ಬಲಪಂಥೀಯ ಅಥವಾ ಮಾವೋವಾದಿಗಳಿಂದ ಗೌರಿ ಕೊಲೆ ಶಂಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Gouri-Lankesh

ಬೆಂಗಳೂರು, ಸೆ.8- ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ.ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸಂಘಟನೆಗಳ ಕೃತ್ಯ ಇಲ್ಲವೇ ಕರ್ನಾಟಕದ ಮಾವೋವಾದಿ ಚಳವಳಿಯ ಹಿನ್ನೆಲೆಯಿಂದ ಬಂದ ಸಂಘಟನೆಗಳ ಕೃತ್ಯ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಬಲಪಂಥೀಯ ಸಂಘಟನೆಗಳಿಂದ ಈಗಾಗಲೇ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂತಾಪ ಅಧಿಕೃತವಾಗಿ ವ್ಯಕ್ತವಾಗಿದೆ. ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಥವಾ ಜನಪ್ರಿಯ ಭಾಷೆಯಲ್ಲಿ ಸಂಘ, ತೀವ್ರ ಸಂತಾಪ ವ್ಯಕ್ತಪಡಿಸಿ ಪ್ರಕಟಣೆ ನೀಡಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೂಡ ಸಂತಾಪ ಸೂಚಕ ಪ್ರಕಟಣೆ ನೀಡಿದೆ. ಇನ್ನು, ಸನಾತನ ಸಂಸ್ಥೆಗಳಂತಹ ಆರ್‍ಎಸ್‍ಎಸ್ ಚೌಕಟ್ಟಿನಿಂದ ಹೊರಗಿರುವ ಹಿಂದುತ್ವದ ಪ್ರತಿಪಾದಕ ಸಂಘಟನೆಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ.

ನಕ್ಸಲೀಯರ ಕೈವಾಡ ?

ಕರ್ನಾಟಕದಲ್ಲಿ ಗೌರಿ ಅವರನ್ನು ಹತ್ಯೆ ಮಾಡುವ ಉದ್ದೇಶ ಇದೆ ಎಂಬ ಆರೋಪಕ್ಕೆ ಗುರಿಯಾಗಿರುವವರಲ್ಲಿ ನಕ್ಸಲೀಯರಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪಕ್ಷದ ಕೃತ್ಯ ಇದು ಎಂದು ಕೆಲವು ವರದಿಗಳು ಹೇಳುತ್ತಿದೆ.

ಒಡಕಿನ ಕಾರಣಗಳು:

ಗೌರಿ ಲಂಕೇಶ್ ಹತ್ಯೆಗೆ ಕರ್ನಾಟಕದಲ್ಲಿ 2006ರಲ್ಲಿ ನಕ್ಸಲ್ ಚಳುವಳಿಯಲ್ಲಿ ಮೂಡಿದ ಒಡಕು ಕಾರಣ ಎಂದು ಸುದ್ದಿ ಬರುತ್ತಿದೆ. ರಾಜಕೀಯ ಸಂಘಟನೆಗಳಲ್ಲಿ, ಪಕ್ಷಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಒಡಕು ಬರುವುದು ಹೊಸತೇನಲ್ಲ. ಅದರಲ್ಲೂ ಕಮ್ಯುನಿಸ್ಟ್ ಚಳವಳಿಯಲ್ಲಿ ಅಂತಹದ್ದೇ ಒಂದು ಪರಂಪರೆ ಇದೆ. ಕರ್ನಾಟಕದಲ್ಲಿಯೂ ನಕ್ಸಲ್ ಚಳವಳಿ ಒಡೆದು ಹೋಯಿತು ಎನ್ನುತ್ತಾರೆ ದೇವೇಂದ್ರಪ್ಪ. ನಕ್ಸಲ್ ಚಳವಳಿ ಒಡೆದ ನಂತರ ಗೌರಿ ಸರಕಾರದ ಪ್ಯಾಕೇಜ್ ಸಂಸ್ಕೃತಿಯನ್ನು ಬೆಂಬಲಿಸಿದರು ಎಂಬುದು ಅವರ ಮೇಲಿರುವ ಆರೋಪ. 2006ರಲ್ಲಿ ಮಲೆನಾಡಿನ ಕಾಡೊಳಗೆ ನಡೆದ ಸಿಪಿಐ(ಮಾವೋವಾದಿ) ಪಕ್ಷದ ವಾರ್ಷಿಕ ಸಭೆಯೊಂದರಲ್ಲಿ ಪಕ್ಷ ಎರಡು ಹೋಳಾಗುವ ತೀರ್ಮಾನಕ್ಕೆ ಬರಲಾಗುತ್ತಿತ್ತು ಎಂದು ಅಂದಿನ ವರದಿಗಳು ಹೇಳುತ್ತವೆ. ಈ ಸಮಯದಲ್ಲಿ ಒಂದಷ್ಟು ಜನ ಶಸಸ್ತ್ರ ಹೋರಾಟಕ್ಕೆ ಇದು ಸಕಾಲ ಅಲ್ಲ. ಪ್ರಜಾತಾಂತ್ರಿಕ ನೆಲೆಯಲ್ಲಿ ಜನರ ಹೋರಾಟಗಳನ್ನು ಸಂಘಟಿಸಬೇಕು ಎಂದು ಹೊರಗೆ ಬಂದರು. ಮತ್ತು, `ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷ( ಆರ್‍ಸಿಪಿ)ಯನ್ನು ರಚಿಸಿಕೊಂಡರು.

ಹೀಗೆ, ಶಸಸ್ತ್ರ ಹೋರಾಟದಿಂದ ದೂರವಾಗಿ ಒಂದಷ್ಟು ಕಾಲ ಭೂಗತರಾಗಿಯೇ ಇದ್ದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ನಂತರ ಗೌರಿ ಲಂಕೇಶ್ ಮತ್ತು ಸಂಗಾತಿಗಳ ಪ್ರಯತ್ನದಿಂದ ಮುಖ್ಯವಾಹಿನಿಗೆ ಮರಳಿದರು. ಅವರ ವಲಯದಲ್ಲಿ ರಕ್ತ ಪಾತದ ಸಂಘರ್ಷವನ್ನು ಕೊನೆಗಾಣಿಸಿದ ಹಿನ್ನೆಲೆಯಲ್ಲಿ ಗೌರಿ ಬಗ್ಗೆ ಅಪಾರ ಅಭಿಮಾನ ಇದೆ. ಅವರೂ ಈಗ ಗೌರಿ ಲಂಕೇಶ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವವರ ಸಾಲಿನಲ್ಲಿ ಮುಂದಿದ್ದರು.

Facebook Comments

Sri Raghav

Admin