ಬಹುದಿನಗಳ ನಂತರ ಇಂದು ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

BJP
ಬೆಂಗಳೂರು,ಮೇ 18-ಪದಾಧಿಕಾರಿಗಳ ನೇಮಕಾತಿ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಎರಡು ಉಪಚುನಾವಣೆ ಸೋಲು ಸೇರಿದಂತೆ ಇತ್ಯಾದಿ ಕಾರಣಗಳಿಂದ ಹಾದಿಬೀದಿ ರಂಪವಾಗಿದ್ದ ಬಿಜೆಪಿ ನಾಯಕರು ಬಹುದಿನಗಳ ನಂತರ ಇಂದು ಒಗ್ಗಟ್ಟು ಪ್ರದರ್ಶಿಸಿದರು.  ಕಲ್ಪತರು ನಾಡು ತುಮಕೂರಿನಿಂದ ಆರಂಭಗೊಂಡ ಬಿಜೆಪಿ ಬರ ಅಧ್ಯಯನ ಮುನಿಸಿಕೊಂಡಿದ್ದ ಪಕ್ಷದ ನಾಯಕರ ಒಗ್ಗಟ್ಟಿನ ವೇದಿಕೆಯಾಗಿ ಪರಿಣಮಿಸಿತು.  ಕಳೆದ ಒಂದು ವರ್ಷದಿಂದ ಹಾವು ಮುಂಗೂಸಿಯಂತೆ ಹಾದಿಬೀದಿಯಲ್ಲಿ ಕಿತ್ತಾಡಿ ಪರಸ್ಪರ ಒಬ್ಬರನ್ನೊಬ್ಬರು ವಾಚಾಮಗೋಚರವಾಗಿ ಟೀಕಿಸಿಕೊಂಡು ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ಒದಗಿಸಿದ್ದರು.
ಬರ ಅಧ್ಯಯನ ಪ್ರವಾಸಕ್ಕೂ ಮುನ್ನ ಹಿಂದೆ ನಡೆದ ಎಲ್ಲ ಕಹಿ ಘಟನೆಗಳನ್ನು ಮರೆತು ಇನ್ನು ಮುಂದೆ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದರು.



ಒಟ್ಟು 26 ದಿನಗಳ ಕಾಲ ರಾಜ್ಯ ಪ್ರವಾಸ ಬಿಜೆಪಿಯ ಸಂಘಟನೆಯ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಬಿಕ್ಕಟ್ಟು ಮುಗಿದ ಅಧ್ಯಾಯ ಎಂಬ ಸಂದೇಶವನ್ನು ನೀಡಲು ಇದು ವೇದಿಕೆಯಾಗಿದೆ.  ಬೆಳಗ್ಗೆ 10 ಗಂಟೆಗೆ ಸರಿಯಾಗಿ ನಡೆದಾಡುವ ದೇವರು, ತ್ರಿವಿದ ದಾಸೋಹಿ, ಶತಾಯುಷಿ ಸಿದ್ದಂಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದರು.  ಪ್ರಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗಮಿಸಿದರೆ ನಂತರ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಮುಖಂಡರಾದ ಆರ್.ಅಶೋಕ್, ಸಿ.ಟಿ.ರವಿ, ಸೊಗಡು ಶಿವಣ್ಣ , ಎಸ್.ಎ.ರವೀಂದ್ರನಾಥ್, ಸುರೇಶ್‍ಗೌಡ, ಬಸವರಾಜು ಸೇರಿದಂತೆ ಅನೇಕರು ಶ್ರೀಗಳ ಆಶೀರ್ವಾದ ಪಡೆದುಕೊಂಡರು.  ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಎದ್ದು ಕಾಣುತ್ತಿತ್ತು. ಯಾವುದೇ ರೀತಿಯ ಅಸಮಾಧಾನ, ಸಿಟ್ಟು , ಸೆಡವು, ಗೊಂದಲಗಳು ಇರಲಿಲ್ಲ. ಪರಸ್ಪರ ಒಬ್ಬರನ್ನೊಬ್ಬರು ಹಸ್ತ ಲಾಘವ ಮಾಡಿಕೊಂಡು ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಮಂತ್ರವನ್ನು ಜಪಿಸಿದರು.

 

 

ಹುಸಿಯಾದ ನಿರೀಕ್ಷೆ: ಅದರಲ್ಲೂ ಬಿಜೆಪಿಯ ವಿವಾದದ ಕೇಂದ್ರ ಬಿಂದು ಕೆ.ಎಸ್.ಈಶ್ವರಪ್ಪ ಇಂದು ಪ್ರವಾಸಕ್ಕೆ ಯಡಿಯೂರಪ್ಪ ಅವರ ಜೊತೆ ಬರುತ್ತಾರೋ ಇಲ್ಲವೋ ಗೈರು ಹಾಜರಾಗುತ್ತಾರೋ ಎಂಬ ಕುತೂಹಲವಿತ್ತು. ಏಕೆಂದರೆ ಕಳೆದ ಮೂರು ದಿನಗಳಿಂದ ಈಶ್ವರಪ್ಪ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದರು. ಅಲ್ಲದೆ ಯಡಿಯೂರಪ್ಪ ಜೊತೆ ಅವರು ಪ್ರವಾಸ ತೆರಳದೆ ಪ್ರತ್ಯೇಕವಾಗಿ ಬರ ಅಧ್ಯಯನ ನಡೆಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ವರಿಷ್ಠರ ಸೂಚನೆಯೇ ಏನೋ ಈಶ್ವರಪ್ಪ ಇಂದು ತುಮಕೂರಿಗೆ ಆಗಮಿಸಿ ಯಡಿಯೂರಪ್ಪ ಜೊತೆ ಬರ ಅಧ್ಯಯನದಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದರು.  ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ನಂತರ ದಲಿತರ ಕೇರಿ ಹಾಗೂ ಗುಬ್ಬಿಗೆ ತೆರಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin