ಬರಿದಾದ ಕಾವೇರಿ ಒಡಲು : ಜಲಮಂಡಳಿಗೆ ಮತ್ತೆ ನೆನಪಾದ ತಿಪ್ಪಗೊಂಡನಹಳ್ಳಿ ಡ್ಯಾಂ..!

ಈ ಸುದ್ದಿಯನ್ನು ಶೇರ್ ಮಾಡಿ

Tippagondanahalli

ಬೆಂಗಳೂರು, ಅ.17- ಕಾವೇರಿ ಒಡಲು ಬರಿದಾಗುತ್ತಿದ್ದಂತೆ ಜಲಮಂಡಳಿಗೆ ಮತ್ತೆ ತಿಪ್ಪಗೊಂಡನಹಳ್ಳಿ ಜಲಾಶಯ ನೆನಪಾಗಿದೆ. ಹಳೇ ಗಂಡನ ಪಾದವೇ ಗತಿ ಎನ್ನುವ ಗಾದೆ ಮಾತಿನಂತೆ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಜಲಮಂಡಳಿ ಮತ್ತೆ ತಿಪ್ಪಗೊಂಡನಹಳ್ಳಿ ಜಲಾಶಯದತ್ತ ಚಿತ್ತ ಹರಿಸಿದೆ. ಹೌದು, 1933ರಲ್ಲಿ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ತಿಪ್ಪಗೊಂಡನಹಳ್ಳಿ ಯೋಜನೆ ರೂಪಿಸಲಾಯಿತು. ಮಾಗಡಿ ತಾಲೂಕಿನ ತೊರೆಕಾಡನಹಳ್ಳಿ ಬಳಿ ಅರ್ಕಾವತಿ ಹಾಗೂ ಕುಮದ್ವತಿ ನದಿಗಳು ಸೇರುವ ಜಾಗದಲ್ಲಿ ಚಾಮರಾಜ ಹೆಸರಿನ ಜಲಾಶಯ ನಿರ್ಮಿಸಿ 27 ದಶಲಕ್ಷ ಲೀಟರ್ ನೀರು ಪೂರೈಕೆ ಮಾಡಲು ಆರಂಭಿಸಲಾಯಿತು.

ನಂತರ ಅದನ್ನು 135 ದಶಲಕ್ಷ ಲೀಟರ್ ಪೂರೈಕೆ ಮಾಡುವ ಸಾಮಥ್ರ್ಯಕ್ಕೆ ಪರಿವರ್ತಿಸಲಾಯಿತು. 75 ಅಡಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯದಿಂದ ನೀರು ಪೂರೈಕೆ ಮಾಡುವುದನ್ನು 2012ರ ನವೆಂಬರ್ 15 ರಿಂದ ಸ್ಥಗಿತಗೊಳಿಸಲಾಗಿದೆ. ಕಾವೇರಿ ನಾಲ್ಕನೆ ಹಂತದ ಯೋಜನೆ ಜಾರಿಯಾಗುತ್ತಿದ್ದಂತೆ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಜಲಮಂಡಳಿ ಮರೆತಿದೆ. ಹೂಳು ತುಂಬಿ ನೀರು ಸಂಗ್ರಹವಾಗದ ರೀತಿಯಾಗಿದ್ದು, ನಿರ್ವಹಣೆ ಇಲ್ಲದೆ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಆದರೆ, ಇದೀಗ ಕಾವೇರಿಯಿಂದ ಬೆಂಗಳೂರಿಗರ ದಾಹ ತೀರಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದ್ದಂತೆ ಜಲಮಂಡಳಿ ಮತ್ತೆ ತಿಪ್ಪಗೊಂಡನಹಳ್ಳಿಯತ್ತಲೇ ಚಿತ್ತ ಹರಿಸಿದೆ.

ನಿರ್ವಹಣೆಯಿಲ್ಲದಿದ್ದರೂ ಬಳಕೆಯಿಲ್ಲದೇ ಹಾಲಿ ಸಂಗ್ರಹಗೊಂಡಿರುವ ನೀರನ್ನೇ ಶುದ್ಧೀಕರಿಸಿ ಮಹಾನಗರಕ್ಕೆ ಪೂರೈಕೆ ಮಾಡಲು ಚಿಂತನೆ ನಡೆಸಿದೆ. ಈ ಸಂಬಂಧ ಈಗಾಗಲೇ ಜಲಮಂಡಳಿ ಅಧಿಕಾರಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದಾ ರೆ. ಸಧ್ಯ ನಿತ್ಯ 1400 ದಶಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಕೆಆರ್‍ಎಸ್ ತಳಕಚ್ಚಿದೆ. ಹೆಚ್ಚು ದಿನ ಕಾವೇರಿ ನೀರು ಪೂರೈಕೆ ಸಾಧ್ಯವಿಲ್ಲ.  ಇದನ್ನೆಲ್ಲ ಪರಿಶೀಲಿಸಿರುವ ಜಲಮಂಡಳಿ ಅಧಿಕಾರಿಗಳು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಇರುವ ನೀರನ್ನು ಒಂದು ತಿಂಗಳ ಕಾಲ ನಗರಕ್ಕೆ ಪೂರೈಕೆ ಮಾಡಲು ಸಾಧ್ಯವ ಎನ್ನುವ ಮಾಹಿತಿ ನೀಡಿದ್ದಾ ರೆ. ಮಹಾನಗರಕ್ಕೆ ಬೇರೆ ನೀರಿನ ಮೂಲವಿಲ್ಲದೆ ಇರುವ ಕಾರಣ ಕಾವೇರಿ ನೀರನ್ನೇ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಜಲಮಂಡಳಿ ಪ್ರಯತ್ನ ನಡೆಸಿದೆ. ಕಾವೇರಿ ಪೂರೈಕೆ ಕಷ್ಟಸಾಧ್ಯವಾದಾಗ ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಬಳಸಿಕೊಂಡು ನೀರು ಪೂರೈಕೆ ಮಾಡಲು ನಿರ್ಧರಿಸಿದ್ದಾರೆ.

ಅರ್ಕಾವತಿ ಹಾಗೂ ಕುಮದ್ವತಿ ನೀರಿನ ಮೂಲ ಬರಿದಾಗಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಳೆ ನೀರು ಒದಗಿಸುವ ಮಾರ್ಗಗಳು ಮುಚ್ಚಿವೆ. ಇದನ್ನು ಸರಿಪಡಿಸಿ ಜಲಾಶಯದಲ್ಲಿನ ಹೂಳು ತೆಗೆದು ಮತ್ತೆ ಜಲಾಶಯವನ್ನು ಪ್ರತಿ ವರ್ಷ ಬಳಕೆ ಮಾಡಿಕೊಳ್ಳುವ ರೀತಿ ಅಭಿವೃದ್ಧಿಪಡಿಸಬೇಕಿದೆ. ಈ ಸಂಬಂಧ ಸರ್ಕಾರದೊಂದಿಗೆ ಜಲಮಂಡಳಿ ಅಧಿಕಾರಿಗಳು ಮಾತುಕತೆ ನಡೆಸುವುದಾಗಿ ಮಾಹಿತಿ ನೀಡಿದ್ದಾ . ಒಟ್ಟಿನಲ್ಲಿ ಕಾವೇರಿ ಬಂದಳು ಎಂದು ನಗರಕ್ಕೆ ಮೊಟ್ಟ ಮೊದಲ ಬಾರಿಗೆ ಕುಡಿಯುವ ನೀರು ಪೂರೈಕೆ ಆರಂಭಿಸಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಕಡೆಗಣಿಸಿದ್ದ ಜಲಮಂಡಳಿ ಇದೀಗ ಮತ್ತೆ ಅದರತ್ತಲೇ ಮುಖ ಮಾಡಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸಿಲಿಕಾನ್ ಸಿಟಿ ಜನರ ದಾಹ ತೀರಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin