ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 52 ಲಕ್ಷ ರೂ. ವಶ
ದೇವನಹಳ್ಳಿ,ಏ.19- ಹೈದರಾಬಾದ್ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬಸ್ನಲ್ಲಿ ಸಾಗಿಸುತ್ತಿದ್ದ 52.53 ಲಕ್ಷ ರೂ. ಹಣವನ್ನು ಚೆಕ್ಪೋಸ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಪಿಎನ್ ಟ್ರಾವೆಲ್ಸ್ಗೆ ಸೇರಿದ ಬಸ್ ಹೈದರಾಬಾದ್ನಿಂದ ರಾತ್ರಿ ಬೆಂಗಳೂರು ಕಡೆಗೆ ಬರುತ್ತಿದ್ದಾಗ ದೇವನಹಳ್ಳಿಯ
ರಾಣಿ ಸರ್ಕಲ್ ಬಳಿ ನಿರ್ಮಿಸಲಾಗಿರುವ ಚುನಾವಣಾ ಚೆಕ್ ಪೋಸ್ಟ್ ಬಳಿ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು ಬಸ್ನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಎರಡು ಬ್ಯಾಗ್ಗಳಲ್ಲಿದ್ದ 52.53 ಲಕ್ಷ ರೂ.ಗಳು ಪತ್ತೆಯಾಗಿದೆ. ತಕ್ಷಣ ಅಧಿಕಾರಿಗಳು ಈ ವಿಷಯವನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಹಾಗೂ ಜಿಲ್ಲಾಧಿಕಾರಿ ಪಾಲಯ್ಯ ಅವರಿಗೆ ತಿಳಿಸಿದ್ದಾರೆ. ಬಸ್ನಲ್ಲಿ ಸಾಗಿಸುತ್ತಿದ್ದ 52.53 ಲಕ್ಷ ರೂ. ಹಣಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಈ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಎಸ್ಪಿ ಹಾಗೂ ಡಿಸಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಈ ಹಣ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಹಾಗೂ ಯಾರಿಗೆ ಸೇರಿದ್ದು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಹಣದ ಬಗ್ಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಐಟಿ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಮೊನ್ನೆ ಸಂಜೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಬಳಿ ಕಾರೊಂದರಲ್ಲಿ 10 ಲಕ್ಷ ಪತ್ತೆಯಾಗಿತ್ತು.