ಬಳ್ಳಾರಿ ಜೈಲಿನಿಂದ 129 ಮಹದಾಯಿ ಹೋರಾಟಗಾರರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Bellary-Jail-a

ಬಳ್ಳಾರಿ, ಆ.13- ಇಲ್ಲಿನ ಕೇಂದ್ರ ಕಾರಾಗೃಹ 129 ಮಹದಾಯಿ ಹೋರಾಟಗಾರರನ್ನು ಬಿಡುಗಡೆ ಮಾಡಲಾಯಿತು. ನಿನ್ನೆ ಜಾಮೀನು ಪಡೆದಿದ್ದ ಈ ಹೋರಾಟಗಾರರನ್ನು ಇಂದು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಜೈಲಿನ ಮುಂದೆ ಜಮಾಯಿಸಿದ್ದ ಸಂಬಂಧಿಕರು, ರೈತ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.  ಬಳ್ಳಾರಿ ಜೈಲಿನಲ್ಲಿ 130 ಜನ ಹೋರಾಟಗಾರರನ್ನು ಕಳೆದ 10 ದಿನಗಳಿಂದ ಇಡಲಾಗಿತ್ತು. ಇದರಲ್ಲಿ ತಾಂತ್ರಿಕ ಕಾರಣದಿಂದ ಇಬ್ರಾಹಿಂ ಸಾಬ್ ಎಂಬ ಒಬ್ಬರಿಗೆ ಜಾಮೀನು ದೊರೆಯದ ಕಾರಣ ಅವರನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಉಳಿದಂತೆ ಎಲ್ಲರನ್ನೂ ಬಂಧಮುಕ್ತಗೊಳಿಸಲಾಯಿತು.

ಬಿಡುಗಡೆಗೊಂಡ ಎಲ್ಲ 129 ರೈತರು ಹಾಗೂ ಸಂಘಟನೆಗಳ ಮುಖಂಡರನ್ನು ಅವರ ಸ್ವಗ್ರಾಮಗಳಿಗೆ ತೆರಳಲು ರೈತ ಸಂಘದವರು ಎರಡು ಬಸ್‍ಗಳ ವ್ಯವಸ್ಥೆ ಮಾಡಿದ್ದರು. ಈ ಬಸ್‍ಗಳ ಮೂಲಕ ಎಲ್ಲ ಬಂಧಮುಕ್ತ ಹೋರಾಟಗಾರರು ನವಲಗುಂದ ತಾಲೂಕಿನ ತಮ್ಮ ಗ್ರಾಮಗಳಿಗೆ ತೆರಳಿದರು.  ಇಂದು ಜೈಲಿನಲ್ಲಿ ಎಲ್ಲ ಬಂಧಿತ ಹೋರಾಟಗಾರರ ವೈದ್ಯಕೀಯ ತಪಾಸಣೆ ಮುಗಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಹೋರಾಟಗಾರರ ಮುಖಂಡರಾದ ಲೋಕನಾಥ್ ಹೆಬಸೂರ್ ಈ ಸಂದರ್ಭದಲ್ಲಿ ಮಾತನಾಡಿ, ಬಂಧನದಿಂದ ಸರ್ಕಾರ ನಮ್ಮನ್ನು ಬಂಧಿಸಿರುವುದರಿಂದ ನಾವು ಬೆದರುವುದಿಲ್ಲ. ನಮಗೆ ಮಹದಾಯಿ ಯೋಜನೆ ಅನುಷ್ಠಾನ ಮುಖ್ಯ. ವಿಳಂಬ ಮತ್ತು ತಾರತಮ್ಯ ಮಾಡದಂತೆ ಯೋಜನೆಯನ್ನು ಅನುಷ್ಠಾನ ಮಾಡಬೇಕೆಂದು ಅವರು ಹೇಳಿದರು.
ಜೈಲಿನಿಂದ ಬಿಡುಗಡೆಯಾಗಿರುವುದು ನಮಗೆ ನಿರಾಸೆಯಾಗಿದೆ. ನಾವು ಬಂಧನದಲ್ಲಿಯೇ ಇರಲು ಬಯಸಿದ್ದೆವು. ಈ ಮೂಲಕವಾದರೂ ಸಮಸ್ಯೆ ಬಗೆಹರಿಯುತ್ತದೆ ಅಂದುಕೊಂಡಿದ್ದೆವು. ಆದರೆ, ನಮ್ಮ ಜತೆ ಬಹಳ ಜನ ಅಮಾಯಕರಿದ್ದರು. ಅವರ ಬಿಡುಗಡೆ ಆಗಬೇಕಿತ್ತು. ನನ್ನ ಕುಟುಂಬವನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದ ನನ್ನ ಮಗನನ್ನು ಬಂಧಿಸಿದರು. ನನ್ನ ಮಗನ ಬಂಧನದಿಂದ ನನಗೇನೂ ಬೇಜಾರಿಲ್ಲ. ಈಗಲ್ಲದಿದ್ದರೆ ಇನ್ನೊಮ್ಮೆ ಅವನು ಪರೀಕ್ಷೆ ಬರೆಯಬಹುದು ಎಂದು ತಿಳಿಸಿದರು.

ಧಾರವಾಡ ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಮಾತನಾಡಿ, ಬಂಧಿತರ ರೈತರಿಗೆ ಜಾಮೀನು ಸಿಕ್ಕಿದೆ. ಷರತ್ತು ವಿಧಿಸುವುದು ನ್ಯಾಯಾಲಯದ ಸಹಜ ಪ್ರಕ್ರಿಯೆ. ಷರತ್ತುಗಳ ವಿರುದ್ಧ ರೈತರು ಅನಿಸಿಕೆ ವ್ಯಕ್ತಪಡಿಸುವುದು ಸರಿಯಲ್ಲ. ಹಾಗೆ ಮಾಡಿದರೆ ಜಾಮೀನು ರದ್ದಾಗುವ ಸಾಧ್ಯತೆಯಿರುತ್ತದೆ. ರೈತರು ಜನಾಂಗೀಯ ಪ್ರಕ್ರಿಯೆಗೆ ಸಂಬಂಧಿಸಿ ವ್ಯತಿರಿಕ್ತ ಹೇಳಿಕೆ ನೀಡಬಾರದು ಎಂದು ಸಲಹೆ ಮಾಡಿದರು. ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡ ಬಳಿಕ ಕನಕದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಸ್ ಮೂಲಕ ಊರಿಗೆ ತೆರಳಿದರು.  ಬಳ್ಳಾರಿ ಜೈಲು ಈ 10-12 ದಿನಗಳ ಕಾಲ ಒಂದು ರೀತಿಯಲ್ಲಿ ಸಾಂತ್ವನದ ಕೇಂದ್ರವಾದಂತೆ ಆಗಿತ್ತು.

Facebook Comments

Sri Raghav

Admin