತೆ ವಿವಿಧ ರೀತಿಯ ಪಕ್ಷಿಗ ಳು ಮೇ ತಿಂಗಳವರೆಗೆ ಇಲ್ಲಿಯೇ ನೆಲೆಸಿ ಬಳಿಕ ತಮ್ಮ ಮೂಲ ಸ್ಥಳಗಳಿಗೆ ಹೋಗುತ್ತಿದ್ದವು.  ಆದರೆ ಈ ಬಾರಿ ಜಲಾಶಯಗಳಲ್ಲಿ ನೀರು ಇಲ್ಲದಿರುವುದರಿಂದ ಪಕ್ಷಿಗಳ ಕಲರವ ತುಸು ಕಡಿಮೆಯಾಗಿದೆ.

ಮಧ್ಯ ಕರ್ನಾಟಕದಲ್ಲೂ ಹಾಹಾಕಾರ:

Drinking-Water

ಇನ್ನು ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲೂ ಜಲಕ್ಷಾಮ ಉಂಟಾಗಿದೆ. ಈ ಭಾಗದ ಜೀವನಾಡಿಯಾದ ಭದ್ರಾ  ಜಲಾಶಯ ಬಹು ವರ್ಷಗಳ ನಂತರ ಸಂಪೂರ್ಣ ಖಾಲಿಯಾಗುವ ಹಂತ ತಲುಪಿವೆ. ಸದ್ಯಕ್ಕೆ 2110.52 ಅಡಿ ನೀರು ಸಂಗ್ರಹವಾಗಿದ್ದರೂ ಇದರಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಿರುವುದು ಕೆಲವೇ ಅಡಿಗಳು ಮಾತ್ರ.   ಬೇಸಿಗೆಯಲ್ಲೂ ಈ ಭಾಗದ ಜನ ಬೆಳೆ ಬೆಳೆದಿರುವ ಪರಿಣಾಮ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಬಹುತೇಕ ಕಡೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆಯಾದರೂ ಅದು ಬಕಾಸುರನ ಹೊಟ್ಟೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದಲ್ಲಿ ಎರಡು ದಶಕಗಳ ನಂತರ ನೀರಿನ ಮಟ್ಟ ಕುಸಿತ ಕಂಡಿದೆ. ಜಲಾಶಯದಲ್ಲಿ ಒಟ್ಟು ಪ್ರಮಾಣ 1819 ಅಡಿಯಾಗಿದ್ದರೆ, ಸದ್ಯಕ್ಕೆ 1787.90 ನೀರು ಸಂಗ್ರಹವಾಗಿದೆ. ಹೆಚ್ಚೆಂದರೆ ಮಾರ್ಚ್ ತಿಂಗಳ ಅಂತ್ಯದವರೆಗೆ ಇಲ್ಲಿ ವಿದ್ಯುತ್ ಉತ್ಪಾದಿಸಬಹುದಾಗಿದೆ.   ಈಗಾಗಲೇ ಕೃಷಿ ಚಟುವಟಿಕೆಗಳಿಗೆ ಜಲಾಶಯದ ನೀರು ಬಳಸದಂತೆ ಸೂಚನೆ ನೀಡಿದೆಯಾದರೂ ಕೆಲವು ಕಡೆ ಕದ್ದು ಮುಚ್ಚಿ ಚಾನೆಲ್‍ಗಳ ಮೂಲಕ ನೀರು ಹರಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.  ತುಂಗಭದ್ರಾ ನದಿ ನೀರು ಆಶ್ರಯಿಸಿರುವ ಬರದ ನಾಡು ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಈಗಲೂ ಈಗಾಗಲೇ ವಾರದಲ್ಲಿ 3 ದಿನ ನೀರು ಮಾತ್ರ ಪೂರೈಕೆ ಮಾಡಲಾಗುತ್ತಿದೆ.  ಮಹಾರಾಷ್ಟ್ರದಲ್ಲಿ ಈ ಬಾರಿ ಉತ್ತಮ ಮಳೆಯಾದ ಪರಿಣಾಮ ಹೈದರಾಬಾದ್ ಮತ್ತು ಮುಂಬೈ-ಕರ್ನಾಟಕ ಭಾಗಗಳು ಸಮೃದ್ಧಿಯಾಗಿವೆ.  ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಅಷ್ಟು ಪರಿಣಾಮ ಬೀರಿಲ್ಲ.

ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ:

ಜಲಾಶಯಗಳು- ಒಟ್ಟು ಸಂಗ್ರಹಣಾ ಸಾಮಥ್ರ್ಯ- ಪ್ರಸ್ತುತ ಸಂಗ್ರಹ
ಲಿಂಗನಮಕ್ಕಿ-1819.00-1782.90
ಹಾರಂಗಿ-2859.00-282043
ಹೇಮಾವತಿ-2922.00-2864.32
ಕೆಆರ್‍ಎಸ್-124.80-78.96
ಕಬಿನಿ-2284.00-2256.76
ಭದ್ರಾ-2158.00-2110.52
ತುಂಗಭದ್ರಾ-1633.00-1582.40
ಆಲಮಟ್ಟಿ-1704.81-1676.59

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin