ಬರಿದಾದ ಮಲ್ಲಾಘಟ್ಟ ಒಡಲು, ನೀರಿಗಾಗಿ ನಾಗರಿಕರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಏ.21- ಬರಗಾಲದ ಬೇಗೆಯಿಂದ ಕಂಗಾಲಾಗಿರುವ ಪಟ್ಟಣ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ. ಸುಮಾರು 16 ಸಾವಿರಕ್ಕೂ ಹೆಚ್ಚು ನಗರೀಕರಿಗೆ ನೀರೊದಗಿಸುತ್ತಿದ್ದ ಹೇಮಾವತಿ ನೀರಿನ ಮಲ್ಲಾಘಟ್ಟ ಒಡಲು ಇಂದು ಬರಿದಾಗಿದೆ. ಇದರಿಂದ ಹಿಂದೆಂದೂ ಕಾಣದ ನೀರಿನ ಅಭಾವ ಪಟ್ಟಣದಲ್ಲಿ ತಲೆದೋರಿದೆ.ಕುಡಿಯುವ ನೀರಿನ ಆಸರೆಯಾಗಿದ್ದ ಮಲ್ಲಾಘಟ್ಟ ಕೆರೆ ಇಂದು ಅಸಹಾಯಕಳಾಗಿದ್ದಾಳೆ. ಸುಮಾರು 2 ತಿಂಗಳ ಹಿಂದೆಯೇ ನೀರು ಖಾಲಿಯಾಗಿದ್ದು ಜಾಕ್‍ವೆಲ್‍ಗೆ ನೀರು ಎಟುಕದೆ ಅನೇಕ ಬಾರಿ ಜೆಸಿಬಿಗಳಿಂದ ಕಾಲುವೆ ಮೂಲಕ ನೀರನ್ನು ಪಡೆದು ಪಟ್ಟಣಕ್ಕೆ ಒದಗಿಸಲಾಗಿತ್ತು. ಅದೂ ಅಲ್ಲದೆ ಸುಮರು 20 ಎಚ್ ಪಿ ಸಾಮಥ್ರ್ಯದ ಮೋಟರ್ ಪಂಪ್ ಖರೀದಿಸಿ ಡೆಡ್ ಸ್ಟೋರ್ ನಲ್ಲಿದ್ದ ನೀರನ್ನು ಅಂತೂ-ಇಂತೂ ಪಟ್ಟಣಕ್ಕೆ ಒದಗಿಸುವಲ್ಲಿ ಪ.ಪಂ. ಪ್ರಯತ್ನ ಪಟ್ಟಿತು.

ಕೊನೆ ಘಳಿಗೆಯಲ್ಲಿ ಮೋಟಾರು ಪಂಪ್ ಬಿಟ್ಟಿದ್ದ ಸ್ಥಳದಲ್ಲಿ ಕಂಪನದಿಂದ ಮಣ್ಣು ಹಾಗೂ ಪಾಚಿಯಿಂದ ಕೂಡಿದ ಗಲೀಜು ನೀರು ಬರತೊಡಗಿತು. ಇದನ್ನು ಫಿಲ್ಟರ್ ಹೌಸ್ ನಲ್ಲಿ ಸಂಸ್ಕರಣೆಗೆ ಒಳಪಡಿಸಿದರೂ ಸಹಾ ಹಸಿರು ಮಿಶ್ರಿತ ನೀರು ಬದಲಾಗಲಿಲ್ಲ. ನಲ್ಲಿಗಳಲ್ಲಿ ಹಸಿರು ಮಿಶ್ರಿತ ನೀರು ಬರುವುದನ್ನು ಕಂಡ ನಾಗರಿಕರು ಹೌಹಾರಿದರು. ಸ್ನಾನ ಮಾಡಿದ ಕೆಲವು ನಾಗರಿಕರಿಗೆ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಅನಾರೋಗ್ಯಕ್ಕೂ ಕಾರಣವಾಯಿತು.

ಎಂಟತ್ತು ದಿನಕ್ಕೊಮ್ಮೆ ನೀರು:

ತಾಲ್ಲೂಕು ಭೀಕರ ಬರಗಾಲಕ್ಕೆ ತತ್ತರಿಸಿದ್ದು, ಕೆರೆ ಕಟ್ಟೆಯಲ್ಲಿನ ನೀರು ಖಾಲಿಯಾಗಿ ಕುಡಿಯುವ ನೀರಿಗೆ ತೀವ್ರ ಅಭಾವ ಕಾಣಿಸಿಕೊಂಡು ನಾಗರೀಕರು ನೀರಿಗಾಗಿ ಸುಡುವ ಬಿಸಿ¯ನ್ನು ಲೆಕ್ಕಿಸದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಎಂಟತ್ತು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು ಆ ನೀರನ್ನು ಗೃಹಬಳಕೆಗೆ ಮಾತ್ರ ಸೀಮಿತಗೊಳಿಸಿದ್ದು ಹೀಗಾಗಿ ಶುದ್ಧೀಕರಿಸಿದ ನೀರಿಗೆ ಎಲ್ಲಿಲ್ಲದ ಬೇಡಿಕೆಯಾಗಿದೆ.

ಶುದ್ದ ನೀರು ಪಡೆಯಲು ದಿನವಿಡಿ ಕ್ಯೂ:

ಈಗಾಗಲೇ ಕೊಳಾಯಿ ನೀರು ಅಶುದ್ದ ನೀರಿನಿಂದ ಬೇಸತ್ತಿರುವ ಜನರು ಪಟ್ಟಣ ಪಂಚಾಯಿತಿ ಆವರಣದಲ್ಲಿನ ಟಿ.ಸುಬ್ರಹ್ಮಣ್ಯಂ ಗಂಗಾಜಲ ಘಟಕ, ಹೊರಪೇಟೆಯ ಖಜಾನ ಶುದ್ಧ ನೀರಿನ ಘಟಕ ಹಾಗೂ ಹಾವಾಳ, ಮುನಿಯೂರು ಶುದ್ದ ನೀರಿನ ಘಟಕಗಳ ಮುಂದೆ ಪಟ್ಟಣದ ನಿವಾಸಿಗಳು ಶುದ್ದ ಕುಡಿಯುವ ನೀರು ಪಡೆಯಲು ಬೆಳಿಗ್ಗೆ 4 ರಿಂದ ರಾತ್ರಿ 11ರವರೆಗೂ ಜನರು ನೀರನ್ನು ತೆಗೆದುಕೊಳ್ಳಲು ಕ್ಯೂ ನಿಲ್ಲುವಂತಾಗಿದೆ.

ಪಟ್ಟಣದಲ್ಲಿರುವ ಮಲ್ಲಾಘಟ್ಟ ಕೆರೆಯಲ್ಲಿ ನೀರಿನ ಮಟ್ಟ ಕುಸಿತದಿಂದ ನೀರಿನ ಬಣ್ಣ ಬದಲಾಗಿ ವಾಸನೆಯುಕ್ತವಾಗಿದ್ದು ನಾಗರೀಕರಿಂದ ದೂರು ಬಂದ ಹಿನ್ನಲೆಯಲ್ಲಿ ಮಲ್ಲಾಘಟ್ಟ ಕೆರೆ ನೀರನ್ನು ಸಂಪೂರ್ಣ ನಿಲ್ಲಿಸಲಾಗಿದ್ದು. ಪಟ್ಟಣದಲ್ಲಿರುವ 16 ಬೋರ್ ವೆಲ್‍ಗಳಿಂದ ಬೆಳಿಗ್ಗೆ- ಸಂಜೆ ನೆಲ್ಲಿಗಳು ಹಾಗು ಮಿನಿ ಟ್ಯಾಂಕ್‍ಗಳ ಮೂಲಕ ಪೂರೈಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಶಿವಶಂಕರ್ ತಿಳಿಸಿದ್ದಾರೆ.

ಪಟ್ಟಣದಲ್ಲಿರುವ ಮಲ್ಲಾಘಟ್ಟ ಕೆರೆಯಲ್ಲಿ ನೀರು ಖಾಲಿಯಾಗಿ ಪಟ್ಟಣಕ್ಕೆ ನೀರನ್ನು ನಿಲ್ಲಿಸಲಾಗಿದ್ದು ಬೋರ್ ವೆಲ್ ಗಳಿಂದ ಶುದ್ದ ನೀರನ್ನು ಸರಬರಾಜು ಮಾಡುತ್ತಿದ್ದು ಸಾರ್ವಜನಿಕರು ತಮ್ಮ ಮನೆಯಲ್ಲಿರುವ ನೀರಿನ ತೊಟ್ಟಿ, ಸಂಪುಗಳಲ್ಲಿ ಈ ಹಿಂದೆ ಶೇಖರಣೆಯಾಗಿದ್ದ ಕಲ್ಮಷಯುಕ್ತ ಮಲ್ಲಾಘಟ್ಟ ಕೆರೆ ನೀರನ್ನು ಪೂರಾ ಖಾಲಿಮಾಡಿ ತೊಟ್ಟಿಗಳನ್ನು ತೊಳೆದುಕೊಂಡು ಬೋರ್‍ವೆಲ್ ನೀರನ್ನು ತುಂಬಿಸಿಕೊಂಡು ಉಪಯೋಗಿಸಬೇಕಾಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ದೇವರಾಜು ಮನವಿ ಮಾಡಿದ್ದಾರೆ. ಅಂತೂ ಇಂತೂ ಪ.ಪಂ. ಅಧ್ಯಕ್ಷರು, ಸದಸ್ಯರುಗಳು ಹಾಗು ಮುಖ್ಯಾಧಿಕಾರಿಗಳು ಪಟ್ಟಣಕ್ಕೆ ನೀರೊದಗಿಸಲು ಹರಸಾಹಸ ಪಡುತ್ತಿದ್ದು ಯಾವಾಗ ಮಳೆರಾಯನ ಕೃಪೆಯಾದೀತೊ ಎಂದು ಕ್ಷಣಗಣನೆಯಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin