ಬಲಾಬಲ ಸಾಬೀತುಪಡಿಸಲು ಶಶಿಕಲಾ-ಪನ್ನೀರ್ ಸೆಲ್ವಂ ಬಣಗಳು ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Sasikala-vs-Selvam

ಚೆನ್ನೈ, ಫೆ.13– ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೇರಲೇಬೇಕೆಂಬ ಹಠಕ್ಕೆ ಬಿದ್ದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ನಟರಾಜನ್ ಮತ್ತು ಉಸ್ತುವಾರಿ ಸಿಎಂ ಪನ್ನೀರ್ ಸೆಲ್ವಂ ನಡುವೆ ರಾಜಕೀಯ ಘರ್ಷಣೆ ತಾರಕ್ಕೇರಿದ್ದು ಬಲಾಬಲ ಸಾಮರ್ಥ್ಯ ಸಾಬೀತುಪಡಿಸಲು ಸಜ್ಜಾಗಿದ್ದಾರೆ. ಸೆಲ್ವಂ ಇದು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ಮುಂದಿನ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.   ರಾಜ್ಯ ರಾಜಕಾರಣವು ಇದೀಗ ಉಭಯ ಬಣಗಳ ನಡುವೆ ಅಕ್ಷರಶಃ ರಣರಂಗವಾಗಿದ್ದು, ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಇದೇ ವೇಳೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಶಶಿಕಲಾ ಮತ್ತು ಸೆಲ್ವಂ ಮುಂದಿನ ಕಾರ್ಯತಂತ್ರಗಳ ಬಗ್ಗೆ ನಿರ್ಣಾಯಕ ನಿರ್ಧಾರ ಕುರಿತು ಸಮಾಲೋಚನೆ ನಡೆಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ಬಹುಮತ ಸಾಬೀತು ಮಾಡುವುದಾಗಿ ಸೆಲ್ವಂ ಈಗಾಗಲೇ ಘೋಷಿಸಿದ್ದು, ತಮಗೆ 100ಕ್ಕೂ ಹೆಚ್ಚು ಶಾಸಕರ ಬೆಂಬಲವಿದ್ದು ಇನ್ನೂ ಕೆಲವರು ತಮ್ಮ ಬಣಕ್ಕೆ ನಿಷ್ಠರಾಗಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.   ಇಂದು ಬೆಳಗ್ಗೆ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಶಿಕಲಾ ಮೊಸಳೆ ಕಣ್ಣೀರು ಹಾಕುತ್ತಾ ತಮಿಳುನಾಡಿನ ಜನರನ್ನು ಮರಳು ಮಾಡಲು ಯತ್ನಿಸುತ್ತಿದ್ದಾರೆ. ಅಕ್ರಮ ಬಂಧನದಲ್ಲಿಟ್ಟಿರುವ ಶಾಸಕರನ್ನು ಬಿಡುಗಡೆಗೊಳಿಸಿದರೆ ಆವರ ನಿಜವಾದ ಬಣ್ಣ ಬಯಲಾಗುತ್ತದೆ. ಆ ಬಣದಲ್ಲಿರುವ ಕೆಲವು ತಮಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸದಿಂದ ನುಡಿದಿದ್ದಾರೆ.

ಸೆಲ್ವಂ ಪರ ಸೆವೆನ್ ಸುಮರಾಯ್ :

ಶಶಿಕಲಾ ವಿರುದ್ಧ ರಾಜಕೀಯ ಸಮರದಲ್ಲಿ ಹೋರಾಡಲು ಎಐಎಡಿಎಂಕೆಯ ಏಳು ಮುಂಚೂಣಿ ನಾಯಕರು ಸಾಥ್ ನೀಡಿರುವುದು ಸೆಲ್ವಂಗೆ ನೂರು ಆನೆಗಳ ಬಲ ಬಂದಂತಾಗಿದೆ. ರಾಜ್ಯಸಭಾ ಸದಸ್ಯ ವಿ. ಮೈತ್ರೇಯನ್, ಮಾಜಿ ಸಚಿವ ಕೆ.ಪಿ. ಮುನಿಸ್ವಾಮಿ, ಪ್ರಭಾವಿ ಉದ್ಯಮಿ-ರಾಜಕಾರಣಿ ಕೆ. ಪಾಂಡಿಯರಾಜನ್, ಜಯಲಲಿತಾರ ಫೈವ್ ಮ್ಯಾನ್ ಬಣದಲ್ಲಿದ್ದ ನಾಥಮ್ ಆರ್. ವಿಶ್ವನಾಥಮ್, ಪಕ್ಷದ ಸಹ ಸಂಸ್ಥಾಪಕ ಪಿ.ಎಚ್. ಪಾಂಡಿಯನ್, ಪಕ್ಷದ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಇ. ಮಧುಸೂದನನ್ ಹಾಗೂ ಮಾಜಿ ಸಚಿವ ಪೊನ್ನಯ್ಯನ್… ಈ ಸಪ್ತ ನಾಯಕರು ಚಿನ್ನಮ್ಮ ವಿರುದ್ಧ ತಿರುಗಿಬಿದ್ದಿದ್ದಾರೆ. ಶಶಿಕಲಾ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುವಂತೆ ಇವರು ಒಂದೊಂದು ಜವಾಬ್ದಾರಿಗಳನ್ನು ಹೊತ್ತುಕೊಂಡು ಆ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಿದ್ದಾರೆ.

ಸಭೆಗಳಲ್ಲಿ ಚರ್ಚೆ-ಸಮಾಲೋಚನೆ:

ಸೆಲ್ವಂ ಬಣ ವೃದ್ಧಿಯಾಗುತ್ತಿರುವುದರಿಂದ ಕಂಗೆಟ್ಟಿರುವ ಶಶಿಕಲಾ, ಚೆನ್ನೈಯ ಪೋಯೆಸ್ ಗಾರ್ಡನ್‍ನಲ್ಲಿರುವ ತಮ್ಮ ನಿವಾಸ ವೇದಂ ನಿಲಯಂನಲ್ಲಿ ಇಂದು ತಮ್ಮ ಬಣದ ಮುಖಂಡರ ಮಹತ್ವದ ಸಭೆ ಕರೆದು ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಿದರು.   ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ತಾವು ನೀಡಿದ್ದ ಗಡುವಿಗೆ ಗರ್ಜಿಸಿರುವ ರಾಜ್ಯಪಾಲರ ಮನವೊಲಿಕೆ, ಸೆಲ್ವಂ ಕ್ಯಾಂಪ್‍ಗೆ ಜಿಗಿಯುತ್ತಿರುವ ಶಾಸಕರು ಮತ್ತು ಮುಖಂಡರಿಗೆ ಕಡಿವಾಣ ಹಾಕುವುದು ಸೇರಿದಂತೆ ಮಹತ್ವದ ವಿಚಾರಗಳ ಕುರಿತು ಚಿನ್ನಮ್ಮ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ ತಕ್ಕಡಿ ತಮ್ಮ ಪರ ವಾಲಿರುವುದರಿಂದ ನವೋತ್ಸಾಹದಲ್ಲಿರುವ ಸೆಲ್ವಂ ಇಂದು ತಮ್ಮ ಆಪ್ತರೊಂದಿಗೆ ಸಭೆ ನಡೆಸಿ ಸರ್ಕಾರ ರಚನೆಗೆ ಸಾಧ್ಯವಾಗುವ ಎಲ್ಲ ಮಾರ್ಗೋಪಾಯಗಳ ಕುರಿತು ಗಹನ ಚರ್ಚೆ ನಡೆಸಿದರು.   ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸಾಲ್ಟಿನ್ ಇಂದು ರಾತ್ರಿ ಪಕ್ಷದ ಮಹತ್ವದ ಸಭೆ ಕರೆದಿದ್ದಾರೆ. ತಮಿಳುನಾಡು ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಈ ಸಭೆಯ ಉದ್ದೇಶವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin