ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ, ಇನ್ನೇನಿದ್ದರೂ ಮನೆ ಮನೆ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

Congress--01

ಬೆಂಗಳೂರು, ಮೇ 10- ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ. ಸಂಜೆ 6 ಗಂಟೆಯೊಳಗೆ ಅಬ್ಬರದ ಪ್ರಚಾರಕ್ಕೆ ತೆರೆ ಬೀಳಲಿದೆ. ಇನ್ನೇನಿದ್ದರೂ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡಬೇಕು. ಈಗಾಗಲೇ ಅದನ್ನ್ನೂ ಮುಗಿಸಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಬೂತ್‍ಗಳು ಮತ್ತು ಏಜೆಂಟ್‍ಗಳನ್ನು ನೇಮಕ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳು ಕೊನೆಯ ದಿನವಾದ ಇಂದೂ ಕೂಡ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಅವರ ಕ್ಷೇತ್ರವಾದ ಶಿಕಾರಿಪುರ ಹಾಗೂ ಶ್ರೀರಾಮುಲು ಅವರ ಕ್ಷೇತ್ರವಾದ ಬಾದಾಮಿಯಲ್ಲಿ ಅಬ್ಬರದ ಪ್ರಚಾರ ಮಾಡಿದರು. ಇಲ್ಲಿ ಏರ್ಪಡಿಸಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಈವರೆಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ರಾಜ್ಯದಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ್ದರು. ಇಂದು ಪತ್ರಿಕಾಗೋಷ್ಠಿ ಮುಗಿಸಿ ಬೆಳಗ್ಗೆ ನವದೆಹಲಿಗೆ ತೆರಳಬೇಕಾಗಿತ್ತು. ಆದರೆ, ಪ್ರಚಾರದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಮಾಡಳ್ಳಿ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಅಲ್ಲಿಂದ ಹುಬ್ಬಳ್ಳಿಯ ಮೂಲಕ ನವದೆಹಲಿಗೆ ತೆರಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂದು ಸಂಜೆ 6 ಗಂಟೆಯವರೆಗೆ ಬಿರುಸಿನ ಪ್ರಚಾರ ನಡೆಸಿದರು. ಬಿಜೆಪಿ ಪರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌವ್ಹಾಣ್, ಛತ್ತೀಸ್‍ಗಡ ಮುಖ್ಯಮಂತ್ರಿ ರಮಣ್‍ಸಿಂಗ್ ಅವರು ಪ್ರಚಾರ ನಡೆಸಿದರು. ಅಲ್ಲದೆ, 20ಕ್ಕೂ ಹೆಚ್ಚು ಕೇಂದ್ರ ಸಚಿವರು ರಾಜ್ಯದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಪರ ಕೊನೆಕ್ಷಣದ ಪ್ರಚಾರ ನಡೆಸಿದರು. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಅಂತಿಮ ಹಂತದ ಪ್ರಚಾರ ಮಾಡಿದರು. ಮತದಾರರ ಮನವೊಲಿಸಲು ವಿವಿಧ ಕಸರತ್ತುಗಳನ್ನು ನಡೆಸಿದರು.

Facebook Comments

Sri Raghav

Admin