ಬಹುದಿನಗಳ ಕನಸು ನನಸು : ಹಾಸನ-ಬೆಂಗಳೂರು ರೈಲು ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Hasan---01

ಬೆಂಗಳೂರು, ಮಾ.26- ಬಹು ನಿರೀಕ್ಷಿತ ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಆರಂಭಗೊಂಡಿದೆ. ಈ ಸಂಚಾರದಿಂದ ಕುಣಿಗಲ್, ಯಡಿಯೂರು, ಶ್ರವಣಬೆಳಗೊಳದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಪೂರ್ಣಗೊಳಿಸಲು ಜನರು ಒತ್ತಡ ತರುತ್ತಿದ್ದರು. ಹೀಗಾಗಿ ಬಹುದಿನಗಳ ಕನಸಾಗಿದ್ದ ಬೆಂಗಳೂರು-ಹಾಸನ ನಡುವಿನ ರೈಲು ಸಂಚಾರ ಆರಂಭಗೊಂಡಿದ್ದು, ಯೋಜನೆ ನನಸಾಗಿದೆ.
ಇದೇ ಮೊದಲ ಬಾರಿಗೆ ರೈಲು ಸಂಚಾರ ಆರಂಭವಾಗಿದ್ದರಿಂದ ಜನರು ಖುಷಿ ಪಟ್ಟರು. ಪ್ಯಾಸೆಂಜರ್ ರೈಲಿನಲ್ಲಿ 42ರೂ. ಟಿಕೆಟ್ ದರವಿದೆ. ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣದ ಅವಧಿ 3.50 ನಿಮಿಷವಾದರೆ, ಸೂಪರ್ ಫಾಸ್ಟ್ ರೈಲು 2 ಗಂಟೆ 40 ನಿಮಿಷಗಳಲ್ಲಿ ಹಾಸನಕ್ಕೆ ತಲುಪಲಿದೆ.

ಈ ನೂತನ ರೈಲು ಮಾರ್ಗವು ಬೆಂಗಳೂರು ನಗರದ ಕೈಗಾರಿಕಾ ಪ್ರದೇಶವಾದ ನೆಲಮಂಗಲ, ಕುಣಿಗಲ್, ಪ್ರಸಿದ್ಧ ತೀರ್ಥಕ್ಷೇತ್ರವಾದ ಯಡಿಯೂರು ಮತ್ತು ಜೈನರ ಸುಪ್ರಸಿದ್ಧ ಶ್ರವಣಬೆಳಗೊಳದ ಮೂಲಕ ಹಾಸನಕ್ಕೆ ತಲುಪಲಿದೆ.   ಈ ರೈಲು ಸಂಚಾರ ಆರಂಭವಾಗಿದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದ್ದು, ಪ್ರಯಾಣದ ಅವಧಿ ಬಸ್‍ಗಿಂತ ಕಡಿಮೆ ಇರಲಿದೆ.   1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ತಮ್ಮ ಕನಸಿನ ಯೋಜನೆಗೆ ಅನುಮೋದನೆ ನೀಡಿ 295 ಕೋಟಿ ರೂ. ಅನುದಾನ ನೀಡಿದ್ದರು.

ಅಂದಿನ ರೈಲ್ವೆ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅವರು ಅಂದಿನ ಸಿಎಂ ಜೆ.ಎಚ್.ಪಟೇಲ್ ಅವರೊಂದಿಗೆ ಕಾಮಗಾರಿಕೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಈ ಯೋಜನೆ ಮುಗಿಯಲು ಕೇವಲ ಮೂರು ವರ್ಷ ಸಾಕಾಗಿತ್ತು. ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಈ ಯೋಜನೆಯು ಕುಂಟುತ್ತ ಸಾಗಿತ್ತು.
ಭೂ ಸ್ವಾಧೀನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಮಗಾರಿ ಮುಗಿಸಿದೆ. 2006ರ ಫೆ.7ರಂದು ಹಾಸನ-ಶ್ರವಣಬೆಳಗೊಳ ನಡುವೆ ರೈಲ್ವೆ ಸಂಚಾರ ಆರಂಭವಾಗಿತ್ತು.

ಆದರೆ, ಬೆಂಗಳೂರಿನಿಂದ ಹಾಸನಕ್ಕೆ ನೇರ ರೈಲು ಇರಲಿಲ್ಲ. ಹಾಸನಕ್ಕೆ ಪ್ರಯಾಣಿಸಬೇಕಾದರೆ ಬೆಂಗಳೂರಿನಿಂದ ಮೈಸೂರು, ಮೈಸೂರಿನಿಂದ ಹಾಸನಕ್ಕೆ ಹೋಗಬೇಕಾಗಿತ್ತು. ಅಲ್ಲದೆ, ಬೆಂಗಳೂರಿನಿಂದ ಅರಸೀಕೆರೆ, ಅರಸೀಕೆರೆಯಿಂದ ಹಾಸನಕ್ಕೆ ತಲುಪಬೇಕಾಗಿತ್ತು. ಇದರಿಂದ ಪ್ರಯಾಣದ ಅವಧಿ 2 ಗಂಟೆ ಜಾಸ್ತಿಯಾಗುತ್ತಿತ್ತು.  ಈಗ ಅಂತಿಮವಾಗಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರ ಕನಸಿನ ಯೋಜನೆ ಸಾಕಾರಗೊಂಡಿದ್ದು, ಇಂದಿನಿಂದ ಯಶವಂತಪುರದಿಂದ ಹಾಸನಕ್ಕೆ ನೇರ ರೈಲ್ವೆ ಸಂಚಾರ ಆರಂಭವಾಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ರೈಲ್ವೆ ಸಚಿವ ಸುರೇಶ್‍ಪ್ರಭು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಂದು ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದರು.   ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin