ಬರ ನಿರ್ವಹಣೆ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ : ಸಚಿವ ಎ.ಮಂಜು

ಈ ಸುದ್ದಿಯನ್ನು ಶೇರ್ ಮಾಡಿ

manju

ಹಾಸನ, ಮಾ.4- ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮುಂದುವರೆದಿದ್ದು, ಲಭ್ಯವಿರುವ ಅನುದಾನ ಬಳಸಿ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.ಜಿಪಂ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹಣ ಸಾಕಷ್ಟಿದೆ. ಅದನ್ನು ಬಳಸದೆ ನಿರ್ಲಕ್ಷ್ಯ ಧೋರಣೆ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.90 ದಿನಗಳ ನಂತರವೂ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡುತ್ತಿರುವ ಗ್ರಾಮಗಳ ವೆಚ್ಚದ ಬಿಲ್ಲನ್ನು ಕೂಡಲೇ ಸ್ಥಳೀಯ ಲೆಕ್ಕ ಪರಿಶೋಧಕರಿಂದ ಆಡಿಟ್ ಮಾಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ ಇವುಗಳ ಬಿಲ್ ಪಾವತಿ ಮಾಡಿಸಿ ಎಂದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಅರಸೀಕೆರೆ ತಾಲೂಕಿನಲ್ಲಿ ತೆರೆದಿದ್ದ ಗೋಶಾಲೆಗಳನ್ನು ರೋಗದ ಕಾರಣದಿಂದ ಮುಚ್ಚಲಾಗಿದೆ. ಮೇವು ಬ್ಯಾಂಕ್ ತೆರೆದಿಲ್ಲ. ವಿಶೇಷವಾಗಿ ಅರಸೀಕೆರೆ ತಾಲೂಕಿನಲ್ಲಿ ಬರ ಹೆಚ್ಚಾಗಿದ್ದು, ಇತರೆ ಕನಿಷ್ಟ 50 ಟನ್ ಮೇವನ್ನು ಶೀಘ್ರ ಸಂಗ್ರಹಿಸಿ ಮೇವು ಬ್ಯಾಂಕ್ ತೆರೆಯುವಂತೆ ಒತ್ತಾಯಿಸಿದರು. ಇದಕ್ಕುತ್ತರಿಸಿದ ಸಚಿವರು, ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅರಸೀಕೆರೆ ತಾಲೂಕಿಗೆ ಮೇವಿಗಾಗಿ ಹೆಚ್ಚುವರಿ ಅನುದಾನ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.  ಶಾಸಕರಾದ ಹೆಚ್.ಎಸ್.ಪ್ರಕಾಶ್, ಹೆಚ್.ಕೆ.ಕುಮಾರಸ್ವಾಮಿ ಮತ್ತು ಸಿ.ಎನ್.ಬಾಲಕೃಷ್ಣ ಅವರು ತಮ್ಮ ಕ್ಷೇತ್ರದಲ್ಲಿನ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳನ್ನು ಸಭೆಯ ಮುಂದಿಟ್ಟು ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದರು.ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜು, ಜಿಲ್ಲಾಧಿಕಾರಿ ವಿ.ಚೈತ್ರಾ, ಉಪಾಧ್ಯಕ್ಷ ಶ್ರೀನಿವಾಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin