ಬಸ್ ನಿಲ್ದಾಣದಲ್ಲಿ ಜನರಿಗೆ ಸೌಲಭ್ಯ ಕಲ್ಪಿಸಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

m--manju

ಹಾಸನ, ಆ.10- ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರು ನಗರದ ಹೊಸ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಆಟೋ ಚಾಲಕರ ಕುಂದು ಕೊರತೆ ಆಲಿಸಿದ ಸಚಿವರು ಚಾಲಕರಿಗೆ ಹಾಗು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣದ ಪಕ್ಕದ ಮೋರಿಯ ಮೇಲೆ ಸ್ಲ್ಯಾಬ್ ಹಾಕಿ ಮುಚ್ಚಿ ವ್ಯವಸ್ಥಿತ ಆಟೋ ನಿಲ್ದಾಣ ಮಾಡಿಕೊಡುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಬಸ್ ನಿಲ್ದಾಣದ ಪಕ್ಕದಲ್ಲಿ ಹಾದುಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರಯೋಗ್ಯವನ್ನಾಗಿ ಮಾಡಿಕೊಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನಗರದ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟ್ರ್ಯಾಲಿ ವ್ಯವಸ್ಥೆ ಮಾಡಿ ವಯೋವೃದ್ಧರು ಮತ್ತು ಮಹಿಳೆಯರನ್ನು ಬಸ್ ನಿಲ್ದಾಣದ ಹೊರಗೆ ಇಳಿಸಲು ಅವಕಾಶವಾಗುವಂತೆ ಆಟೋ ಮತ್ತು ಕಾರು ಅತರೋ ವಾಹನಗಳಿಗೆ ದಾರಿ ಮಾಡಿಕೊಡಬೇಕು ಎಂದು ಸಚಿವರು ತಿಳಿಸಿದರು.
ಪಾರ್ಕಿಂಗ್ ಯಾರ್ಡ್‍ನಲ್ಲಿ ಸೂಚನಾ ಫಲಕದಲ್ಲಿ ಪ್ರದರ್ಶಿಸಿರುವಷ್ಠೆ ದರವನ್ನು ವಾಹನಗಳಿಂದ ಪಡೆದುಕೊಳ್ಳಬೇಕು. ಪ್ರಯಾಣಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯ ಕಲ್ಪಿಸಿ ಬಸ್ ನಿಲ್ದಾಣದ ಹೊರ ಮತ್ತು ಒಳ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಾಶ್ ಬಾಬು, ಡಿ.ಎಮ್.ಬ್ರಹ್ಮದೇವ್, ಎ.ಡಿ.ಎಂ.ಲೋಕೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin