ಬಸವಕಲ್ಯಾಣ ಬಳಿ ಕಾರಿಗೆ ಅತಿವೇಗವಾಗಿ ಬಂದ ಲಾರಿ ಡಿಕ್ಕಿ : ಐವರು ದುರ್ಮರಣ
ಬೀದರ್, ಮೇ 13- ಮುಂಬೈನಿಂದ ಹೈದರಾಬಾದ್ಗೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಅತಿವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಮಹಾರಾಷ್ಟ್ರದ ನಯಿಮುಂಬೈ ಮೂಲದವರಾದ ಮಯೂರಾ ಚಾವ್ಲಾ(31), ಜೀನಲ್ ಚಾವ್ಲಾ(34), ಭಾರತಿ ಚಾವ್ಲಾ(45), ಖಯಾಂ ಚಾವ್ಲಾ, ಸುನಿಲ್(48) ಮೃತ ದುರ್ದೈವಿಗಳು.
ನಿನ್ನೆ ಹೈದರಾಬಾದ್ಗೆ ತೆರಳಲು ಒಂದೇ ಕುಟುಂಬದ ಐದು ಮಂದಿ ಎರಡು ವರ್ಷದ ಮಗುವಿನೊಂದಿಗೆ ಮುಂಬೈನಿಂದ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 9ರ ಬಸವ ಕಲ್ಯಾಣದ ಬಳಿ ಬರುತ್ತಿದ್ದಂತೆ ಸಸ್ತಾಪುರದ ಬಂಗ್ಲೆ ಸಮೀಪ ಎದುರಿಗೆ ಯಮನಂತೆ ಬಂದ ಲಾರಿ ಕಾರಿಗೆ ಅಪ್ಪಳಿಸಿದ ಪರಿಣಾಮ ಐದು ಮಂದಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎರಡು ವರ್ಷದ ಮಗುವೊಂದು ಗಂಭೀರವಾಗಿ ಗಾಯಗೊಂಡು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಎರಡು ವರ್ಷದ ತ್ರಿಶಾ ಎಂಬ ಮಗುವನ್ನು ಹೈದರಾಬಾದ್ನ ಅಪಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ತದನಂತರ ಶವಗಳನ್ನು ಹೊರ ತೆಗೆದು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಪ್ರಕಾಶ್ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವ ಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS