ಬಸ್ ನಿಲ್ದಾಣದ ಅವ್ಯವಸ್ಥೆ ನೋಡಿ ಕಿಡಿಕಾರಿದ ಸಿಪಿವೈ

ಈ ಸುದ್ದಿಯನ್ನು ಶೇರ್ ಮಾಡಿ

yogeshwar

ಚನ್ನಪಟ್ಟಣ, ಅ.25- ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಸಿ.ಪಿ.ಯೋಗೇಶ್ವರ್ ಶೌಚಾಲಯ ತ್ಯಾಜ್ಯ ಶೇಖರಣೆ ಸ್ಥಳದ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.ನಿಲ್ದಾಣದಲ್ಲಿ ಅಳವಡಿಸಿರುವ ಕಳಪೆ ಮಟ್ಟದ ಸೋಲಾರ್ ವ್ಯವಸ್ಥೆ, ಸಂಚಾರಿ ನಿಯಂತ್ರಣ ಕೊಠಡಿ ದುರಾವಸ್ಥೆ ಹಾಗೂ ಅಶುಚಿತ್ವದ ಬಗ್ಗೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈ ಬಸ್ ನಿಲ್ದಾಣಕ್ಕೆ ದಿನನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುತ್ತಾರೆ. ಕುಡಿಯುವ ನೀರಿಗಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಇದ್ದು, ಕೂಡಲೇ ಸೂಕ್ತ ಜಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ಶಾಸಕರು ಹೇಳಿದರು.

ಬಸ್ ನಿಲ್ದಾಣದ ಶೌಚಾಲಯದ ಗುಂಡಿ ಹೊರತೆಗೆದಿರುವ ತ್ಯಾಜ್ಯದಿಂದ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು, ಕಳೆದ 12 ವರ್ಷಗಳಿಂದ ಬಣ್ಣವನ್ನೇ ಕಾಣದ ನಿಲ್ದಾಣದ ಕಟ್ಟಕ್ಕೆ ಬಣ್ಣ ಬಳಿಸಬೇಕು, ಜತೆಗೆ ಮೂಲಭೂತ ಸೌಕರ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಯೋಗೇಶ್ವರ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ್ ಎಇಇ ಸೋಮಶೇಖರ್, ನಗರಸಭೆ ಅಧ್ಯಕ್ಷ ಅಜ್ಮುನಿಷಾ, ಉಪಾಧ್ಯಕ್ಷ ಸರಳಸೋಮಶೇಖರ್, ತಾಪಂ ಅಧ್ಯಕ್ಷ ಹರೂರು ರಾಜಣ್ಣ, ನಗರಸಭಾ ಸದಸ್ಯರಾದ ಮುದ್ದುಕೃಷ್ಣೇಗೌಡ, ವಿಷಕಂಠಮೂರ್ತಿ, ಮಂಜುನಾಥ್, ಮೂಲು, ಮಳೂರು ಕುಮಾರ್, ನಗರಸಭೆ ಪೌರಾಯುಕ್ತ ಡಾ.ಆನಂದ್ ಚಿ. ಕಲ್ಲೋಳಿಕರ್, ಕಾವೇರಿ ನೀರಾವರಿ ನಿಗಮ ಮಂಡಳಿತ ಎಇಇ ಪ್ರಭುನಾಥಶೆಟ್ಟಿ, ಹಾಪ್‍ಕಾಮ್ಸ್ ಮಾಜಿ ನಿರ್ದೇಶಕ ಅಕ್ಕೂರು ಶೇಖರ್ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin